ಪುತ್ತೂರಿನಲ್ಲಿ ‘ವಿವೇಕ ಉದ್ಯೋಗ ಮೇಳ’
10020 ಮಂದಿ ಸಂದರ್ಶನಕ್ಕೆ ಹಾಜರು-3232 ಮಂದಿ ಶಾರ್ಟ್‌ಲಿಸ್ಟ್‌ಗೆ
ಪುತ್ತೂರು , ಜ.13 : ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಶುಕ್ರವಾರ ವಿವೇಕಾನಂದ ಕಾಲೇಜು ಕ್ಯಾಂಪಸ್‌ನಲ್ಲಿ ನಡೆದ ಬೃಹತ್ ವಿವೇಕ ಉದ್ಯೋಗ ಮೇಳದಲ್ಲಿ ಆನ್ ಲೈನ್ ಹಾಗೂ ಆಫ್ ಲೈನ್ ಮೂಲಕ ಒಟ್ಟು 15, 112 ಮಂದಿ ನೋಂದಾವಣೆ ಮಾಡಿಕೊಂಡಿದ್ದು, ಈ ಪೈಕಿ 10,020 ಮಂದಿ ಸಂದರ್ಶನಕ್ಕೆ ಆಗಮಿಸಿದ್ದರು.
ತಾಂತ್ರಿಕ, ತಾಂತ್ರಿಕೇತರ ಹಾಗೂ ಇತರ ಎಂಬ ಮೂರು ವರ್ಗಗಳಲ್ಲಿ ಸಂದರ್ಶನ ನಡೆಸಲಾಗಿದ್ದು, ಈ ಮೂರೂ ವಿಭಾಗಗಳನ್ನು ಒಳಗೊಂಡು ಒಟ್ಟು 3232 ಮಂದಿಯನ್ನು ಶಾರ್ಟ್‌ಲಿಸ್ಟ್ ಮಾಡಲಾಗಿದೆ.
ವಿವೇಕಾನಂದ ವಿದ್ಯಾವರ್ಧಕ ಸಂಘವು ಬಯಸಿದಂತೆ ಗ್ರಾಮಾಂತರ ಭಾಗದ ಅನೇಕ ಮಂದಿ ಉದ್ಯೋಗ ವಂಚಿತರಿಗೆ ಈ ಉದ್ಯೋಗ ಮೇಳ ಬದುಕಿನ ಹಾದಿಯನ್ನು ತೆರೆದಿದೆ. ಉದ್ಯೋಗ ಮೇಳದ ಜೊತೆಯಲ್ಲೇ ಸ್ವ-ಉದ್ಯೋಗ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸುವುದ ಮೂಲಕ ಸ್ವಂತ ಉದ್ದಿಮೆ ಆರಂಭಿಸುವವರಿಗೆ ಪ್ರೋತ್ಸಾಹ, ಮಾಹಿತಿ ನೀಡಲಾಯಿತು. ಬೆಂಗಳೂರಿನ ಲಘು ಭಾರತಿ ಸಂಸ್ಥೆಯವರು ಹಾಗೂ ಉಜಿರೆಯ ರುಡ್ ಸೆಟ್ ಸಂಸ್ಥೆಯವರು ಸ್ವ ಉದ್ಯೋಗ ವಿವರಗಳನ್ನು ನೀಡಿದರು.
ಸ್ವಉದ್ಯೋಗವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಪುತ್ತೂರಿನ ಐಶ್ವರ್ಯ ಬ್ಯೂಟಿ ಪಾರ್ಲರ್‌ನ ಐಶ್ವರ್ಯ, ಶಶಿ ಸ್ಟುಡಿಯೋದ ಶಶಿಧರ್, ರೆಕ್ಸಿನ್ ಬ್ಯಾಗ್ ತಯಾರಕ ಶಂಕರನಾರಾಯಣ ಭಟ್ ಹಾಗೂ ಅಸ್ತ್ರ ಒಲೆ ತಯಾರಕ ಸತ್ಯಮೂರ್ತಿ ಬಾಳಿಲ ಅವರನ್ನು ಗುರುತಿಸಿ ಗೌರವಿಸಲಾಯಿತು. ಈ ಸ್ವ ಉದ್ಯೋಗ ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸುವಲ್ಲಿ ವಿವೇಕಾನಂದ ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಡಾ.ವಿಘ್ನೇಶ್ವರ ವರ್ಮುಡಿ ಅವರು ವಿಶೇಷ ಶ್ರಮ ವಹಿಸಿದ್ದರು.
ಅಭ್ಯರ್ಥಿಗಳ ಅಭಿಪ್ರಾಯ
ನಾನು ಮೊದಲಬಾರಿ ಸಂದರ್ಶನ ಮಾಡಿದಾಗ ಹೊಸದಾಗಿ ಆನುಭವ ಸಿಕ್ಕಿದೆ ಇನ್ನು ಮುಂದೆ ಯಾವುದೇ ಸಂದರ್ಶನವನ್ನು ಎದುರಿಸಲು ಸಿದ್ಧನಿದ್ಧೇನೆ. - ಹರಿಪ್ರಸಾದ್, ಬೆಳ್ತಂಗಡಿ
ನಾನು ಹಲವು ಬಾರಿ ಇಂಟರ್‌ವ್ಯೆವ್ ಎದುರಿಸಿದ್ದೇನೆ, ಅವೆಲ್ಲವುಕ್ಕಿಂತಲೂ ಇದು ಸೂಪರ್ ಅನುಭವ - ಸುಷ್ಮಾ ಬಿ.
ಇದು ನನ್ನ ಮೊದಲ ಅನುಭವ, ಉತ್ತಮವಾಗಿದೆ- ಶ್ರೀಲಕ್ಷ ಕೆ ವಿ
ಉದ್ಯೋಗ ಮೇಳದಂತಹ ಕಾರ್ಯಕ್ರಮವು ಉದ್ಯೋಗಾಂಕಾಕ್ಷಿಗಳಿಗೆ ಉತ್ತಮ ವೇದಿಕೆಯಾಗಿದೆ. ನಮಗೆ ಸಂದರ್ಶನದ ಅನುಭವವಾಯಿತು. ಇದು ಹೀಗೆಯೇ ಮುಂದುವರೆಯಲಿ- ಅಮೃತ ಕೃಷ್ಣ ಎನ್







