‘ನಾನು ಇಲ್ಲಿ ಉದ್ಯೋಗದಲ್ಲಿರುವ ಅಮೆರಿಕನ್ ಪ್ರಜೆ ’: ಎಚ್-1ಬಿ ವೀಸಾ ವಿವಾದದ ಕುರಿತು ಇನ್ಫಿ ಮುಖ್ಯಸ್ಥ ಸಿಕ್ಕಾ ಹೇಳಿಕೆ

ಹೊಸದಿಲ್ಲಿ,ಜ.13: ಎಚ್-1ಬಿ ವೀಸಾಗಳ ಮೇಲೆ ಇನ್ನಷ್ಟು ನಿರ್ಬಂಧಗಳನ್ನು ಹೇರಲು ಅಮೆರಿಕವು ಮುಂದಾಗಿರುವ ಹಿನ್ನೆಲೆಯಲ್ಲಿ ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಸೃಷ್ಟಿಯಾಗಿರುವ ಕಳವಳಗಳ ನಡುವೆಯೇ ಪ್ರತಿಷ್ಠಿತ ಐಟಿ ಕಂಪನಿ ಇನ್ಫೋಸಿಸ್‌ನ ಮುಖ್ಯಸ್ಥ ವಿಶಾಲ್ ಸಿಕ್ಕಾ ಅವರು, ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವ್ಯವಹಾರ ಕೌಶಲವು ಆ ರಾಷ್ಟ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ಐಟಿ ಕಂಪನಿಗಳ ಯಾವುದೇ ಹಿನ್ನಡೆಗೆ ಅವಕಾಶ ನೀಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಮೆರಿಕದಲ್ಲಿ ಉನ್ನತ ತಂತ್ರಜ್ಞಾನ ಹುದ್ದೆಗಳಿಗೆ ಭಾರತದಂತಹ ದೇಶಗಳ ನುರಿತ ನೌಕರರ ನೇಮಕಕ್ಕೆ ಅವಕಾಶ ಕಲ್ಪಿಸಿರುವ ಎಚ್-1ಬಿ ವೀಸಾ ಯೋಜನೆಯಲ್ಲಿ ಪ್ರಮುಖ ಬದಲಾವಣೆಗಳನ್ನು ತರುವ ಮಸೂದೆಯೊಂದನ್ನು ಕಳೆದ ವಾರ ಅಲ್ಲಿಯ ಕಾಂಗ್ರೆಸ್‌ನಲ್ಲಿ ಪುನರ್ ಮಂಡಿಸಲಾಗಿದೆ. ಹೀಗಾಗಿ ಎಚ್-1ಬಿ ವೀಸಾಗಳ ಮೇಲೆ ನಿರ್ಬಂಧಗಳು ಇನ್ನಷ್ಟು ಹೆಚ್ಚುವ ಸಾಧ್ಯತೆಗಳಿವೆ. ಜೊತೆಗೆ ಎಚ್-1ಬಿ ವೀಸಾ ಹೊಂದಿರುವ ಉದ್ಯೋಗಿಗಳ ಕನಿಷ್ಠ ವಾರ್ಷಿಕ ವೇತನವನ್ನು ಈಗಿನ ಸುಮಾರು 60,000 ಡಾ.ಗಳಿಂದ 100,000 ಡಾ.ಗಳಿಗೆ ಹೆಚ್ಚಿಸುವ ಪ್ರಸ್ತಾವನೆಯನ್ನೂ ಈ ಮಸೂದೆಯು ಹೊಂದಿದ್ದು, ಇದು ಸಹಜವಾಗಿಯೇ ಭಾರತೀಯ ಕಂಪನಿಗಳ ಲಾಭಾಂಶವನ್ನು ತಗ್ಗಿಸಲಿದೆ ಎಂದು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ತನ್ನ ಕಂಪನಿಯ ಮೂರನೇ ತ್ರೈಮಾಸಿಕ ವರದಿ ಮಂಡನೆಯ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡುತ್ತಿದ್ದ ಸಿಕ್ಕಾ, ಜಾರಿಗೊಳ್ಳಲಿರುವ ನೀತಿಯ ಸ್ವರೂಪವನ್ನಾಧರಿಸಿ ನೂತನ ವೀಸಾ ವ್ಯವಸ್ಥೆಯು ಇನ್ಫೋಸಿಸ್‌ನಂತಹ ಭಾರತೀಯ ಐಟಿ ಕಂಪನಿಗಳ ಮೇಲೆ ಪರಿಣಾಮ ಬೀರಲಿದೆ ಎಂಬ ಅಭಿಪ್ರಾಯಕ್ಕೆ ಸಹಮತ ವ್ಯಕ್ತಪಡಿಸಿದರು. ಆದರೆ,ನೂತನ ಟ್ರಂಪ್ ಆಡಳಿತವು ವ್ಯವಹಾರ ಮತ್ತು ಉದ್ಯಮಶೀಲತೆ ಸ್ನೇಹಿಯಾಗಿರುವುದರಿಂದ ನಾನು ಆ ಬಗ್ಗೆ ಹೆಚ್ಚು ಚಿಂತಿತನಾಗಿಲ್ಲ ಎಂದರು.
ಟ್ರಂಪ್ ಅವರ ವೃತ್ತಿಜೀವನವನ್ನು ನೋಡಿದರೆ ಅವರು ಸದಾ ಹೊಸತನಕ್ಕೆ ತುಡಿಯುತ್ತಿರುವ ಉದ್ಯಮಿಯಾಗಿದ್ದಾರೆ. ಹೀಗಾಗಿ ಅವರ ಆಡಳಿತವು ಇದನ್ನೇ ಆದ್ಯತೆಯನ್ನಾಗಿಸಿ ನಡೆಯಲಿದೆ ಎಂದು ನಾನು ನಿರೀಕ್ಷಿಸಿದ್ದೇನೆ. ಇನ್ಫೋಸಿಸ್‌ನಲ್ಲಿಯೂ ಹೊಸತನಕ್ಕೆ ತುಡಿಯುವ ವಾತಾವರಣವಿದೆ ಎಂದ ಅವರು, ವೀಸಾ ನೀತಿ ಏನೇ ಇರಲಿ...ಸ್ಥಳೀಯ ಪ್ರತಿಭೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿರುವುದು ಸೂಕ್ತವಾಗಿ ರುತ್ತದೆ ಮತ್ತು ನಾವು ಇದರಲ್ಲಿ ನಂಬಿಕೆಯಿರಿಸಿದ್ದೇವೆ ಎಂದರು.
ನಾನೇ ಇದಕ್ಕೊಂದು ಉದಾಹರಣೆ,ಅಮೆರಿಕದ ಪ್ರಜೆಯಾಗಿರುವ ನಾನೇ ಭಾರತೀಯ ಕಂಪನಿಯಲ್ಲಿ ಉನ್ನತ ಉದ್ಯೋಗದಲ್ಲಿರುವ ಸ್ಥಳೀಯನಾಗಿದ್ದೇನೆ ಎಂದ ಅವರು,ನಾವು ಸ್ಥಳೀಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೇಮಿಸಿಕೊಳ್ಳುವುದು ಅಗತ್ಯವಾಗಬಹುದು. ನಾನು ಇನ್ಫೋಸಿಸ್ ಸೇರಿದಾಗಿನಿಂದ ಈ ಬಗ್ಗೆೆ ಹೆಚ್ಚಿನ ಗಮನವನ್ನು ಹರಿಸಿದ್ದೇನೆ. ಅಮೆರಿಕದಲ್ಲಿ ಉದ್ಯೋಗ ಸೃಷ್ಟಿಗೆ ನಾವು ಸಂಪೂರ್ಣ ಬದ್ಧರಾಗಿದ್ದೇವೆ. ನಾವು ಕಾರ್ಯಾಚರಿಸುತ್ತಿರುವ ಆಸ್ಟ್ರೇಲಿಯಾ,ಯುರೋಪ್ ಇತ್ಯಾದಿ ಕಡೆಗಳಲ್ಲೂ ನಾವು ಇದೇ ಬದ್ಧತೆಯನ್ನು ಹೊಂದಿದ್ದೇವೆ ಎಂದರು.







