ಮೊದಲ ಏಕದಿನ: ಪಾಕ್ ವಿರುದ್ಧ ಆಸೀಸ್‌ಗೆ ಸುಲಭ ಜಯ
ಮ್ಯಾಥ್ಯೂ ವೇಡ್ ಚೊಚ್ಚಲ ಶತಕ

ಬ್ರಿಸ್ಬೇನ್, ಜ.13: ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಮ್ಯಾಥ್ಯೂ ವೇಡ್ ದಾಖಲಿಸಿದ ಚೊಚ್ಚಲ ಶತಕದ(ಅಜೇಯ 100) ನೆರವಿನಿಂದ ಆಸ್ಟ್ರೇಲಿಯ ತಂಡ ಪಾಕಿಸ್ತಾನದ ವಿರುದ್ಧದ ಏಕದಿನ ಸರಣಿಯಲ್ಲಿ ಶುಭಾರಂಭ ಮಾಡಿದೆ.
ಶುಕ್ರವಾರ ಇಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಪಾಕಿಸ್ತಾನವನ್ನು 92 ರನ್‌ಗಳ ಅಂತರದಿಂದ ಮಣಿಸಿದ ಆಸೀಸ್ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. 2ನೆ ಪಂದ್ಯ ಜ.15(ರವಿವಾರ)ರಂದು ನಡೆಯಲಿದೆ.
ಗೆಲ್ಲಲು 269 ರನ್ ಗುರಿ ಪಡೆದ ಪಾಕಿಸ್ತಾನ ತಂಡ ಜೆಪಿ ಫಾಕ್ನರ್(4-32), ಕಮ್ಮಿನ್ಸ್(3-33) ಹಾಗೂ ಸ್ಟಾರ್ಕ್(2-34) ದಾಳಿಗೆ ತತ್ತರಿಸಿ 42.4 ಓವರ್‌ಗಳಲ್ಲಿ ಕೇವಲ 176 ರನ್‌ಗೆ ಆಲೌಟಾಯಿತು.
ಎಂದಿನಂತೆ ಚೇಸಿಂಗ್‌ನ ವೇಳೆ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾದ ಪಾಕ್ ಪರ ಬಾಬರ್ ಆಝಂ(33ರನ್)ಸರ್ವಾಧಿಕ ರನ್ ಬಾರಿಸಿದರೆ, ಇಮಾದ್ ವಸಿಂ(29), ಅಝರ್ ಅಲಿ(24) ಹಾಗೂ ಮುಹಮ್ಮದ್ ರಿಝ್ವೆನ್(21) 20ಕ್ಕಿಂತ ಹೆಚ್ಚು ರನ್ ಗಳಿಸಿದರು. ಉಳಿದವರು ಆಸ್ಟ್ರೇಲಿಯದ ದಾಳಿ ಎದುರಿಸಲು ವಿಫಲವಾಗಿ ಪೆವಿಲಿಯನ್‌ಗೆ ಪರೇಡ್ ನಡೆಸಿದರು.
ಆಸ್ಟ್ರೇಲಿಯ 268: ಇದಕ್ಕೆ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯ ತಂಡ ವೇಡ್ ಅವರ ಏಕಾಂಗಿ ಹೋರಾಟದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 268 ರನ್ ಕಲೆ ಹಾಕಿತು.
ಆಸ್ಟ್ರೇಲಿಯ 16.2ನೆ ಓವರ್‌ನಲ್ಲಿ 78 ರನ್ ಗಳಿಸುವಷ್ಟರಲ್ಲಿ ಅಗ್ರ 5 ವಿಕೆಟ್‌ಗಳನ್ನು ಕಳೆದುಕೊಂಡು ಕಳಪೆ ಆರಂಭ ಪಡೆದಿತ್ತು. ನಾಯಕ ಸ್ಟೀವ್ ಸ್ಮಿತ್ ಖಾತೆ ತೆರೆಯಲು ವಿಫಲರಾಗಿದ್ದರು. ಟೆಸ್ಟ್ ಪಂದ್ಯದಲ್ಲಿ ಅಬ್ಬರಿಸಿದ್ದ ಡೇವಿಡ್ ವಾರ್ನರ್ ಕೇವಲ 7 ರನ್ ಗಳಿಸಿದ್ದರು. ತಂಡ ಸಂಕಷ್ಟದಲ್ಲಿದ್ದಾಗ ಕ್ರೀಸ್‌ಗೆ ಇಳಿದಿದ್ದ ವೇಡ್(ಅಜೇಯ 100, 100 ಎಸೆತ, 7 ಬೌಂಡರಿ, 2 ಸಿಕ್ಸರ್) ಅವರು ಆಲ್‌ರೌಂಡರ್ ಮ್ಯಾಕ್ಸ್‌ವೆಲ್(60 ರನ್)ಅವರೊಂದಿಗೆ ಕೈಜೋಡಿಸಿ 6ನೆ ವಿಕೆಟ್‌ಗೆ 82 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.
ಆಸೀಸ್ ಪರ ವೇಡ್, ಮ್ಯಾಕ್ಸ್‌ವೆಲ್ ಹೊರತುಪಡಿಸಿದರೆ, ಆರಂಭಿಕ ಆಟಗಾರ ಹೆಡ್(39) ಪ್ರಮುಖ ಕಾಣಿಕೆ ನೀಡಿದರು. ಎಸೆತಕ್ಕೊಂದು ರನ್ ಗಳಿಸಿ ತಂಡ ಸ್ಪರ್ಧಾತ್ಮಕ ಸ್ಕೋರ್ ಗಳಿಸಲು ನೆರವಾಗಿರುವ ವೇಡ್ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯ: 50 ಓವರ್‌ಗಳಲ್ಲಿ 268/9
(ವೇಡ್ ಅಜೇಯ 100, ಮ್ಯಾಕ್ಸ್‌ವೆಲ್ 60, ಹೆಡ್ 39, ಹಸನ್ ಅಲಿ 3-65, ಮುಹಮ್ಮದ್ ಆಮಿರ್ 2-54, ವಸಿಂ 2-35)
ಪಾಕಿಸ್ತಾನ: 42.4 ಓವರ್‌ಗಳಲ್ಲಿ 176 ರನ್‌ಗೆ ಆಲೌಟ್
(ಬಾಬರ್ ಆಝಂ 33, ಇಮಾದ್ ವಸಿಂ 29, ಅಝರ್ ಅಲಿ 24, ಫಾಕ್ನರ್ 4-32, ಕಮ್ಮಿನ್ಸ್ 3-33, ಸ್ಟಾರ್ಕ್ 2-34)
ಪಂದ್ಯಶ್ರೇಷ್ಠ: ಮ್ಯಾಥ್ಯೂ ವೇಡ್.







