ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭಾರೀ ಅವ್ಯಹಾರದ ಆರೋಪ : ಎಸಿಬಿ ಯಿಂದ ದಾಳಿ
ಬೆಳ್ತಂಗಡಿ, ಜ.13 : ಗ್ರಾ.ಪಂ. ವೊಂದರಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭಾರೀ ಅವ್ಯಹಾರ ನಡೆದಿದೆ ಎಂದು ನಾಗರಿಕರೊಬ್ಬರು ನೀಡಿದ ದೂರಿನ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳದವರು ಶುಕ್ರವಾರ ದಾಳಿ ನಡೆಸಿದ ವಿದ್ಯಮಾನ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಮಿತ್ತಬಾಗಿಲು ಗ್ರಾ.ಪಂ.ನಲ್ಲಿ 2012 ರಿಂದ 2016 ರವರೆಗಿನ ಅವಧಿಯಲ್ಲಿ ನರೇಗಾ ಯೋಜನೆಯಡಿಯಲ್ಲಿ ಪಂ. ಉಪಾಧ್ಯಕ್ಷ, ಸದಸ್ಯರು ಹಾಗು ಅಭಿವೃದ್ಧಿ ಅಧಿಕಾರಿ ಸೇರಿ ಗೋಲ್ ಮಾಡಿದ್ದು ನಿಜವಾದ ಫಲಾನುಭವಿಗಳಿಗೆ ಅನ್ಯಾಯ ಆಗಿದೆ ಎಂದು ಸ್ಥಳೀಯ ಮಂಜುಳಾ ಎಂಬುವರು ಎಸಿಬಿಗೆ ದೂರು ನೀಡಿದ್ದರು.
ಇವರ ದೂರಿನ ವಿಚಾರದಲ್ಲಿ ಪರಿಶೀಲಿಸಲು ಮತ್ತು ತನಿಖೆ ನಡೆಸಲು ಎಸಿಬಿಯವರು ಮಧ್ಯಾಹ್ನ ಪಂ.ಗೆ ಆಗಮಿಸಿದ್ದರು. ಪಂ.ನ ಹಿಂದಿನ ಪಿಡಿಓ ಪ್ರಸ್ತುತ ಉಪ್ಪಿನಂಗಡಿಯಲ್ಲಿ ಪಿಡಿಓ ಆಗಿರುವ ನವೀನ್ ಎಂಬುವರು ಅವ್ಯವಹಾರ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಅಲ್ಲದೆ ಪಿಡಿಓ ಅವರು ಪಂ. ಉಪಾಧ್ಯಕ್ಷೆ ಮಮತಾ ಅವರ ಮತ್ತು ಅವರ ಮಕ್ಕಳು, ಹಿರಿಯರ, ಸದಸ್ಯರ ಹೆಸರಿನಲ್ಲಿ ನಕಲಿ ಬಿಲ್‌ಗಳನ್ನು ಸೃಷ್ಟಿಸಿ ನರೇಗಾಕ್ಕೆ ಬಂದಿರುವ ಲಕ್ಷಾಂತರ ರೂ.ಗಳನ್ನು ಕಬಳಿಸಿದ್ದಾರೆ ಎಂದು ದೂರು ನೀಡಲಾಗಿತ್ತು ಎನ್ನಲಾಗಿದೆ.
ಈ ಬಗ್ಗೆ ಕೆಲ ಸಮಯದ ಹಿಂದೆಯೇ ಎಸಿಗೆ, ಡಿಸಿಗೆ ಕೂಡ ದೂರು ನೀಡಲಾಗಿತ್ತು. ಇದನ್ನರಿತ ಪಿಡಿಓ ಯೋಜನೆಗೆ ಸಂಬಂಧಿಸಿದ ಬಿಲ್ ಹಾಗೂ ಫೈಲ್‌ಗಳನ್ನು ತಪ್ಪಿಸಿಟ್ಟಿದ್ದು ದಾಳಿ ನಡೆಸಿದ ಅಧಿಕಾರಿಗಳಿಗೆ ಸಿಗಲಿಲ್ಲ ಎನ್ನಲಾಗಿದೆ. ದಾಳಿ ಸಂದರ್ಭ ದೂರುದಾರರು ಹಾಗೂ ಅವ್ಯಹಾರ ನಡೆಸಿದವರ ಮಧ್ಯೆ ಭಾರೀ ವಾಗ್ವಾದ ನಡೆದಿತ್ತು ಎಂದು ಹೇಳಲಾಗಿದೆ.
ಅಧಿಕಾರಿಗಳು ವಾರದೊಳಗೆ ಯೋಜನೆಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ನೀಡಬೇಕು ಎಂದು ಪಿಡಿಓಗೆ ಆದೇಶಿಸಿದ್ದು, ಸತ್ಯಾಸತ್ಯತೆ ಏನು ಎಂಬುದು ತನಿಖೆಯ ಬಳಿಕ ಗೊತ್ತಾಗಲಿದೆ.
ಎಸಿಬಿ ಡಿವೈಎಸ್ಪಿ ಸುಧೀರ್ ಹೆಗ್ಡೆ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಯೋಗಿಶ್, ಸಿಪಿಐ ದಿನಕರ ಶೆಟ್ಟಿ, ಎಸ್‌ಐ ಸಣ್ಣಪ್ಪ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದರು.







