ದೂರು ಪೆಟ್ಟಿಗೆಗಳನ್ನು ಬಳಸುವಂತೆ ಯೋಧರಿಗೆ ಸೇನಾ ಮುಖ್ಯಸ್ಥ ಜ| ಬಿಪಿನ್ ರಾವತ್ ಸೂಚನೆ

ಹೊಸದಿಲ್ಲಿ,ಜ.13: ತಮ್ಮ ಸೇವಾ ದುಃಸ್ಥಿತಿಗಳ ಬಗ್ಗೆ ಯೋಧರ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಭೂಸೇನೆಯ ಮುಖ್ಯಸ್ಥ ಜ| ಬಿಪಿನ್ ರಾವತ್ ಅವರು ಸಮಸ್ಯೆಗಳನ್ನು ಆಂತರಿಕವಾಗಿ ನಿಭಾಯಿಸುವ ಮಹತ್ವಕ್ಕೆ ಇಂದು ಒತ್ತು ನೀಡಿದರಲ್ಲದೆ, ಯೋಧರಿಂದ ದೂರುಗಳು ಅಥವಾ ಮರುಮಾಹಿತಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡುವ ಬದಲು ತನ್ನ ಕಚೇರಿಗೆ ನೇರವಾಗಿ ಕಳುಹಿಸುವಂತೆ ಸೂಚಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 12 ಲಕ್ಷಕ್ಕೂ ಅಧಿಕ ಸಿಬ್ಬಂದಿಗಳಿರುವ ಪಡೆಯಲ್ಲಿ ದೂರುಗಳಿದ್ದೇ ಇರುತ್ತವೆ. ಹೆಚ್ಚಿನ ಸಂದರ್ಭಗಳಲ್ಲಿ ದೂರುಗಳಿಗೆ ಕಾರಣ ಬೇರೆ ಏನೋ ಆಗಿರುತ್ತದೆ ಎಂದರು.
ಸಮಸ್ಯೆಗಳಿದ್ದರೆ ಸಾಮಾಜಿಕ ಮಾಧ್ಯಮಗಳ ಮೊರೆ ಹೋಗಬೇಡಿ. ಹಿರಿಯ ಅಧಿಕಾರಿಗಳಲ್ಲಿ ವಿಶ್ವಾಸವಿಡಿ ಎಂದು ಯೋಧರಿಗೆ ಕಿವಿಮಾತು ನುಡಿದ ರಾವತ್, ಸಾಮಾಜಿಕ ಮಾಧ್ಯಮ ಎರಡು ಅಲಗುಗಳಿರುವ ಖಡ್ಗದಂತೆ. ಕೆಲವೊಮ್ಮೆ ಅದು ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ ಎಂದರು.
ದೂರು ನೀಡುವ ಯೋಧರ ಹೆಸರುಗಳನ್ನು ವಿಚಾರಣೆ ಸಂದರ್ಭ ರಹಸ್ಯವಾಗಿ ಡಲಾಗುತ್ತದೆ ಮತ್ತು ಬಳಿಕ ಯಾವುದೇ ಪ್ರತೀಕಾರದ ಕ್ರಮದಿಂದ ರಕ್ಷಣೆ ನೀಡಲು ಅವರ ಹೆಸರುಗಳನ್ನು ಪ್ರಕರಣದಿಂದ ತೆಗೆದು ಹಾಕಲಾಗುತ್ತದೆ ಎಂದ ಅವರು, ಪ್ರತಿಯೊಬ್ಬ ಯೋಧನೂ ನಮಗೆ ಮುಖ್ಯವಾದ ವ್ಯಕ್ತಿಯಾಗಿದ್ದಾನೆ. ಯೋಧರು ತಮ್ಮ ಲಿಖಿತ ದೂರುಗಳನ್ನು ದೂರುಪೆಟ್ಟಿಗೆಗಳಲ್ಲಿಯೇ ಹಾಕಬೇಕು ಮತ್ತು ಈ ದೂರುಗಳನ್ನು ತನ್ನ ಕಚೇರಿಯೇ ನೇರವಾಗಿ ಕೈಗೆತ್ತಿಕೊಳ್ಳುತ್ತದೆ ಎಂದರು.
ಈ ವಾರದ ಆರಂಭದಲ್ಲಿ ಬಿಎಸ್‌ಎಫ್ ಯೋಧ ತೇಜ್ ಬಹಾದುರ ಯಾದವ್ ಅವರು ನಿಯಂತ್ರಣ ರೇಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತನ್ನಂತಹ ಯೋಧರಿಗೆ ಒದಗಿಸಲಾಗುತ್ತಿರುವ ಕಳಪೆ ಆಹಾರದ ಬಗ್ಗೆ ದೂರಿಕೊಂಡು ವೀಡಿಯೊಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು. ವೈರಲ್ ಆಗಿದ್ದ ಈ ವೀಡಿಯೊಗಳು ಸಾರ್ವಜನಿಕ ಆಕ್ರೋಶವನ್ನು ಸೃಷ್ಟಿಸಿದ್ದು, ಪತ್ರಿಕೆಗಳಲ್ಲಿ ಮುಖಪುಟದ ಸುದ್ದಿಯಾಗಿತ್ತು.
ಯೋಧರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಕ್ಕಾಗಿ ಮೇಲಧಿಕಾರಿಗಳು ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಸೇನೆಯ ಯೋಧ ಲಾನ್ಸ್‌ನಾಯಕ್ ಯಜ್ಞಪ್ರತಾಪ್ ಸಿಂಗ್ ಅವರು ನಿನ್ನೆ ಇನ್ನೊಂದು ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು.
ಪ್ರತ್ಯೇಕ ವೀಡಿಯೊವೊಂದರಲ್ಲಿ ಸಿಆರ್‌ಪಿಎಫ್ ಯೋಧ ಜೀತ್ ಸಿಂಗ್ ಅವರು, ಸೇನೆ ಮತ್ತು ಇತರ ಅರೆಮಿಲಿಟರಿ ಪಡೆಗಳ ನಡುವೆ ವೇತನ ಮತ್ತು ಇತರ ಸೌಲಭ್ಯಗಳಲ್ಲಿ ಸಮಾನತೆಗೆ ಆಗ್ರಹಿಸಿದ್ದರು.







