ನ್ಯೂಟೆಲ್ಲಾದಿಂದ ಕ್ಯಾನ್ಸರ್ ಅಪಾಯ !
ಯುರೋಪಿನ ಸೂಪರ್ ಮಾರ್ಕೆಟ್‌ಗಳಿಂದ ಗೇಟ್ ಪಾಸ್
.jpg)
ಲಂಡನ್, ಜ. 13: ಹ್ಯಾಝಲ್‌ನಟ್ ಮತ್ತು ಚಾಕೊಲೆಟ್ ಸ್ಪ್ರೆಡ್ ಮುಂತಾದ ತಮ್ಮ ಉತ್ಪನ್ನಗಳಲ್ಲಿ ಬಳಸುವ ತಾಳೆ ಎಣ್ಣೆ ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂಬ ಅಭಿಪ್ರಾಯವನ್ನು ‘ನ್ಯೂಟೆಲ’ ತಯಾರಕ ಸಂಸ್ಥೆ ಫೆರರೊ ಪ್ರಶ್ನಿಸಿದೆ.
ತೈಲದ ಖಾದ್ಯ ರೂಪದಲ್ಲಿ ಪತ್ತೆಯಾದ ಮಾಲಿನ್ಯಕಾರಕಗಳು ಕ್ಯಾನ್ಸರ್‌ಗೆ ಕಾರಣವಾಗಬಹುದಾಗಿದೆ ಎಂದು ಯುರೋಪಿಯನ್ ಆಹಾರ ಮಾನದಂಡಗಳ ಪ್ರಾಧಿಕಾರ ಮೇ ತಿಂಗಳಲ್ಲಿ ಎಚ್ಚರಿಸಿತ್ತು. ಈ ಉತ್ಪನ್ನಗಳನ್ನು ಅಲ್ಪ ಪ್ರಮಾಣದಲ್ಲಿ ತಿಂದರೂ ಮಕ್ಕಳಿಗೆ ಅಪಾಯಕಾರಿಯಾಗಬಹುದು ಎಂದು ಅದು ಎಚ್ಚರಿಸಿತ್ತು ಹಾಗೂ ಇದಕ್ಕೆ ಸಂಬಂಧಿಸಿ ನಿರ್ದಿಷ್ಟ ಅಂಕಿಸಂಖ್ಯೆಗಳು ಲಭ್ಯವಿಲ್ಲದ ಕಾರಣ ಯಾವುದೇ ಮಟ್ಟವನ್ನು ಸುರಕ್ಷಿತ ಎಂದು ಪರಿಗಣಿಸಲಾಗದು ಎಂದು ಹೇಳಿತ್ತು.
ಕ್ಯಾಡ್‌ಬರಿ ಚಾಕೊಲೆಟ್, ಕ್ಲೋವರ್ ಮತ್ತು ಬೆನ್ ಆ್ಯಂಡ್ ಜೆರಿಸ್ ಸೇರಿದಂತೆ ಮನೆಮಾತಾಗಿರುವ ನೂರಾರು ಅಹಾರ ಬ್ರಾಂಡ್‌ಗಳಲ್ಲಿ ತಾಳೆ ಎಣ್ಣೆ ಪತ್ತೆಯಾಗಿದೆ. ಆದರೆ, ಈವರೆಗೆ ನ್ಯೂಟೆಲ ಮಾತ್ರ ಗ್ರಾಹಕರ ವಿರೋಧವನ್ನು ಎದುರಿಸಿದೆ.
ಗ್ರಾಹಕರು ತಾಳೆ ಎಣ್ಣೆ ಇಲ್ಲದ ಪರ್ಯಾಯ ಉತ್ಪನ್ನಗಳನ್ನು ಖರೀದಿಸಲು ಆರಂಭಿಸಿದ ಹಿನ್ನೆಲೆಯಲ್ಲಿ 2016ರ ಆಗಸ್ಟ್ ವೇಳೆಗೆ ನ್ಯೂಟೆಲ ಮಾರಾಟದಲ್ಲಿ 3 ಶೇಕಡ ಕುಸಿತ ಕಂಡಿತ್ತು.
ದೇಶದ ಅತ್ಯಂತ ದೊಡ್ಡ ಸೂಪರ್ ಮಾರ್ಕೆಟ್ ಗುಂಪು ‘ಕೂಪ್’ ಮುಂಜಾಗರೂಕತೆಯ ಕ್ರಮವಾಗಿ ಮೇ ತಿಂಗಳಲ್ಲಿ ತನ್ನ ಅಂಗಡಿಯಲ್ಲಿದ್ದ ತಾಳೆ ಎಣ್ಣೆಯನ್ನೊಳಗೊಂಡ 200 ಉತ್ಪನ್ನಗಳನ್ನು ತೆರವುಗೊಳಿಸಿತು. ಆದರೆ, ಅದರಲ್ಲಿ ನ್ಯೂಟೆಲ ಇರಲಿಲ್ಲ.
ಇದಕ್ಕೆ ಪ್ರತಿಯಾಗಿ, ತನ್ನ ಉತ್ಪನ್ನಗಳು ಸಂಪೂರ್ಣವಾಗಿ ಸುರಕ್ಷಿತವಾಗಿವೆ ಎಂಬುದಾಗಿ ಗ್ರಾಹಕರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವಾಗಿ ಫೆರರೊ ಜಾಹೀರಾತು ಅಭಿಯಾನವೊಂದನ್ನು ಆರಂಭಿಸಿತು.
ತಾಳೆ ಎಣ್ಣೆಯನ್ನು 200 ಡಿಗ್ರಿ ಸೆ.ನಷ್ಟು ಕಾಯಿಸಿದರೆ ಅಪಾಯ
ಆರೋಗ್ಯ ಕಳವಳಕ್ಕೆ ಕಾರಣವಾಗಿರುವುದು ‘ಗ್ಲೈಸಿಡಿಲ್ ಫ್ಯಾಟಿ ಆ್ಯಸಿಡ್ ಎಸ್ಟರ್ಸ್ (ಜಿಇ)’ ಎಂಬ ಸಂಯುಕ್ತ. ಇದು ತಾಳೆ ಎಣ್ಣೆಯನ್ನು 200 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ಉಷ್ಣತೆಯಲ್ಲಿ ಕಾಯಿಸಿದಾಗ ಈ ಸಂಯುಕ್ತ ಉತ್ಪತ್ತಿಯಾಗುತ್ತದೆ. ಹೆಚ್ಚಿನ ಆಹಾದ ಉತ್ಪನ್ನಗಳನ್ನು ಸಾಮಾನ್ಯವಾಗಿ 200 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ಉಷ್ಣತೆಯಲ್ಲಿ ಕಾಯಿಸಲಾಗುತ್ತದೆ.
‘‘ಗ್ಲೈಸಿಡಿಲ್ ಕ್ಯಾನ್ಸರ್‌ಕಾರಕ ಎನ್ನುವುದಕ್ಕೆ ಸಾಕಷ್ಟು ಪುರಾವೆಯಿದೆ. ಹಾಗಾಗಿ, ಕಾಂಟಮ್ ಸಮಿತಿಯು ಜಿಇಗೆ ಸುರಕ್ಷಿತ ಮಿತಿಯನ್ನು ನಿಗದಿಪಡಿಸಿಲ್ಲ’’ ಎಂದು ಕಾಂಟಮ್ ಅಧ್ಯಕ್ಷೆ ಡಾ. ಹೆಲ್ ನಟ್ಸನ್ ಮೇ ತಿಂಗಳಲ್ಲಿ ಹೇಳಿದ್ದಾರೆ.
ತಾಳೆ ಎಣ್ಣೆಯನ್ನು ಪರೀಕ್ಷಿಸಲು ಯುರೋಪಿಯನ್ ಆಹಾರ ಮಾನದಂಡಗಳ ಪ್ರಾಧಿಕಾರವು ಕಾಂಟಮ್ ಸಮಿತಿಯನ್ನು ರಚಿಸಿತ್ತು.







