ಅಪಘಾತಕ್ಕೆ ವೇಗದ ಚಾಲನೆ ಕಾರಣ: ನ್ಯಾ.ಸಿ.ಡಿ ಪ್ರಕಾಶ್
ಸಾಗರ, ಜ.13: ಬದಲಾದ ದಿನಮಾನಗಳಲ್ಲಿ ವಾಹನ ಅಪಘಾತ ಹೆಚ್ಚುತ್ತಿದೆ. ಮದ್ಯಪಾನ, ಅತೀ ವೇಗವಾಗಿ ವಾಹನ ಚಾಲನೆ ಮಾಡುವುದೇ ಅಪಘಾತದ ಸಂಖ್ಯೆ ಹೆಚ್ಚಳವಾಗಲು ಕಾರಣವಾಗಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಸಿ.ಡಿ.ಪ್ರಕಾಶ್ ತಿಳಿಸಿದರು.
ಇಲ್ಲಿನ ನೆಹರೂ ಮೈದಾನದಲ್ಲಿ ಶುಕ್ರವಾರ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 28ನೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹವನ್ನು ಉದ್ಘಾಟಿಸಿ, ರಸ್ತೆ ಸಪ್ತಾಹ ಕುರಿತ ಜಾಗೃತಿ ಕರಪತ್ರವನ್ನು ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು. ನಮ್ಮಲ್ಲಿ ದಿನೇದಿನೇ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ವಾಹನ ಸಂಖ್ಯೆ ಹೆಚ್ಚಳದ ಹಿಂದೆಯೇ ಅಪಘಾತ, ಸಾವುನೋವಿನ ಸಂಖ್ಯೆಯೂ ಮಿತಿಮೀರುತ್ತಿದೆ. ಇದನ್ನು ನಿಯಂತ್ರಿಸುವ ಹೊಣೆಗಾರಿಕೆ ಎಲ್ಲರ ಮೇಲೆ ಇದೆ. ಪೋಷಕರು ಶಾಲಾಕಾಲೇಜುಗಳಲ್ಲಿ ಓದುತ್ತಿರುವ ಮಕ್ಕಳಿಗೆ ಮೋಟಾರ್ ಬೈ ಸೇರಿದಂತೆ ಇತರ ವಾಹನಗಳನ್ನು ಕೊಡಿಸುವಾಗ ಎಚ್ಚರಿಕೆ ವಹಿಸಬೇಕು. ಪರವಾನಿಗೆ ಇಲ್ಲದೆ ವಾಹನ ಚಾಲನೆ ಮಾಡಿ, ಅಪಘಾತ ಸಂಭವಿಸಿ ನ್ಯಾಯಾಲಯಕ್ಕೆ ಬಂದರೆ ಹೆಚ್ಚಿನ ದಂಡ ವಿಧಿಸುವ ಎಚ್ಚರಿಕೆ ನೀಡಿದರು.
ಉಪವಿಭಾಗಾಧಿಕಾರಿ ಡಿ.ಎಂ.ಸತೀಶಕುಮಾರ್ ಮಾತನಾಡಿ, ಬಹುತೇಕ ಸಂದರ್ಭದಲ್ಲಿ ಅವಸರವೇ ಅಪಘಾತಕ್ಕೆ ಕಾರಣವಾಗುತ್ತದೆ. ಸಂಚಾರ ನಿಯಮ ಪರಿಪಾಲನೆ ಮಾಡುವುದರಿಂದ ಅಪಾಯದಿಂದ ದೂರ ಇರಬಹುದು. ಮಾದಕ ದ್ರವ್ಯ, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು ಅಪಾಯಕ್ಕೆ ಆಹ್ವಾನ ಕೊಟ್ಟಂತೆ. ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಹನ ಚಾಲನೆ ಮಾಡಬೇಡಿ. ಅನೇಕ ಸಂದರ್ಭದಲ್ಲಿ ಅಪಘಾತ ನಡೆದಾಗ ಸಂಭವಿಸುವ ಸಾವುನೋವಿನಿಂದ ನಮ್ಮನ್ನು ನಂಬಿಕೊಂಡವರು ಸಂಕಷ್ಟ ಅನುಭವಿಸುತ್ತಾರೆ. ಇದನ್ನು ವಾಹನ ಚಲಾಯಿಸುವವರು ನೆನಪಿನಲ್ಲಿ ಇರಿಸಿಕೊಳ್ಳಬೇಕು ಎಂದರು.
ಶಿವಮೊಗ್ಗ ವಿಭಾಗದ ಸಾರಿಗೆ ಇಲಾಖೆಯ ಜಂಟಿ ಆಯುಕ್ತ ಶಿವರಾಜ್ ಬಿ. ಪಾಟೀಲ್, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ಬಿ.ದೇವರಾಜ್, ನಗರ ಠಾಣೆ ಸರ್ಕಲ್ ಇನ್‌ಸ್ಸೆೆಕ್ಟರ್ ಬಿ.ಎಲ್.ಜನಾ ರ್ನ್, ಸಿವಿಲ್ ಸರ್ಜನ್ ಡಾ. ಪ್ರಕಾಶ್ ಬೋಸ್ಲೆ, ವಾಸುದೇವಬಿ.ಎನ್. ಇನ್ನಿತರರು ಹಾಜರಿದ್ದರು.
ಕವಿತಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಅಂಜನಪ್ಪ ನಿರೂಪಿಸಿ ದರು. ನಂತರ ನಗರದ ಪ್ರಮುಖ ಬೀದಿಗಳಲ್ಲಿ ವಿದ್ಯಾರ್ಥಿಗಳು, ಆಟೋ ಚಾಲಕರು, ವಿವಿಧ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ಜಾಗೃತಿ ಜಾಥಾವನ್ನು ನಡೆಸಲಾಯಿತು.







