ಸಾಂಸ್ಕೃತಿಕ ಕಲೆಗಳು ವೃತ್ತಿಯಾಗಿ ಬದಲಾಗಿವೆ: ಸಚಿವೆ ಉಮಾಶ್ರೀ

ಮಡಿಕೇರಿ, ಜ.13: ದೇಶೀಯ ಸಂಸ್ಕೃತಿಯಲ್ಲಿ ಕೊಡವ ಸಂಸ್ಕೃತಿ ವಿಶಿಷ್ಟವಾಗಿದ್ದು, ಮಕ್ಕಳಿಗೆ ಕೊಡವ ಸಂಸ್ಕೃತಿ ಹಾಗೂ ಕಲೆಗಳ ಬಗ್ಗೆ ಪರಿಚಯಿಸಬೇಕಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಹೇಳಿದರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ಶುಕ್ರವಾರ ನಡೆದ ಮಕ್ಕಳ ಕೊಡವ ಜನಪದ ಸಾಂಸ್ಕೃತಿಕ ನಮ್ಮೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕೊಡವ ಪ್ರಾಚೀನ ಸಂಸ್ಕೃತಿಯನ್ನು ಪ್ರೀತಿ ಹಾಗೂ ಗೌರವದಿಂದ ಕಾಣಬೇಕು ಎಂದು ಉಮಾಶ್ರೀ ಅವರು ಸಲಹೆ ಮಾಡಿದರು.
ಕಲೆಗಳಲ್ಲಿ ಪ್ರಮುಖವಾಗಿ ವಾದ್ಯ, ನೃತ್ಯ, ಹಾಡುಗಾರಿಕೆ ಹೀಗೆ ನಾನಾ ರೀತಿಯ ಕಲೆಗಳು ಸಂಸ್ಕೃತಿ, ಪರಂಪರೆಯನ್ನು ಬಿಂಬಿಸಿದರೆ, ಮತ್ತೊಂದು ರೀತಿಯಲ್ಲಿ ವೃತ್ತಿಯಾಗಿಯೂ ಬದಲಾಗಿದೆ. ಹಾಗೆಯೇ ಬದುಕಿಗೆ ಪೂರಕವಾಗಿದೆ ಎಂಬುದನ್ನು ಮರೆಯುವಂತಿಲ್ಲ ಎಂದು ಅಭಿಪ್ರಾಯಪಟ್ಟರು.
ಸ್ಥಳೀಯ ಭಾಷೆ, ಸಂಸ್ಕೃತಿ, ಕಲೆಗಳನ್ನು ಮಕ್ಕಳಿಗೂ ತಿಳಿಸಿದಾಗ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿಬೆಳೆಸಲು ಸಾಧ್ಯ ಎಂದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿ ಅಧ್ಯಕ್ಷ, ಬಿದ್ದಾಟಂಡ ಎಸ್.ತಮ್ಮಯ್ಯ ಮಾತನಾಡಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿ ವತಿಯಿಂದ ಕಳೆದ ಮೂರು ವರ್ಷಗಳಲ್ಲಿ ಕವಿಗೋಷ್ಠಿ, ಮಹಿಳಾ ಹಬ್ಬ, ಮಕ್ಕಳ ಹಬ್ಬ, ಕೃಷಿ ಹಬ್ಬ ಹೀಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕೊಡವ ಸಂಸ್ಕೃತಿ ಕಲೆಗಳನ್ನು ಉಳಿಸಿ ಬೆಳೆಸಲು ಶ್ರಮಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು. ಈಗಾಗಲೇ 23 ಶಾಲೆಯ ವಿದ್ಯಾರ್ಥಿಗಳಿಗೆ ಕೊಡವ ಉಡುಪು ನೀಡಲಾಗಿದೆ. ಪ್ರಸಕ್ತ ವರ್ಷದಲ್ಲಿ ಸುಮಾರು 86 ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಕೊಡವ ಜನಾಂಗದಲ್ಲಿ 18 ಮೂಲ ನಿವಾಸಿಗಳಿದ್ದು, ಈ ಮೂಲ ನಿವಾಸಿ ಕೊಡವ ಸಮಾಜಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತದೆ. ಕೊಡವ ಜೀವನ ಪದ್ಧತಿ ಬಗ್ಗೆ 13 ವಿಷಯಗಳಲ್ಲಿ ಸಾಕ್ಷ್ಯಚಿತ್ರ ನಿರ್ಮಾಣ ಮಾಡಲು ಮುಂದಾಗಿದೆ ಎಂದು ಬಿ.ಎಸ್.ತಮ್ಮಯ್ಯ ಅವರು ತಿಳಿಸಿದರು. ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್.ದೇವಯ್ಯ ಮಾತನಾಡಿ, ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕೊಡವ ಸಾಂಸ್ಕೃತಿಕ ಕೇಂದ್ರ ತೆರೆಯಲು ಚಿಂತನೆ ಮಾಡಲಾಗಿದ್ದು, ಇದಕ್ಕಾಗಿ ಅಗತ್ಯ ಸಹಕಾರ ನೀಡುವಂತೆ ಕನ್ನಡ ಮತ್ತು ಸಂಸ್ಕೃತಿ ಸಚಿವರಲ್ಲಿ ಮನವಿ ಮಾಡಿದರು. ಕೊಡವ ಮಕ್ಕಳ ಕೂಟದ ಅಧ್ಯಕ್ಷ ಬೊಳ್ಳಜ್ಜೀರ ಬಿ. ಅಯ್ಯಪ್ಪ, ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಸರಸ್ವತಿ ಸುಬ್ಬಯ್ಯ ಉಪಸ್ಥಿತರಿದ್ದರು.
ಮಕ್ಕಳ ಹಬ್ಬದಲ್ಲಿ ಸುಮಾರು 25 ಕ್ಕೂ ಹೆಚ್ಚು ತಂಡಗಳು ಭಾಗವಹಿಸಿ ಕಾರ್ಯಕ್ರಮ ನಡೆಸಿಕೊಟ್ಟರು. ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು. ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಮಾದೇಟ್ಟಿರ ಬೆಳ್ಯಪ್ಪ ನಿರೂಪಿಸಿ, ವಂದಿಸಿದರು







