ನರ್ಸರಿ ಪ್ರವೇಶ: ವಿಚಾರಣೆಯಿಂದ ದೂರ ಸರಿದ ಹೈಕೋರ್ಟ್ ನ್ಯಾಯಮೂರ್ತಿ

ಹೊಸದಿಲ್ಲಿ,ಜ.13: ದಿಲ್ಲಿ ಉಚ್ಚ ನ್ಯಾಯಾಲಯದ ನ್ಯಾ.ವಿ.ಕೆ.ರಾವ್ ಅವರು, ತನಗೆ ಶಾಲೆಗೆ ಹೋಗುತ್ತಿರುವ ಮಗನಿದ್ದಾನೆ ಎಂಬ ಕಾರಣವನ್ನು ನೀಡಿ 2017-18ನೇ ಸಾಲಿಗೆ ನರ್ಸರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಆಪ್ ಸರಕಾರದ ನಿಯಮಾವಳಿಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆುಂದ ಶುಕ್ರವಾರ ದೂರ ಸರಿದರು.
ತಮಗೂ ಶಾಲೆಗೆ ಹೋಗುತ್ತಿರುವ ಮಕ್ಕಳಿದ್ದಾರೆ. ನ್ಯಾ.ರಾವ್ ಅವರು ವಿಚಾರಣೆ ನಡೆಸುವುದಕ್ಕೆ ತಮ್ಮ ಆಕ್ಷೇಪವಿಲ್ಲ ಎಂದು ಅರ್ಜಿದಾರರ ಪರ ವಕೀಲರು ನಿವೇದಿಸಿಕೊಂಡರೂ ಅವರು ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಇದೇ ಪೀಠವು ವಿಚಾರಣೆ ನಡೆಸುವುದಕ್ಕೆ ತನ್ನ ಆಕ್ಷೇಪವೂ ಇಲ್ಲ ಎಂಬ ದಿಲ್ಲಿ ಸರಕಾರದ ಪರ ವಕೀಲರ ಮಾತೂ ನ್ಯಾ.ರಾವ್ ಅವರ ನಿಲುವನ್ನು ಬದಲಿಸಲಿಲ್ಲ.
ದಿಲ್ಲಿ ಅಭಿವೃದ್ಧಿ ಪ್ರಾಧಿಕಾರ(ಡಿಡಿಎ)ದಿಂದ ನಿವೇಶನಗಳನ್ನು ಪಡೆದಿರುವ ಈ ನರ್ಸರಿಗಳಿಗೆ ಅವುಗಳು ತಮ್ಮ ಪ್ರವೇಶಗಳನ್ನು ಸ್ಥಳೀಯ ವಿದ್ಯಾರ್ಥಿಗಳಿಗೆ ಸೀಮಿತಗೊಳಸಿಬೇಕು ಎಂದು ಮಂಜೂರಾತಿ ಪತ್ರದಲ್ಲಿ ಶರತ್ತು ವಿಧಿಸಿದ್ದು, ಇದನ್ನು ಪ್ರಶ್ನಿಸಿ ಅವು ನ್ಯಾಯಾಲಯದ ಮೆಟ್ಟಿಲನ್ನೇರಿವೆ.





