ಗ್ರಾಮೀಣ ಭಾಗದಲ್ಲೂ ವೈದ್ಯಕೀಯ ಸೇವೆ ಲಭ್ಯವಾಗಲಿ: ನಸೀರ್ ಅಹ್ಮದ್
ಯೆನೆಪೊಯ ಫೌಂಡೇಶನ್ ಹಾಗೂ ಯೆನೆಪೋಯ ವಿವಿ ಸಹಯೋಗದಲ್ಲಿ ಶೈಕ್ಷಣಿಕ ಪ್ರತಿಭಾ ಪುರಸ್ಕಾರ

ಕೊಣಾಜೆ, ಜ.14: ಆರೋಗ್ಯಕ್ಕೆ ಸಂಬಂಧಿಸಿದಂತೆ ಕೇಂದ್ರ ಹಾಗೂ ರಾಜ್ಯ ಸರಕಾರ ಜಂಟಿಯಾಗಿ ಗಾಮೀಣ ಭಾಗದಲ್ಲಿಯೂ ಲಭ್ಯವಾಗುವಂತಹ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರೂ ಗ್ರಾಮೀಣ ಭಾಗದ ಜನಸಂಖ್ಯೆಗೆ ಸಮನಾಗಿ ವೈದ್ಯರ ಸೇವೆ ಸಿಗುತ್ತಿಲ್ಲ. ಹಾಗಾಗಿ ಗ್ರಾಮೀಣ ಭಾಗದ ಜನರು ಹಲವು ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗಬೇಕಾದ ಅನಿವಾರ್ಯತೆ ಇದೆ ಎಂದು ರಾಜ್ಯ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷ ನಸೀರ್ ಅಹ್ಮದ್ ಅಭಿಪ್ರಾಯಪಟ್ಟರು.
ದೇರಳಕಟ್ಟೆಯ ಯೆನೆಪೊಯ ವಿವಿಯ ಯೆನ್‌ಡ್ಯೂರೆನ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ಯೆನೆಪೊಯ ಮೊಯ್ದಿನ್ ಕುಂಞಿ ಮೆಮೋರಿಯಲ್ ಎಜ್ಯುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಘಟಕ ಯೆನೆಪೊಯ ಫೌಂಡೇಶನ್ ಹಾಗೂ ಯೆನೆಪೊಯ ವಿವಿ ಸಹಯೋಗದಲ್ಲಿ ಶನಿವಾರ ನಡೆದ ಶೈಕ್ಷಣಿಕ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಎಸೆಸೆಲ್ಸಿ, ಪಿಯುಸಿ ಹಾಗೂ ಸ್ನಾತಕ ಪದವಿ ಮಟ್ಟದಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿರುವ 307 ಪ್ರತಿಭಾನ್ವಿತ ವಿದ್ಯಾರ್ಥಿಗಳು ಹಾಗೂ 100 ಶೇ. ಫಲಿತಾಂಶ ದಾಖಲಿಸಿರುವ 17 ಶೈಕ್ಷಣಿಕ ಸಂಸ್ಥೆಗಳನ್ನು ಪುರಸ್ಕರಿಸಿ ಅವರು ಮಾತನಾಡುತ್ತಿದ್ದರು.
ಗ್ರಾಮೀಣ ಭಾಗದಲ್ಲಿ ಸೇವೆ ನೀಡಲು ವೈದ್ಯರು ಹಿಂಜರಿಯುತ್ತಿರುವುದರಿಂದ ಎಷ್ಟೋ ಬಡ ಜನರು ಸೇವೆಯಿಂದ ವಂಚಿತರಾಗುತ್ತಿದ್ದಾರೆ ಎಂಬ ಭಾವನೆ ವೈದ್ಯರಲ್ಲಿ ಮೂಡಬೇಕು. ಆ ನಿಟ್ಟಿನಲ್ಲಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ನೀತಿ ಶಿಕ್ಷಣ ನೀಡಬೇಕು. ವೈದ್ಯರು ಗ್ರಾಮೀಣ ಪ್ರದೇಶದಲ್ಲೂ ಸೇವೆ ಸಲ್ಲಿಸುವಂತೆ ಶೈಕ್ಷಣಿಕ ಅವಧಿಯಲ್ಲೇ ಮನಪರಿವರ್ತನೆ ಮಾಡುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಡಿಯಲ್ಲಿ ವಿದೇಶದಲ್ಲಿ ಕಲಿಯುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಈ ಹಿಂದೆ ನೀಡಲಾಗುತ್ತಿದ್ದ 10 ಲಕ್ಷ ರೂ. ಅನ್ನು ಪ್ರಸ್ತುತ ರಾಜ್ಯ ಸರಕಾರವು ದ್ವಿಗುಣಗೊಳಿಸಿದ್ದು 20 ಲಕ್ಷ ರೂ.ಗಳಿಗೇರಿಸಿದ್ದು, ಈ ಸಾಲಿನಲ್ಲಿ 367ವಿದ್ಯಾರ್ಥಿಗಳಿಗೆ ಅನುದಾನ ಮಂಜೂರು ಮಾಡಿದೆ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಯೆನೆಪೊಯ ವಿವಿ ಕುಲಾಧಿಪತಿ ವೈ.ಅಬ್ದುಲ್ಲಾ ಕುಂಞಿ ಮಾತನಾಡಿ ಯೆನೆಪೊಯ ಸಂಸ್ಥೆ ದ.ಕ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಹಾಗೂ ಸಾಧನೆಗೈದ ಸಂಸ್ಥೆಗಳನ್ನು ಗುರುತಿಸುವ ಕೆಲಸ ಮಾಡುತ್ತಿದ್ದು, ಆ ಮೂಲಕ ಇತರ ಶೈಕ್ಷಣಿಕ ಸಂಸ್ಥೆಗಳು ಉತ್ತಮ ಸಾಧನೆ ತೋರಲು ಅವಕಾಶ ಮಾಡಿಕೊಟ್ಟಿದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಯೆನೆಪೊಯ ಫೌಂಡೇಶನ್ ಚೇರ್‌ಮೆನ್ ವೈ.ಮುಹಮ್ಮದ್ ಕುಂಞಿ ಅಧ್ಯಕ್ಷತೆ ವಹಿಸಿದ್ದರು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಯೆನೆಪೊಯ ವಿವಿ ಕುಲಪತಿ ಡಾ.ಕೆ.ವಿಜಯ್ ಕುಮಾರ್, ಡಾ.ಅಖ್ತರ್ ಹುಸೈನ್, ಖಾಲಿದ್ ಬಾವಾ, ಶಫಿ ಅಹ್ಮದ್, ಯೆನೆಪೊಯ ವಿವಿ ಕುಲಸಚಿವ ಡಾ.ಎಸ್.ಶ್ರೀಕುಮಾರ್ ಮೆನನ್ ಉಪಸ್ಥಿತರಿದ್ದರು.
ಟ್ರಸ್ಟಿ ಅಬ್ದುಲ್ಲ ಜಾವೇದ್ ಸ್ವಾಗತಿಸಿದರು. ರೋಶೆಲ್ ಟೆಲ್ಲಿಸ್ ಹಾಗೂ ಮಲ್ಲಿಕಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಯೆನೆಪೊಯ ವಿವಿಯ ವೈ.ಮೊಯ್ದಿನ್ ಖುರ್ಷಿದ್ ವಂದಿಸಿದರು.







