ಸೇವೆಗಳ ಸ್ಥಗಿತಕ್ಕೆ ಖಾಸಗಿ ಆಸ್ಪತ್ರೆಗಳ ನಿರ್ಧಾರ
ಸರಕಾರದಿಂದ ಸರಕಾರಿ ಯೋಜನೆಗಳಡಿ ಚಿಕಿತ್ಸೆ ವೆಚ್ಚ ಪಾವತಿ ವಿಳಂಬ ಹಿನ್ನೆಲೆ
ಮಂಗಳೂರು, ಜ.13: ಸರಕಾರದ ಯೋಜನೆಗಳಡಿಯಲ್ಲಿ ಚಿಕಿತ್ಸೆ ಕೊಡಲಾಗಿದ್ದ ರೋಗಿಗಳ ವೆಚ್ಚಗಳ ಪಾವತಿಯು ಸಕಾಲದಲ್ಲಿ ಆಗಿಲ್ಲ. ಚಿಕಿತ್ಸೆ ವೆಚ್ಚಗಳು ಒಪ್ಪಂದದ ಪ್ರಕಾರ ಪಾವತಿಯಾಗದೆ ಇರುವುದರಿಂದ ಸಪ್ಲಾಯರ್‌ಗಳ ಪಾವತಿ, ವೇತನ ಪಾವತಿಗೆ ಸಮಸ್ಯೆಯಾಗಿದ್ದು, ಈ ಸಮಸ್ಯೆ ಬಗೆಹರಿಯುವವರೆಗೆ ಖಾಸಗಿ ಆಸ್ಪತ್ರೆಗಳು ತಮ್ಮ ಸೇವೆಯನ್ನು ನಿಲ್ಲಿಸಲಿದೆ ಎಂದು ನರ್ಸಿಂಗ್ ಹೋಂ ಆ್ಯಂಡ್ ಹಾಸ್ಪಿಟಲ್ ಅಸೋಸಿಯೇಶನ್‌ನ ಅಧ್ಯಕ್ಷ ಡಾ. ಯೂಸುಫ್ ಕುಂಬ್ಳೆ ತಿಳಿಸಿದ್ದಾರೆ.
ಶುಕ್ರವಾರ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆಡರೇಶನ್ ಆಫ್ ಹಾಸ್ಪಿಟಲ್ ಅಸೋಸಿಯೇಶನ್ ತನ್ನ ಸದಸ್ಯ ಆಸ್ಪತ್ರೆಗಳ ಪ್ರತಿನಿಧಿಸಿ ರಾಜ್ಯ ಸರಕಾರ ಹಾಗೂ ಸಂಪೂರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ಗೆ ಸರಕಾರದ ಸಾಮಾಜಿಕ ಯೋಜನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಖಾಸಗಿ ಆರೋಗ್ಯ ಸಂಸ್ಥೆಗಳು ತೊಂದರೆಯನ್ನು ಅನುಭವಿಸುತ್ತಿರುವುದರಿಂದ ಈ ಕ್ರಮಕ್ಕೆ ಮುಂದಾಗಲಾಗಿದೆ ಎಂದು ಹೇಳಿದರು.
ಸರಕಾರ ಮತ್ತು ಸಂಪೂರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಆದ್ಯತೆಗಳಿಗೆ ಸಮರ್ಪಕವಾಗಿ ಸ್ಪಂದಿಸದೆ ಇರುವುದರಿಂದ ಜ.16ರಿಂದ ವಾಜಪೇಯಿ ಆರೋಗ್ಯ ಶ್ರೀಯೋಜನೆ, ರಾಜೀವ್ ಆರೋಗ್ಯ ಭಾಗ್ಯ ಯೋಜನೆ, ಜ್ಯೋತಿ ಸಂಜೀವಿನಿ ಯೋಜನೆಗಳ ಸೇವೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗುವುದು. ಆದರೆ ರಾಷ್ಟ್ರೀಯ ಬಿಮಾ ಯೋಜನೆ (ಆರ್‌ಬಿಎಸ್‌ಕೆ), ಮುಖ್ಯಮಂತ್ರಿ ಸಾಂತ್ವನ ಯೋಜನೆಗಳ ಸೇವೆ ಚಾಲ್ತಿಯಲ್ಲಿರುತ್ತವೆ. ಈಗಾಗಲೇ ಅಂಕಾಲಜಿ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವವರಿಗೆ ಪೂರ್ಣ ಚಿಕಿತ್ಸೆಯನ್ನು ನೀಡಲಾಗುವುದು ಎಂದು ಯೂಸುಫ್ ಕುಂಬ್ಳೆ ಹೇಳಿದರು.
ಕಳೆದ 7 ವರ್ಷಗಳಿಂದ ಚಿಕಿತ್ಸೆ ದರಗಳಲ್ಲಿ ಯಾವುದೇ ಪರಿಷ್ಕರಣೆ ಮಾಡಿಲ್ಲ. ವೆಚ್ಚಗಳ ಚಿಕಿತ್ಸೆಯ ದರಗಳು ಕಡಿಮೆ ಮಾಡಿದ್ದಲ್ಲಿ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆಯನ್ನು ಕೊಡಲು ತೊಂದರೆಯಾಗುವುದು. ಸರಕಾರವು 2009ರ ಆ್ಯಂಟಿ ಅಕ್ರೋಸಿಟಿ ಆ್ಯಕ್ಟ್‌ನ್ನು ಪಾಲಿಸಿ ಆರೋಗ್ಯ ಸಿಬ್ಬಂದಿಗೆ ಸಮರ್ಪಕ ರಕ್ಷಣೆ ಒದಗಿಸಬೇಕೆಂದು ಒತ್ತಾಯಿಸಿದರು.







