ರಿಯಲ್ ಮ್ಯಾಡ್ರಿಡ್ ಅಜೇಯ ಓಟ ಅಬಾಧಿತ
ಕಿಂಗ್ಸ್‌ಕಪ್‌ನಲ್ಲಿ ಕ್ವಾರ್ಟರ್‌ಫೈನಲ್‌ಗೆ

ಮ್ಯಾಡ್ರಿಡ್, ಜ.12: ಸೆವಿಲ್ಲಾ ತಂಡದ ವಿರುದ್ಧ 3-3 ಗೋಲುಗಳ ಅಂತರದಿಂದ ಡ್ರಾ ಸಾಧಿಸಿರುವ ರಿಯಲ್ ಮ್ಯಾಡ್ರಿಡ್ ತಂಡ ಕಿಂಗ್ಸ್‌ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್‌ಗೆ ತಲುಪಿದೆ.
ಸೆವಿಲ್ಲಾ ವಿರುದ್ಧ 6-3 ಅಂತರದ ಗೋಲು ಸರಾಸರಿಯಲ್ಲಿ ಅಂತಿಮ 8 ಹಂತಕ್ಕೆ ಪ್ರವೇಶಿಸಿರುವ ರಿಯಲ್ ಮ್ಯಾಡ್ರಿಡ್ ಎಲ್ಲ ಸ್ಪರ್ಧೆಗಳಲ್ಲಿ ಅಜೇಯ ಗೆಲುವಿನ ಓಟವನ್ನು 40ಕ್ಕೆ ಏರಿಸಿಕೊಂಡಿದೆ.
"ತಂಡದ ಪ್ರತಿಯೊಬ್ಬ ಸದಸ್ಯನೂ ತ್ರಿವಳಿ ಪ್ರಶಸ್ತಿಗಳನ್ನು(ಲಾಲಿಗ, ಚಾಂಪಿಯನ್ಸ್ ಲೀಗ್ ಹಾಗೂ ಕಿಂಗ್ಸ್ ಕಪ್)ಗೆಲ್ಲುವ ಬಯಕೆ ಹೊಂದಿದ್ದಾರೆ. ಆದರೆ, ನಾವು ಇದನ್ನು ಹಂತಹಂತವಾಗಿ ಗೆಲ್ಲಬೇಕಾಗಿದೆ'' ಎಂದು ಮ್ಯಾಡ್ರಿಡ್ ಕೋಚ್ ಝೈನುದ್ದೀನ್ ಝೈದಾನ್ ಅಭಿಪ್ರಾಯಪಟ್ಟಿದ್ದಾರೆ.
ರಿಯಲ್ ಮ್ಯಾಡ್ರಿಡ್ ತಂಡ ಈ ಋತುವಿನಲ್ಲಿ ಯುಇಎಫ್‌ಎ ಸೂಪರ್ ಕಪ್ ಹಾಗೂ ಕ್ಲಬ್ ವಿಶ್ವಕಪ್‌ನ್ನು ಜಯಿಸಿದೆ. ಲಾಲಿಗ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಮ್ಯಾಡ್ರಿಡ್ ತಂಡ ಚಾಂಪಿಯನ್ಸ್ ಲೀಗ್‌ನಲ್ಲಿ ಅಂತಿಮ-16ರ ಸುತ್ತಿಗೆ ಪ್ರವೇಶಿಸಿದೆ.
ಗುರುವಾರ ಇಲ್ಲಿ ನಡೆದ ಕಿಂಗ್ಸ್‌ಕಪ್ ಟೂರ್ನಿಯಲ್ಲಿ ಸೆರ್ಜಿಯೊ ರಾಮೊಸ್ ಹಾಗೂ ಕರೀಮ್ ಬೆಂಝೆಮಾ ಕೊನೆಯ ಕ್ಷಣದಲ್ಲಿ ಮಾಡಿದ ಮ್ಯಾಜಿಕ್‌ನಿಂದಾಗಿ ಮ್ಯಾಡ್ರಿಡ್ ಒಂದು ವರ್ಷದ ಬಳಿಕ ಮೊದಲ ಬಾರಿ ಸೋಲುವುದರಿಂದ ತಪ್ಪಿಸಿದರು. ಝೈದಾನ್ 2016ರ ಜನವರಿಯಲ್ಲಿ ಕೋಚ್ ಆಗಿ ನೇಮಕಗೊಂಡ ಬಳಿಕ ಮ್ಯಾಡ್ರಿಡ್ ತಂಡ ಕೇವಲ 2 ಪಂದ್ಯಗಳಲ್ಲಿ ಸೋತಿದೆ.
ರಿಯಲ್ ತಂಡ 77ನೆ ನಿಮಿಷದ ತನಕ 3-1 ಹಿನ್ನಡೆಯಲ್ಲಿತ್ತು. 83ನೆ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲು ಬಾರಿಸಿದ ನಾಯಕ ರಾಮೊಸ್ ತಂಡಕ್ಕೆ ಆಸರೆಯಾದರು. ಪಂದ್ಯ ಕೊನೆಗೊಳ್ಳಲು ಕೆಲವೇ ಸೆಕೆಂಡ್ ಬಾಕಿ ಇರುವಾಗ ಬೆಂಝೆಮಾ ಗೋಲು ಬಾರಿಸಿ ರಿಯಲ್ ತಂಡ 3-3 ರಿಂದ ಡ್ರಾ ಸಾಧಿಸಲು ನೆರವಾದರು. 30ರಲ್ಲಿ ಜಯ ಹಾಗೂ 10ರಲ್ಲಿ ಡ್ರಾ ಸಾಧಿಸಿರುವ ರಿಯಲ್ ಮ್ಯಾಡ್ರಿಡ್ ತಂಡ 2015-16ರ ಋತುವಿನಲ್ಲಿ ಬಾರ್ಸಿಲೋನ ನಿರ್ಮಿಸಿದ್ದ ಸ್ಪೇನೀಶ್ ದಾಖಲೆಯನ್ನು ಮುರಿಯಿತು.







