ಮಂಗಳೂರು ಎಪಿಎಂಸಿ: ಕಾಂಗ್ರೆಸ್-ಬಿಜೆಪಿಗೆ ಸಮಾನ ಸ್ಥಾನ
ಮಂಗಳೂರು, ಜ.14: ಮಂಗಳೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯ 14 ಸ್ಥಾನಗಳ ಪೈಕಿ ಗುರುವಾರ ನಡೆದ 12 ಸ್ಥಾನಗಳ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ.
ನಗರದ ಮಹಿಳಾ ಕೆಪಿಟಿಯಲ್ಲಿ ಶನಿವಾರ ನಡೆದ ಮತ ಎಣಿಕೆಯಲ್ಲಿ 12 ಸ್ಥಾನದ ಪೈಕಿ ಕಾಂಗ್ರೆಸ್ ಮತ್ತು ಬಿಜೆಪಿಗೆ ತಲಾ 6 ಸ್ಥಾನ ಲಭಿಸಿದೆ. 2 ಸ್ಥಾನಕ್ಕೆ ನಡೆದ ಅವಿರೋಧ ಆಯ್ಕೆಯಲ್ಲೂ ಕಾಂಗ್ರೆಸ್ ಮತ್ತು ಬಿಜೆಪಿ ಹಂಚಿಕೊಂಡಿವೆ. ಆ ಮೂಲಕ 14 ಸ್ಥಾನದ ಪೈಕಿ ಕಾಂಗ್ರೆಸ್-ಬಿಜೆಪಿಗೆ ತಲಾ 7 ಸ್ಥಾನಗಳು ಲಭಿಸಿದೆ. ಇನ್ನು ಸರಕಾರವು ಸದಸ್ಯರನ್ನು ನಾಮನಿರ್ದೇಶನ ಮಾಡಲಿರುವ ಕಾರಣ ಮಂಗಳೂರು ಎಪಿಎಂಸಿಯಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆಗೆ ಏರಲಿದೆ.
32,968 ಮತದಾನದ ಪೈಕಿ 11,942 ಮಂದಿ ಗುರುವಾರ ಮತ ಚಲಾಯಿಸಿದ್ದು, ಶೇ.36.22 ಮತದಾನವಾಗಿತ್ತು.
1ನೆ ಮುಲ್ಕಿ ಕ್ಷೇತ್ರದಲ್ಲಿ ಹಿಂದುಳಿದ ವರ್ಗ (ಬಿ)ದ ಜೋಯಿಲ್ ಡಿಸೋಜ (ಕಾಂಗ್ರೆಸ್-ಪಡೆದ ಮತ 421), 2ನೆ ಮುಲ್ಕಿ ಕ್ಷೇತ್ರದಲ್ಲಿ ಸಾಮಾನ್ಯ ವರ್ಗದ ಪ್ರಮೋದ್ ಕುಮಾರ್(ಕಾಂಗ್ರೆಸ್-498), 3ನೆ ಕಲ್ಲಮುಂಡ್ಕೂರು ಕ್ಷೇತ್ರದಲ್ಲಿ ಸಾಮಾನ್ಯ ವರ್ಗದ ಚಂದ್ರಹಾಸ ಸನಿಲ್(ಕಾಂಗ್ರೆಸ್-689), 4ನೆ ಪುತ್ತಿಗೆ ಕ್ಷೇತ್ರದಲ್ಲಿ ಸಾಮಾನ್ಯ ವರ್ಗದ ಕೆ. ಕೃಷ್ಣರಾಜ ಹೆಗ್ಡೆ (ಬಿಜೆಪಿ-377), 5ನೆ ಮೂಡುಬಿದಿರೆ ಕ್ಷೇತ್ರದ ಅನುಸೂಚಿತ ಜಾತಿಯ ಶೀನ(ಕಾಂಗ್ರೆಸ್ 579), 6ನೆ ಶಿರ್ತಾಡಿ ಕ್ಷೇತ್ರದಲ್ಲಿ ಸಾಮಾನ್ಯ ವರ್ಗದ ಪ್ರವೀಣ್ ಕುಮಾರ್ ಎಸ್.(ಕಾಂಗ್ರೆಸ್ 902), 7ನೆ ಸುರತ್ಕಲ್ ಕ್ಷೇತ್ರದಲ್ಲಿ ಸಾಮಾನ್ಯ ವರ್ಗದ ರಜನಿ ದುಗ್ಗಣ್ಣ (ಬಿಜೆಪಿ-615), 8ನೆ ಎಡಪದವು ಕ್ಷೇತ್ರದಲ್ಲಿ ಅನುಸೂಚಿತ ಪಂಗಡದ ರುಕ್ಕಯ ನಾಯ್ಕ (ಬಿಜೆಪಿ-628), 9ನೆ ವಾಮಂಜೂರು ಕ್ಷೇತ್ರದಲ್ಲಿ ಮಹಿಳಾ ವರ್ಗದ ವಾಣಿ ಆರ್. ಶೆಟ್ಟಿ (ಬಿಜೆಪಿ-140), 10ನೆ ಮಂಗಳೂರು ಕ್ಷೇತ್ರದಲ್ಲಿ ಹಿಂದುಳಿದ ವರ್ಗ (ಎ)ದ ಭರತೇಶ್ ಅಮೀನ್(ಕಾಂಗ್ರೆಸ್-410), 11ನೆ ಕೋಟೆಕಾರ್ ಕ್ಷೇತ್ರದಲ್ಲಿ ಮಹಿಳಾ ವರ್ಗದ ಮುತ್ತು ಎನ್. ಶೆಟ್ಟಿ (ಕಾಂಗ್ರೆಸ್-628)ಗೆಲುವು ಸಾಧಿಸಿದ್ದಾರೆ.
12ನೆ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರದೇಶಗಳ ವರ್ತಕರ ಕ್ಷೇತ್ರದಿಂದ ಬಿ. ರಾಘವ ಶೆಟ್ಟಿ (ಬಿಜೆಪಿ-229), 13ನೆ ಸಹಕಾರ ಸಂಘಗಳ ಕ್ಷೇತ್ರದಿಂದ ಪುರುಷೋತ್ತಮ ಶೆಟ್ಟಿ, 14ನೆ ಕೃಷಿ ಹುಟ್ಟುವಳಿ, ಮಾರಾಟ, ವ್ಯವಹಾರಗಳಲ್ಲಿ ತೊಡಗಿರುವ ಸಂಸ್ಕರಣಾ ಸಹಕಾರಿ ಸಂಘಗಳ ಕ್ಷೇತ್ರದಲ್ಲಿ ಬಿ. ತಿಮ್ಮಪ್ಪ ಶೆಟ್ಟಿ (ಇಬ್ಬರೂ ಬಿಜೆಪಿ ಬೆಂಬಲಿತರು ಮತ್ತು ಅವಿರೋಧ) ಗೆದ್ದಿದ್ದಾರೆ.







