ಜ. 16ರಂದು ಕೇಂದ್ರ ಸರಕಾರದ ವಿರುದ್ಧ ರಿಕ್ಷಾ ಚಾಲಕ -ಮಾಲಕರ ಪ್ರತಿಭಟನೆ
ಪುತ್ತೂರು, ಜ. 14: ಅಟೋ ರಿಕ್ಷಾದಲ್ಲಿ ಬಾಡಿಗೆ ನಡೆಸಿ ದಿನದ ಆದಾಯದಲ್ಲಿ ಹೊಟ್ಟೆ ತುಂಬಿಸಿಕೊಳ್ಳುವ ರಿಕ್ಷಾ ಚಾಲಕ -ಮಾಲಕರಿಗೆ ಕೇಂದ್ರ ಸರಕಾರ ಹೇರಿರುವ ಹೆಚ್ಚುವರಿ ಆರ್‌ಟಿಒ ದರದಿಂದ ಬದುಕಿಗೆ ಕೊಳ್ಳಿ ಇಟ್ಟಂತಾಗಿದೆ. ಈ ಕ್ರಮದ ವಿರುದ್ಧ ಜ. 16 ರಂದು ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದ ಎದುರು ಬಿಎಂಎಸ್ ಅಟೋ ರಿಕ್ಷಾ ಚಾಲಕ -ಮಾಲಕರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಎಂಎಸ್ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ರಂಜನ್ ಪಿ. ಬನ್ನೂರು ಹೇಳಿದ್ದಾರೆ.
ಅವರು ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಜ. 16 ರಂದು ಬಿಎಂಎಸ್ ನೇತೃತ್ವದಲ್ಲಿ ವಿವಿಧ ರಿಕ್ಷಾ ಚಾಲಕ -ಮಾಲಕರು ಹಾಗೂ ವಾಹನಗಳ ಚಾಲಕ -ಮಾಲಕರು ಸೇರಿಕೊಂಡು ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದ ಗಾಂ ಕಟ್ಟೆಯ ಬಳಿ ಪ್ರತಿಭಟನಾ ಸಭೆ ನಡೆಯಲಿದ್ದು, ಬಳಿಕ ಪ್ರಾದೇಶಿಕ ಕಚೇರಿಗೆ ತೆರಳಿ ಅವರ ಮೂಲಕ ಕೇಂದ್ರ ಸಾರಿಗೆ ಇಲಾಖೆಗೆ ಮನವಿ ನೀಡಲಾಗುವುದು ಎಂದು ಹೇಳಿದರು.
ಸಾರಿಗೆ ಇಲಾಖೆಗೆ ಸಂಬಂಸಿದಂತೆ ಎಲ್ಲಾ ಮೋಟಾರು ವಾಹನಗಳಿಗೆ ಸಂಬಂಸಿದ ಆರ್‌ಟಿಒ ದರಗಳು ವಿಪರೀತವಾಗಿ ಏರಿಕೆ ಮಾಡಿರುವುದು, ಇನ್ಶೂರೆನ್ಸ್ ದರಗಳು ವರ್ಷದಿಂದ ವರ್ಷಕ್ಕೆ ಹೆಚ್ಚಿಸಿರುವುದರಿಂದ ಮುಖ್ಯವಾಗಿ ರಿಕ್ಷಾವನ್ನೇ ನಂಬಿ ಜೀವನ ಸಾಗಿಸುತ್ತಿರುವವರಿಗೆ ತೊಂದರೆಯಾಗುತ್ತಿದೆ. ಫಿಟ್‌ನೆಸ್ ಸರ್ಟಿಫಿಕೇಟ್‌ಗೆ ದಂಡವಾಗಿ ದಿನಕ್ಕೆ 50 ರಂತೆ ಏರಿಕೆ ಮಾಡಲಾಗಿದೆ, 100 ರೂ. ಇದ್ದ ನೋಂದಣಿ ದರವನ್ನು 1000 ರೂ.ಗೆ, 100 ರೂ. ಇದ್ದ ಎಚ್‌ಪಿ ಎಂಟ್ರಿ ದರವನ್ನು 1500 ರೂ. , 200 ರೂ. ಇದ್ದ ನವೀಕರಣ ದರವನ್ನು 600 ರೂ., 5500 ರೂ. ಇದ್ದ ಹೊಸ ರಿಕ್ಷಾ ಇನ್ಶೂರೆನ್ಸ್‌ನ್ನು 7500 ರೂ. , 10,000 ರೂ. ಮೌಲ್ಯದ ಹಳೆ ರಿಕ್ಷಾ 3 ನೇ ಪಾರ್ಟಿ ಇನ್ಶೂರೆನ್ಸ್ ಮಾಡಿಸಲು 5000 ರೂ. ಹೀಗೆ ವಿಪರೀತ ಏರಿಕೆ ಮಾಡಲಾಗಿದೆ. ಕೇಂದ್ರ ಸರಕಾರ ಹೇರುತ್ತಿರುವ ಎಲ್ಲಾ ರೀತಿಯ ತೆರಿಗೆಯಿಂದ ಬಡವರಿಗೆ ತೊಂದರೆಯಾಗುತ್ತಿದೆ. ಇತರ ವಾಹನಗಳ ಜತೆ ಸೇರಿಸದೆ ಬಾಡಿಗೆ ಆಧಾರದ ದಿನಗೂಲಿಯನ್ನು ಅವಲಂಭಿಸಿರುವ ರಿಕ್ಷಾ ಚಾಲಕರಿಗೆ ಇದರಿಂದ ರಿಯಾಯಿತಿ ನೀಡಬೇಕು ಎಂದು ಅವರು ಆಗ್ರಹಿಸಿದರು.
ಎಲ್ಲಾ ರೀತಿಯ ಕಾರ್ಮಿಕರಿಗೆ ಸರಕಾರ ಸೌಲಭ್ಯಗಳನ್ನು ನೀಡುತ್ತಿರುವ ಸರ್ಕಾರ ಅತಿ ಹೆಚ್ಚು ತೆರಿಗೆಗಳನ್ನು ಪಾವತಿಸುವ ರಿಕ್ಷಾ ಸಂಬಂ ಕಾರ್ಮಿಕರಿಗೆ ಯಾವುದೇ ಸೌಲಭ್ಯ ನೀಡುತ್ತಿಲ್ಲ. ಈ ಕಾರಣದಿಂದ ರಿಕ್ಷಾ ಚಾಲಕರಿಗೆ ಕನಿಷ್ಠ ಇಎಸ್‌ಐ ಸೌಲಭ್ಯವನ್ನಾದರೂ ನೀಡಬೇಕು ಎಂದು ಅವರು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಎಂಎಸ್ ರಿಕ್ಷಾ ಚಾಲಕ -ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಭಾಸ್ಕರ ನೆಹರೂನಗರ, ಮಾಜಿ ಗೌರವಾಧ್ಯಕ್ಷ ದೇವಪ್ಪ ಗೌಡ, ಜಿಲ್ಲಾ ಕಾರ್ಯದರ್ಶಿ ಮೋಹನ್ ಹೆಗ್ಡೆ, ಮೋಟಾರು ಮತ್ತು ಮಜ್ದೂರ್ ಸಂಘ ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ್ ಉಪಸ್ಥಿತರಿದ್ದರು.







