ರಶ್ಯ ಅಮೆರಿಕಕ್ಕೆ ಪ್ರಮುಖ ಬೆದರಿಕೆ : ಸಂಭಾವ್ಯ ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್

ವಾಶಿಂಗ್ಟನ್, ಜ. 13: ಅಮೆರಿಕದ ಹಿತಾಸಕ್ತಿಗಳಿಗೆ ರಶ್ಯ ಪ್ರಮುಖ ಬೆದರಿಕೆಯಾಗಿದೆ ಎಂದು ರಕ್ಷಣಾ ಕಾರ್ಯದರ್ಶಿ ಹುದ್ದೆಗೆ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಆಯ್ಕೆಯಾಗಿರುವ ನಿವೃತ್ತ ಜನರಲ್ ಜೇಮ್ಸ್ ಮ್ಯಾಟಿಸ್ ಹೇಳಿದ್ದಾರೆ.
ನೂತನ ಸರಕಾರದ ವಿವಿಧ ಹುದ್ದೆಗಳಿಗೆ ಟ್ರಂಪ್ ಆಯ್ಕೆ ಮಾಡಿರುವ ವ್ಯಕ್ತಿಗಳ ಕಾಂಗ್ರೆಸ್ ವಿಚಾರಣೆಯ ಮೂರನೆ ದಿನವಾದ ಗುರುವಾರ ಅವರು ಹೇಳಿಕೆ ನೀಡಿದರು. ಮ್ಯಾಟಿಸ್ ಮತ್ತು ನೂತನ ಸರಕಾರದಲ್ಲಿ ಕೇಂದ್ರೀಯ ಗುಪ್ತಚರ ಸಂಸ್ಥೆ (ಸಿಐಎ)ಯನ್ನು ಮುನ್ನಡೆಸಲು ಆಯ್ಕೆಯಾಗಿರುವ ಮೈಕ್ ಪಾಂಪಿಯೊ ಅವರಿಗೆ ಕೇಳಲಾದ ಪ್ರಶ್ನೆಗ ಪ್ರಮುಖ ವಿಷಯ ರಶ್ಯವೇ ಆಗಿತ್ತು.
ಮ್ಯಾಟಿಸ್ ಮತ್ತು ಪಾಂಪಿಯೊ ಇಬ್ಬರೂ ಟ್ರಂಪ್‌ರ ಕೆಲವು ನೀತಿಗಳು ಮತ್ತು ಚುನಾವಣಾ ಪ್ರಚಾರದ ವೇಳೆ ಅವರು ನೀಡಿದ್ದ ಹೇಳಿಕೆಗಳಿಂದ ದೂರ ಸರಿದರು.
‘‘ಅಮೆರಿಕದ ಹಿತಾಸಕ್ತಿಗಳಿಗೆ ರಶ್ಯ ಒಂದನೇ ಬೆದರಿಕೆಯಾಗಿದೆ’’ ಎಂದು ಮ್ಯಾಟಿಸ್ ಹೇಳಿದರು.
‘‘ರಶ್ಯದ ಅಧ್ಯಕ್ಷ ಪುಟಿನ್‌ರೊಂದಿಗಿನ ಸಹಕಾರದ ಕ್ಷೇತ್ರಗಳ ಬಗ್ಗೆ ನನ್ನ ನಿರೀಕ್ಷೆಗಳು ತುಂಬಾ ಕಡಿಮೆಯಿದೆ’’ ಎಂದರು.
ರಕ್ಷಣಾ ಕಾರ್ಯದರ್ಶಿ ಹುದ್ದೆಗೆ ಮ್ಯಾಟಿಸ್ ಆಯ್ಕೆಯಾಗಿರುವುದು ಖಚಿತವಾದರೆ, ಅವರ ನಿಲುವುಗಳು ಅವರ ನೂತನ ಧಣಿ ಟ್ರಂಪ್‌ರ ನಿಲುವುಗಳಿಗಿಂತ ಭಿನ್ನವಾಗಿರುತ್ತದೆ.







