ಆಸ್ಟ್ರೇಲಿಯನ್ ಓಪನ್: ಮರ್ರೆ, ಜೊಕೊವಿಕ್‌ಗೆ ಕಠಿಣ ಡ್ರಾ

ಮೆಲ್ಬೋರ್ನ್, ಜ.13: ವಿಶ್ವದ ನಂ.1 ಆಟಗಾರ ಆ್ಯಂಡಿ ಮರ್ರೆ ಆರನೆ ಬಾರಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಫೈನಲ್‌ಗೆ ತಲುಪಬೇಕಾದರೆ ಕೀ ನಿಶಿಕೊರಿ ಹಾಗೂ ಸ್ಟಾನ್ ವಾವ್ರಿಂಕರಿಂದ ಕಠಿಣ ಸವಾಲು ಎದುರಿಸಬೇಕಾಗುತ್ತದೆ.
ಶುಕ್ರವಾರ ಇಲ್ಲಿ ವರ್ಷದ ಮೊದಲ ಗ್ರಾನ್‌ಸ್ಲಾಮ್ ಟೂರ್ನಿಗೆ ಎದುರಾಳಿಗಳನ್ನು ನಿರ್ಧರಿಸುವ ಡ್ರಾ ಪ್ರಕ್ರಿಯೆ ನಡೆಯಿತು.
2016ರಲ್ಲಿ ವಿಂಬಲ್ಡನ್ ಓಪನ್ ಹಾಗೂ ರಿಯೋ ಒಲಿಂಪಿಕ್ಸ್ ಚಿನ್ನದ ಪದಕ ಜಯಿಸಿ ಭರ್ಜರಿ ಫಾರ್ಮ್ ಪ್ರದರ್ಶಿಸಿದ್ದ ಮರ್ರೆ ಐದು ಬಾರಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಫೈನಲ್‌ಗೆ ತಲುಪಿದ್ದರೂ ಪ್ರಶಸ್ತಿ ಗೆಲ್ಲಲು ವಿಫಲರಾಗಿದ್ದರು. ನಾಲ್ಕು ಬಾರಿ ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್‌ಗೆ ಶರಣಾಗಿದ್ದರು.
ಮರ್ರೆ ಮೊದಲ ಸುತ್ತಿನಲ್ಲಿ ಉಕ್ರೇನ್‌ನ ಇಲ್ಲಿಯಾ ಮಾರ್ಚೆಂಕೊ, ಕ್ವಾರ್ಟರ್ ಫೈನಲ್‌ನಲ್ಲಿ ನಿಶಿಕೊರಿ ಅಥವಾ ಸ್ವಿಸ್ ಲೆಜಂಡ್ ರೋಜರ್ ಫೆಡರರ್ ಹಾಗೂ ಸೆಮಿಫೈನಲ್‌ನಲ್ಲಿ 2014ರ ವಿನ್ನರ್ ವಾವ್ರಿಂಕರನ್ನು ಎದುರಿಸಲಿದ್ದಾರೆ.
ದಾಖಲೆ 17ನೆ ಗ್ರಾನ್‌ಸ್ಲಾಮ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಫೆಡರರ್ ಮೊದಲ ಸುತ್ತಿನಲ್ಲಿ ಕ್ವಾಲಿಫೈಯರ್ ಆಟಗಾರನನ್ನು, 3ನೆ ಸುತ್ತಿನಲ್ಲಿ ಥಾಮಸ್ ಬೆರ್ಡಿಕ್‌ರನ್ನು ಎದುರಿಸಲಿದ್ದಾರೆ.
2ನೆ ಶ್ರೇಯಾಂಕದ ಜೊಕೊವಿಕ್ ಮೊದಲ ಸುತ್ತಿನಲ್ಲಿ ಸ್ಪೇನ್‌ನ ಅನುಭವಿ ಆಟಗಾರ ಫೆರ್ನಾಂಡೊ ವೆರ್ಡಾಸ್ಕೊರಿಂದ ಸವಾಲು ಎದುರಿಸುವರು. ದಾಖಲೆ 7ನೆ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಜೊಕೊವಿಕ್ 4ನೆ ಸುತ್ತಿನಲ್ಲಿ ಬ್ರಿಸ್ಬೇನ್ ಓಪನ್ ಚಾಂಪಿಯನ್ ಗ್ರಿಗೊರ್ ಡಿಮಿಟ್ರೊವ್ ಹಾಗೂ ಕ್ವಾರ್ಟರ್‌ಫೈನಲ್‌ನಲ್ಲಿ ಆಸ್ಟ್ರೀಯದ ಡೊಮಿನಿಕ್ ಥಿಯೆಮ್‌ರನ್ನು ಎದುರಿಸುವರು.
2009ರ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ನಡಾಲ್ 3ನೆ ಸುತ್ತಿನಲ್ಲಿ ಜರ್ಮನಿಯ ಅಲೆಕ್ಸಾಂಡರ್ ಝ್ವೆರೆವ್‌ರನ್ನು ಎದುರಿಸುವರು.







