ಜಿಎಸ್‌ಟಿ ಜಾರಿ ಹಿನ್ನೆಲೆಯಲ್ಲಿ ನೋಂದಣಿ ಕಡ್ಡಾಯ : ವಾಣಿಜ್ಯ ತೆರಿಗೆ ಇಲಾಖೆ
ಮಂಗಳೂರು, ಜ.13: ದೇಶಾದ್ಯಂತ ಸರಕು ಮತ್ತು ಸೇವಾ ತೆರಿಗೆ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ನೋಂದಾಯಿತ ವರ್ತಕರು ವ್ಯಾಪಾರ ವಹಿವಾಟುಗಳನ್ನು ಸುಗಮವಾಗಿ ನಡೆಸಲು ಅನುಕೂಲವಾಗುವಂತೆ ಜ.15ರೊಳಗೆ ಜಿಎಸ್‌ಟಿ ಅಡಿಯಲ್ಲಿ ದಾಖಲಾತಿ ಮಾಡಿಕೊಳ್ಳುವ ಅಗತ್ಯವಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತೆ ಎಚ್.ಜಿ. ಪವಿತ್ರಾ ತಿಳಿಸಿದ್ದಾರೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೌಲ್ಯವರ್ಧಿತ ತೆರಿಗೆ, ಮನರಂಜನಾ ತೆರಿಗೆ, ವಿಲಾಸ ತೆರಿಗೆಯಡಿ ನೋಂದಾಯಿತ ಎಲ್ಲ ವರ್ತಕರು ಸರಕು ಮತ್ತು ಸೇವಾ ತೆರಿಗೆ ಅಡಿ ದಾಖಲಾತಿ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕರ್ನಾಟಕ ತೆರಿಗೆ ಇಲಾಖೆಯು ಇ-ಉಪಕ್ರಮಗಳ ಅನುಷ್ಠಾನ ಮತ್ತು ವಿದ್ಯುನ್ಮಾನ ಸೇವೆಗಳನ್ನು ಒದಗಿಸಿ ವರ್ತಕರು ಸುಲಲಿತ ವ್ಯಾಪಾರ ಉದ್ದಿಮೆಗಳ ನಿರ್ವಹಣೆಗೆ ಅನುವು ಮಾಡಿಕೊಟ್ಟಿರುವುದರಲ್ಲಿ ರಾಷ್ಟ್ರದಲ್ಲಿಯೇ ಮುಂಚೂಣಿಯಲ್ಲಿದೆ. ಇದಕ್ಕೆ ವರ್ತಕರ ಸ್ಪಂದನೆ ಅಭೂತಪೂರ್ವ ಎಂದು ಹೇಳಿದರು.
ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಈಗಾಗಲೇ ಶೇ.60ರಷ್ಟು ವರ್ತಕರು ಜಿಎಸ್‌ಟಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ. ಇನ್ನೂ ಶೇ.40ರಷ್ಟು ವರ್ತಕರು ನೋಂದಾಯಿಸಿಕೊಳ್ಳಬೇಕಾಗಿದೆ. ಜ.15ರವರೆಗೆ ನೋಂದಾಯಿಸಿಕೊಳ್ಳಲು ಅವಕಾಶವನ್ನು ಕಲ್ಪಿಸಲಾಗಿದೆ. ಅವಳಿ ಜಿಲ್ಲೆಗಳಲ್ಲಿ 34,291 ವರ್ತಕರು ಈಗಾಗಲೇ ಟಿನ್ ನಂಬರ್‌ನ್ನು ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
ವರ್ತಕರು ತಾತ್ಕಾಲಿಕ ಐಡಿ ಮತ್ತು ಪಾಸ್‌ವರ್ಡ್(Provissional ID and Password) ಗಳನ್ನು ಜಾಲತಾಣ http://vat.kar.nic.in www.gst.gov.in ನ್ನು ಸಂಪರ್ಕಿಸಬಹುದು. ಈ ತಾತ್ಕಾಲಿಕ ಐಡಿ ಮತ್ತು ಪಾಸ್‌ವರ್ಡ್‌ಗಳನ್ನು ಉಪಯೋಗಿಸಿ ನಿಗದಿಪಡಿಸಿರುವ ಕಾಲಮಿತಿಯಲ್ಲಿ ಜಾಲತಾಣದಲ್ಲಿ ದಾಖಲಾತಿ ಪ್ರಕ್ರಿಯೆಯಿಂದ ಜಿಎಸ್‌ಟಿಗೆ ವರ್ಗಾವಣೆ ಹೊಂದಬೇಕು. ಪಾನ್(PAN ) ಅಪ್‌ಡೇಷನ್ ಆಗಿರದಿದ್ದಲ್ಲಿ ಅಥವಾ ಜಿಎಸ್‌ಟಿ ಪಡೆಯಲು ಕೂಡಲೇ ಪಾನ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ ಅಪ್‌ಡೇಟ್ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಮಾಹಿತಿಗಾಗಿ ಸಮೀಪದ ಡಿ.ವಿ.ಒ./ಎಲ್.ವಿ.ಒ./ ಕೆನಾರಾ ಚೇಂಬರ್ ಆಫ್ ಕಾಮರ್ಸ್, ಅಥವಾ ಎಚ್.ಜಿ. ಪವಿತ್ರಾ (9448076940), ಬಾಲಚಂದ್ರ (9845258823)ನ್ನು ಸಂಪರ್ಕಿಸಬಹುದು.
ಸುದ್ದಿಗೋಷ್ಠಿಯಲ್ಲಿ ಜಾರಿ ವಿಭಾಗದ ಮುಖ್ಯಸ್ಥ ಬಿ.ಎ. ನಾಣಿಯಪ್ಪ, ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಉಪ ಆಯುಕ್ತರಾದ ಕೃಷ್ಣ, ಶಂಭು ಭಟ್, ಬಾಲಚಂದ್ರ ಮತ್ತಿತರರಿದ್ದರು.







