ಜ.18ರಂದು ಆರ್‌ಬಿಐ ಕಚೇರಿ ಮುಂದೆ ಕಾಂಗ್ರೆಸ್ ಪ್ರತಿಭಟನೆ
ನೋಟು ಅಮಾನ್ಯ ಪ್ರಕರಣ

ಮಂಗಳೂರು, ಜ.14: ಕೇಂದ್ರ ಸರಕಾರವು 500 ಮತ್ತು 1,000 ರೂ. ನೋಟುಗಳನ್ನು ಅಮಾನ್ಯಗೊಳಿಸಿದ ಪ್ರಕರಣವನ್ನು ಖಂಡಿಸಿ ಜ.18ರಂದು ದೇಶದ ಎಲ್ಲ ರಾಜ್ಯಗಳಲ್ಲಿರುವ ಆರ್‌ಬಿಐ ಕಚೇರಿಗಳ ಮುಂದೆ ಪ್ರತಿಭಟನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಹಾಗು ಕಾಂಗ್ರೆಸ್ ಮುಖಂಡ ಐವನ್ ಡಿಸೋಜ ತಿಳಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ನೋಟು ಅಮಾನ್ಯಗೊಳಿಸಿದ ಬಳಿಕ ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಜನರು ಹತಾಶರಾಗಿದ್ದಾರೆ. ಆದರೆ, ಮೋದಿ ಅದ್ಯಾವುದನ್ನೂ ಗಂಭೀರವಾಗಿ ಪರಿಗಣಿಸಿಲ್ಲ. ನೋಟು ಅಮಾನ್ಯದ ಬಳಿಕ ದೇಶಕ್ಕೆ ಎಷ್ಟು ಆರ್ಥಿಕ ನಷ್ಟ ಉಂಟಾಗಿದೆ? ಎಷ್ಟು ಸಾವು ಸಂಭವಿಸಿದೆ? ಅವರಿಗೆ ಎಷ್ಟು ಪರಿಹಾರ ನೀಡಿದ್ದೀರಿ? ಎಷ್ಟು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಇತ್ಯಾದಿ ಪ್ರಶ್ನೆಗಳನ್ನು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದರೂ ಪ್ರಧಾನಿ ಅಥವಾ ಕೇಂದ್ರ ಸರಕಾರ ಉತ್ತರಿಸಿಲ್ಲ. ಈ ಬಗ್ಗೆ ರಾಷ್ಟ್ರದಾದ್ಯಂತ ಪ್ರತಿಭಟನೆ ನಡೆಸಲಾಗಿದೆ.
ಇದೀಗ ಜನರ ಆಕ್ರೋಶವನ್ನು ಕೇಂದ್ರದ ಗಮನ ಸೆಳೆಯುವ ಸಲುವಾಗಿ ಎಐಸಿಸಿ ಹಮ್ಮಿಕೊಂಡಿರುವ ‘ಜನವೇದನ್’ನ ಭಾಗವಾಗಿ ಜ.18ರಂದು ಆರ್‌ಬಿಐ ಕಚೇರಿಗಳ ಮುಂದೆ ಪ್ರತಿಭಟನೆ ಮಾಡಲಾಗುವುದು. ಅಲ್ಲದೆ ಈ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸುವ ಮತ್ತು ಜನಜಾಗೃತಿ ಮೂಡಿಸುವ ಸಲುವಾಗಿ ಜ.20ರಿಂದ ಫೆ.23ರವರೆಗೆ ದೇಶದ ಎಲ್ಲ ಗ್ರಾಮಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.
ನೋಟು ಅಮಾನ್ಯದ ಬಳಿಕ ಆಹಾರವಸ್ತುಗಳು, ಎಲ್‌ಪಿಜಿ ಇತ್ಯಾದಿಗಳ ಬೆಲೆಯಲ್ಲಿ ಇಳಿಕೆಯಾಗಬಹುದು ಎಂಬ ನಿರೀಕ್ಷೆಯಾಗಿತ್ತು. ಆದರೆ, ಇದೀಗ ಎಲ್ಲದರ ಬೆಲೆಯೂ ಇಳಿಕೆಯಾಗುತ್ತಿವೆ ಎಂದು ಐವನ್ ಡಿಸೋಜ ಆಪಾದಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ನಝೀರ್ ಬಜಾಲ್, ಭಾಸ್ಕರ ರಾವ್ ಮತ್ತಿತರರು ಉಪಸ್ಥಿತರಿದ್ದರು.







