ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆಗೆ ಸುಪಾರಿ
ಮೂವರು ರೌಡಿಗಳ ಸಹಿತ ಎಂಟು ಜನರ ಬಂಧನ
ಶಿವಮೊಗ್ಗ, ಜ. 13: ನಗರದ ರಿಯಲ್ ಎಸ್ಟೇಟ್ ಉದ್ಯಮಿಯೋರ್ವರ ಹತ್ಯೆಗೆ ಸುಪಾರಿ ನೀಡಿದ್ದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹತ್ಯೆಗೆ ಸುಪಾರಿ ನೀಡಿದ್ದ ಆರೋಪದ ಮೇರೆಗೆ ಶಿವಮೊಗ್ಗದ ಐವರು ಆರೋಪಿಗಳು ಹಾಗೂ ಹತ್ಯೆ ಮಾಡಲು ಸುಪಾರಿ ಪಡೆದಿದ್ದ ಬೆಂಗಳೂರು ಹಾಗೂ ಶಿವಮೊಗ್ಗದ ಮೂವರು ರೌಡಿಗಳನ್ನು ತುಂಗಾನಗರ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ರೌಡಿಗಳಿಂದ ಒಂದು ಪಿಸ್ತೂಲ್, ಮೂರು ಜೀವಂತ ಗುಂಡುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರಿನ ರೌಡಿ ಶೀಟರ್ ಬಾಂಬೆ ಸಲೀಮ್ (40), ಶಿವಮೊಗ್ಗದ ರೌಡಿ ಶೀಟರ್ ಎಂಕೆಕೆ ರಸ್ತೆಯ ನಿವಾಸಿ ಸಾತು ಯಾನೆ ಸಾದಿಕ್ (42), ಟಿಪ್ಪುನಗರದ ರೌಡಿ ಶೀಟರ್ ಹಾಗೂ ಕಳವು ಕೃತ್ಯ ನಡೆಸುತ್ತಿದ್ದ ಜಮೀರ್ ಯಾನೆ ಬಚ್ಚಾ (48) ಬಂಧಿತ ರೌಡಿ ಶೀಟರ್‌ಗಳೆಂದು ಗುರುತಿಸಲಾಗಿದೆ. ಇದರಲ್ಲಿ ಸಾತು ಯಾನೆ ಸಾದಿಕ್ ಶಿವಮೊಗ್ಗ ಕಾರಾಗೃಹದಲ್ಲಿದ್ದು, ಅಲ್ಲಿಯೇ ಕುಳಿತು ಸಂಚು ರೂಪಿಸಿದ್ದ. ಉಳಿದಂತೆ ಅಬ್ದುಲ್ ಅಝೀಝ್(48), ಯಾರೀಸ್‌ವುಲ್ಲಾಖಾನ್(32), ಇಮ್ತಿಯಾಝ್ ಖಾನ್ (62), ನದೀಂ (42) ಹಾಗೂ ಮುಹಮ್ಮದ್ ಸಮೀವುಲ್ಲಾ (32) ಎಂಬ ಆರೋಪಿಗಳು ರಿಯಲ್ ಎಸ್ಟೇಟ್ ಉದ್ಯಮಿಯ ಹತ್ಯೆಗೆ ಸುಪಾರಿ ನೀಡಿದವರೆಂದು ಗುರುತಿಸಲಾಗಿದೆ. ಹತ್ಯೆಗೆ ಸುಪಾರಿ ನೀಡಿದವರಲ್ಲಿ ಇನ್ನೂ ಹಲವು ಆರೋಪಿಗಳಿದ್ದು, ಅವರೆಲ್ಲರೂ ತಲೆಮರೆಸಿಕೊಂಡಿದ್ದಾರೆ.
ಇವರ ಬಂಧನಕ್ಕೆ ಪೊಲೀಸರು ಕ್ರಮಕೈಗೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ ಅವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಇ. ವಿ. ಗಂಗಾಧರಪ್ಪ, ತುಂಗಾನಗರ ಠಾಣೆ ಸಬ್ ಇನ್‌ಸ್ಪೆಕ್ಟರ್ ಬಿ. ಸಿ. ಗಿರೀಶ್ ಮತ್ತವರ ಸಿಬ್ಬಂದಿ ಸಂದೀಪ್, ಮರ್ದನ್, ಯಶವಂತ್, ರಮೇಶ್‌ನಾಯ್ಕೆ ಅವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳಕಿಗೆ ಬಂದಿದ್ದು ಹೇಗೆ?: ಇತ್ತೀಚೆಗೆ ಶ್ರೀರಂಗಪಟ್ಟಣ ಪೊಲೀಸರು ಹನಿ ಟ್ರಾಪ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ರೌಡಿ ಶೀಟರ್ ಬಾಂಬೆ ಸಲೀಮ್‌ನನ್ನು ಬಂಧಿಸಿದ್ದರು. ಈ ವೇಳೆ ಆತನ ಬಳಿ ಪಿಸ್ತೂಲ್, ಗುಂಡು ಪತ್ತೆಯಾಗಿತ್ತು. ಇದರಿಂದ ಅಲರ್ಟ್ ಆದ ಶ್ರೀರಂಗಪಟ್ಟಣ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ ವೇಳೆ ಶಿವಮೊಗ್ಗದ ವ್ಯಕ್ತಿಯೋರ್ವರ ಹತ್ಯೆಗೆ ಸುಪಾರಿ ಪಡೆದಿದ್ದು, ಈ ಹಿನ್ನೆಲೆಯಲ್ಲಿ ರಿವಾಲ್ವಾರ್ ಇಟ್ಟುಕೊಂಡಿರುವುದಾಗಿ ತಿಳಿಸಿದ್ದ. ಈ ಕುರಿತಂತೆ ಶಿವಮೊಗ್ಗ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು.
ಇದರ ಆಧಾರದ ಮೇಲೆ ಕಾರ್ಯಪ್ರವೃತರಾದ ಇನ್‌ಸ್ಪೆಕ್ಟರ್ ಇ.ವಿ. ಗಂಗಾಧರಪ್ಪ ಹಾಗೂ ಸಬ್ ಇನ್‌ಸ್ಪೆಕ್ಟರ್ ಬಿ.ಸಿ. ಗಿರೀಶ್ ನೇತೃತ್ವದ ತಂಡವು ಬಾಂಬೆ ಸಲೀಂನನ್ನು ತಮ್ಮ ವಶಕ್ಕೆ ಪಡೆದುಕೊಂಡರು. ವಿಚಾರಣೆಯ ವೇಳೆ ಆರೋಪಿಯು ಶಿವಮೊಗ್ಗದ ರೌಡಿ ಶೀಟರ್, ಪ್ರಸ್ತುತ ನಗರದ ಕಾರಾಗೃಹದಲ್ಲಿರುವ ರೌಡಿ ಶೀಟರ್ ಸಾತು ಯಾನೆ ಸಾದಿಕ್ ಹಾಗೂ ಹೊರಗಡೆಯಿದ್ದ ಜಮೀರ್ ಬಚ್ಚಾ ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆಗೆ ಸೂಚಿಸಿದ್ದ ವಿಷಯ ಬಾಯ್ಬಿಟ್ಟಿದ್ದ. ಇದರ ಆಧಾರದ ಮೇಲೆ ತುಂಗಾನಗರ ಠಾಣೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ನಗರದಲ್ಲಿಯೇ ಜಮೀರ್ ಬಚ್ಚಾನನ್ನು ಬಂಧಿಸಿದ್ದರು, ಆತನ ಬಳಿಯು ಗುಂಡುಗಳು ಪತ್ತೆಯಾಗಿದ್ದವು. ತದನಂತರ ಕಾರಾಗೃಹದಲ್ಲಿದ್ದ ಸಾತು ಯಾನೆ ಸಾದಿಕ್‌ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದರು. ಈ ವೇಳೆ ಸುಪಾರಿ ಕೊಟ್ಟಿದ್ದ ವ್ಯಕ್ತಿಗಳ ವಿವರವನ್ನು ಆರೋಪಿಗಳು ತಿಳಿಸಿದ್ದು, ಅದರಂತೆ ಪೊಲೀಸರು ಸುಪಾರಿ ಕೊಟ್ಟಿದ್ದ ವ್ಯಕ್ತಿಗಳನ್ನು ಬಂಧಿಸಿದ್ದರು.
ಹತ್ಯೆಗೆ ರೆಡಿಯಾಗಿತ್ತು ಪ್ಲಾನ್...!
ಶಿವಮೊಗ್ಗ ಕಾರಾಗೃಹದಲ್ಲಿದ್ದ ಸಾತು ಯಾನೆ ಸಾದಿಕ್‌ನಿಂದ ಪಡೆದ ಸುಪಾರಿಯಿಂದ ರೌಡಿ ಗಳಾದ ಬಾಂಬೆ ಸಲೀ
್ ಹಾಗೂ ಜಮೀರ್ ಬಚ್ಚಾ ಕಲಬುರಗಿಯಿಂದ ಪಿಸ್ತೂಲ್ ಹಾಗೂ ಗುಂಡುಗಳನ್ನು ಖರೀದಿ ಮಾಡಿ ತಂದಿದ್ದರು. ಹತ್ಯೆ ಮಾಡಬೇಕಾದ ರಿಯಲ್ ಎಸ್ಟೇಟ್ ಉದ್ಯಮಿಯ ಚಲನವಲನಗಳ ಮಾಹಿತಿ ಕಲೆ ಹಾಕಿದ್ದರು. ಅವರು ಓಡಾಡುತ್ತಿದ್ದ ಸ್ಥಳಗಳ ಮಾಹಿತಿ ಸಂಗ್ರಹಿಸಿದ್ದರು. ಹತ್ಯೆಗೆ ಮುಹೂರ್ತ ಫಿ
ಕ್ಸ್ ಮಾಡಬೇಕಾದ ಹಂತದಲ್ಲಿಯೇ ಬಾಂಬೆ ಸಲೀಮನು ಹನಿಟ್ರಾಪ್ ಪ್ರಕರಣದಲ್ಲಿ ಶ್ರೀರಂಗಪಟ್ಟಣ ಪೊಲೀಸರಿಗೆ ಸೆರೆ ಸಿಕ್ಕಿದ್ದ. ಇದರಿಂದ ಶಿವಮೊಗ್ಗದಲ್ಲಿ ನಡೆಯಬಹುದಾಗಿದ್ದ ಉದ್ಯಮಿಯೋರ್ವರ ಸುಪಾರಿ ಹತ್ಯೆಯೊಂದು ತಪ್ಪಿದಂತಾಯಿತು.
ಕ್ರಿಮಿನಲ್ಸ್‌ಗಳ ನಿದ್ದೆಗೆಡಿಸಿದ ಇನ್‌ಸ್ಪೆಕ್ಟರ್ ಗಂಗಾಧರಪ್ಪ, ಪಿಎಸ್ಸೈ ಗಿರೀಶ್
ಇನ್‌ಸ್ಪೆೆಕ್ಟರ್ ಇ.ವಿ.ಗಂಗಾಧರಪ್ಪ ಹಾಗೂ ಸಬ್ ಇನ್‌ಸ್ಪೆಕ್ಟರ್ ಬಿ.ಸಿ.ಗಿರೀಶ್ ಅವರು ತಮ್ಮ ಕಾರ್ಯವೈಖರಿಯ ಮೂಲಕ ಶಿವಮೊಗ್ಗದ ಕ್ರಿಮಿನಲ್ಸ್‌ಗಳ ನಿದ್ದೆಗೆಡುವಂತೆ ಮಾಡಿದ್ದಾರೆ. ಈ ಇಬ್ಬರು ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿಯು ಕೇವಲ ಶಿವಮೊಗ್ಗ ನಗರ ಮಾತ್ರವಲ್ಲದೆ ಇಡೀ ರಾಜ್ಯದ ಗಮನ ಸೆಳೆದಿದೆ. ಉಳಿದ ಆರೋಪಿಗಳ ಬಂಧನಕ್ಕೆ ಶೋಧ
ಉದ್ಯಮಿಯ ಹತ್ಯೆಗೆ ಸುಪಾರಿ ನೀಡಿದ್ದವರಲ್ಲಿ ಇದೀಗ ಐವರನ್ನು ಪೊಲೀಸರು ಬಂಧಿಸಿದ್ದು, ಇನ್ನೂ ಹಲವರು ತಲೆಮರೆಸಿಕೊಂಡಿದ್ದಾರೆ. ಇವರ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.







