ಮಾಜಿ ಸಚಿವ ಕೃಷ್ಣ ಪಾಲೆಮಾರರ ಆರೋಪದಲ್ಲಿ ಹುರುಳಿಲ್ಲ : ಮೇಯರ್
ಮನಪಾದಲ್ಲಿ ಶೇ.98 ನೀರು ಬಳಕೆಯೋಗ್ಯ

ಮಂಗಳೂರು, ಜ.13: ಮಂಗಳೂರು ಮಹಾನಗರ ಪಾಲಿಕೆ ಪೂರೈಸುವ ನೀರು ಕುಡಿಯಲು ಯೋಗ್ಯವಲ್ಲ ಎಂದು ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್‌ರ ಆರೋಪದಲ್ಲಿ ಹುರುಳಿಲ್ಲ. ಅಧಿಕೃತ ಪ್ರಯೋಗಾಲಯದ ವರದಿಯಲ್ಲಿ ಶೇ.98ರಷ್ಟು ನೀರು ಬಳಕೆಯೋಗ್ಯವಾಗಿದೆ. ಉಳಿದ ಶೇ. 2ರಷ್ಟು ನೀರಿನ ಶುದ್ಧೀಕರಣಕ್ಕೆ ಕ್ರಮ ಜರಗಿಸಲಾಗುವುದು ಎಂದು ಮೇಯರ್ ಹರಿನಾಥ್ ಹೇಳಿದರು.
ಶುಕ್ರವಾರ ತನ್ನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾಲೆಮಾರ್ ಯಾವುದೇ ಖಾಸಗಿ ಪ್ರಯೋಗಾಲಯದಲ್ಲಿ ಕೆಲವು ಕಡೆಯ ನೀರಿನ ಸ್ಯಾಂಪಲ್ ಪರೀಕ್ಷೆಗೊಳಪಡಿಸಿ ಮಂಗಳೂರು ನಗರಕ್ಕೆ ಧಕ್ಕೆಯಾಗುವಂತಹ ಹೇಳಿಕೆ ನೀಡಬಾರದಿತ್ತು. ಒಂದು ವೇಳೆ ನೀರು ಬಳಕೆಯೋಗ್ಯವಲ್ಲ ಎಂದು ಕಂಡುಬಂದಿದ್ದರೆ ಅದನ್ನು ಆಡಳಿತದ ಜೊತೆ ಕೈ ಜೋಡಿಸಿ ಸಮಸ್ಯೆಯ ಪರಿಹಾರಕ್ಕೆ ಮುಂದಾಗಬೇಕಿತ್ತು. ಆದರೆ, ಅವರು ಏಕಾಏಕಿ ಆರೋಪ ಮಾಡಿದ್ದು ಸರಿಯಲ್ಲ ಎಂದರು.
ಪಾಲೆಮಾರ್ ನೀರಿನ ಬಗ್ಗೆ ಸಂಶಯ ವ್ಯಕ್ತಪಡಿಸಿದ ತಕ್ಷಣ ಪಾಲಿಕೆಯು ಬೇರೆ ಬೇರೆ ಕಡೆಯಿಂದ ನೀರಿನ ಮಾದರಿಯನ್ನು ಸಂಗ್ರಹಿಸಿ ಜಿಲ್ಲಾ ಸರಕಾರಿ ಪ್ರಯೋಗಾಲಯ ಮತ್ತು ಮೀನುಗಾರಿಕಾ ವಿವಿ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿ ವರದಿ ಪಡೆಯಲಾಗಿದೆ. ಯಾವುದೇ ನೀರಿನಲ್ಲೂ ‘ಕೋಲಿಫಾರ್ಮ್’ ಬ್ಯಾಕ್ಟೀರಿಯಾ ಇಲ್ಲ ಎಂಬುದು ದೃಢಪಟ್ಟಿದೆ.
ಪಾಲಿಕೆ ವ್ಯಾಪ್ತಿಯ 6 ಕಡೆ ಸಂಗ್ರಹಿಸಿದ ನೀರಿನ ಮಾದರಿಯಲ್ಲಿ ಈ ಅಂಶವಿರುವುದು ಬೆಳಕಿಗೆ ಬಂದಿದೆ. ಈ ಭಾಗದ ಒಳಚರಂಡಿ ಕೊಳವೆ ಮತ್ತು ಮ್ಯಾನ್‌ಹೋಲ್ ಕಾಮಗಾರಿ ನಡೆಯುತ್ತಿದೆ. ಜೆಸಿಬಿ ಯಂತ್ರದ ಮೂಲಕ ಕೆಲಸ ಮಾಡುವಾಗ ಒಳಚರಂಡಿ ಮತ್ತು ನೀರಿನ ಕೊಳವೆ ಒಡೆದು ಅಲ್ಲಿ ಕೋಲಿಫಾರ್ಮ್ ಬ್ಯಾಕ್ಟೀರಿಯಾ ಕಂಡು ಬಂದಿದೆ. ತಕ್ಷಣ ಅವುಗಳನ್ನು ದುರಸ್ತಿಪಡಿಸಿ ಶುದ್ಧ ಕುಡಿಯುವ ನೀರಿನ ಪೂರೈಕೆಯಲ್ಲಿ ತೊಂದರೆಯಾಗದಂತೆ ಕ್ರಮಜರಗಿಸಲಾಗಿದೆ. ಅಲ್ಲದೆ ಆಸುಪಾಸಿನ ವಸತಿಗೃಹಗಳಿಂದ ಕುಡಿಯುವ ನೀರನ್ನು ಮತ್ತೆ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಮೇಯರ್ ಹರಿನಾಥ್ ಹೇಳಿದರು.
ಕೃಷ್ಣ ಜೆ.ಪಾಲೆಮಾರ್ ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿದ್ದವರು. ಯಾವುದೋ ಖಾಸಗಿ ಪ್ರಯೋಗಾಲಯದಲ್ಲಿ ನೀರನ್ನು ಪರೀಕ್ಷಿಸಿ ನೀರು ಬಳಕೆಯೋಗ್ಯವಲ್ಲ ಎಂದು ಹೇಳಬಾರದಿತ್ತು. ಅಧಿಕೃತ ಪ್ರಯೋಗಾಲಯದಿಂದ ಮಾಡಿಸಿದ್ದರೆ ಅವರ ಹೇಳಿಕೆಗೆ ಮನ್ನಡೆ ನೀಡಬಹುದಾಗಿತ್ತು. ವಾಸ್ತವ ಅರಿಯದೆ ಹೇಳಿಕೆ ನೀಡಿದ್ದರಿಂದ ನಗರದ ಪ್ರತಿಷ್ಠೆಗೆ ಧಕ್ಕೆಯಾಗಿದೆ. ಹೊರಗಿನ ಜನರು ನಗರದಲ್ಲಿ ನೆಲೆಸಲು ಬರಲು ಹಿಂದೇಟು ಹಾಕಬಹುದು ಎಂದು ಶಾಸಕ ಜೆ.ಆರ್.ಲೋಬೊ ಅಭಿಪ್ರಾಯಪಟ್ಟರು.
ಕೃಷ್ಣಾಪುರ ವಿಶ್ವನಾಥ ದೇವಸ್ಥಾನ, ಕಾಟಿಪಳ್ಳ ಕೃಷ್ಣಾಪುರ 2ನೆ ಬ್ಲಾಕ್ ಮಸೀದಿ ಬಳಿ ಮತ್ತು 7ನೆ ಬ್ಲಾಕ್ ಕೃಷ್ಣಾಪುರ, ಪಡುಪದವು ಪ್ರದೇಶಗಳಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಈ ಸಂದರ್ಭ ಒಳಚರಂಡಿ ಮತ್ತು ನೀರಿನ ಕೊಳವೆ ಒಡೆದು ಕೋಲಿಫಾರಂ ಬ್ಯಾಕ್ಟೀರಿಯಾ ಕಂಡು ಬಂದಿದೆ. 55 ಕೋ.ರೂ. ವೆಚ್ಚದಲ್ಲಿ ಇಲ್ಲಿನ ರಸ್ತೆ ದುರಸ್ತಿ, ಚರಂಡಿ ನಿರ್ಮಾಣ ಇತ್ಯಾದಿ ಕಾಮಗಾರಿ ಮಾಡಲಾಗುತ್ತಿದೆ ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.
ತುಂಬೆ ವೆಂಟೆಡ್ ಡ್ಯಾಮ್‌ನಿಂದ ಹಳೆಯ 18 ಎಂಜಿಡಿ ರೇಚಕ ಸ್ಥಾವರದಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಅಲ್ಲಿಂದ ಪಂಪ್ ಮಾಡಿದ ನೀರನ್ನು ಬೆಂದೂರು ಮತ್ತು ಪಣಂಬೂರು ನೀರು ಶುದ್ಧೀಕರಣ ಕೇಂದ್ರಗಳಲ್ಲಿ ರ್ಯಾಪಿಡ್ ಸ್ಯಾಂಡ್‌ಬೆಡ್ ಫಿಲ್ಟರ್ ಮೂಲಕ ನೀರನ್ನು ಶುದ್ಧೀಕರಿಸಿ ಸೂಕ್ತ ಪ್ರಮಾಣದ ಕ್ಲೋರಿನೇಶನ್‌ನೊಂದಿಗೆ ನೀರಿನ ಗುಣಮಟ್ಟವನ್ನು ಕಾಪಾಡಿಕೊಂಡು ನೀರನ್ನು ಪೂರೈಸಲಾಗುತ್ತದೆ. ಎಲ್ಲ ಕೊಳವೆಗಳನ್ನು ಕಾಲಕಾಲಕ್ಕೆ ಪರಿಶೀಲಿಸಲಾಗುತ್ತದೆ. ಸ್ಕವರ್ ವಾಲ್ವ್‌ಗಳನ್ನು ಚಾಲನೆಗೊಳಿಸಿ ಕೊಳವೆಗಳಲ್ಲಿರುವ ಕಲ್ಮಶಗಳನ್ನು ಹೊರಗೆಡವಲಾಗುತ್ತದೆ.
ಕುಡ್ಸೆಂಪ್ ಯೋಜನೆಯಲ್ಲಿ ನಿರ್ಮಿಸಲಾದ 80 ಎಂಎಲ್‌ಡಿ ರೇಚಕ ಸ್ಥಾವರದಿಂದ ತುಂಬೆಯ ಮೇಲ್ಮಟ್ಟದ ಜಲಶುದ್ಧೀಗಾರ ಕೇಂದ್ರಕ್ಕೆ ಪಂಪ್ ಮಾಡಿಕೊಂಡು ಟ್ಯೂಬ್ ಸೆಟ್ಲರ್ಸ್ ಮತ್ತು ಕ್ಯಾರಿಫ್ಲಾಕುಲೇಟರ್ಸ್ ಮೂಲಕ ನೀರನ್ನು ಶುದ್ಧೀಕರಿಸಿದ ಬಳಿಕ ಪಡೀಲ್ ಜಲ ಸಂಗ್ರಹಗಾರಕ್ಕೆ ಪೂರೈಕೆ ಮಾಡಲಾಗುತ್ತದೆ. ಬಳಿಕ ಅಲ್ಲಿಂದ ಇತರ ಕಡೆ ನೀರನ್ನು ಸರಬರಾಜು ಮಾಡಲಾಗುತ್ತದೆ.
ಸುದ್ದಿಗೋಷ್ಠಿಯಲ್ಲಿ ಮನಪಾ ಸಚೇತಕ ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಲ್ಯಾನ್ಸಿ ಲಾಟ್ ಪಿಂಟೋ, ಕವಿತಾ ಸನಿಲ್, ಮನಪಾ ಆಯುಕ್ತ ಮುಹಮ್ಮದ್ ನಝೀರ್ ಉಪಸ್ಥಿತರಿದ್ದರು.







