ಓಂಪುರಿ ಚಿರಂತನ ಚಿತ್ರದ ಹೊಸ ಅಲೆ ನಿತ್ಯನೂತನ

ಗೋವಿಂದ್ ನಿಹಲಾನಿ ಅವರ ಅರ್ಧ್ ಸತ್ಯ ಚಿತ್ರದಲ್ಲಿ ಓಂಪುರಿ ಸಬ್ ಇನ್‌ಸ್ಪೆಕ್ಟರ್ ಅನಂತ್ ವೇಲಂಕರ್ ಪಾತ್ರದಲ್ಲಿ ಕಾಣಿಸಿಕೊಂಡಾಗ ನಾವು ಎದ್ದುನಿಂತು ವ್ಹಾವ್ ಎಂದು ಉದ್ಗರಿಸಿದೆವು. ಒಬ್ಬ ಪ್ರಾಮಾಣಿಕ ಪೊಲೀಸ್ ಅಧಿಕಾರಿ ವ್ಯವಸ್ಥೆಯು ವಿರುದ್ಧ ಹೋರಾಡುವ ಕಥೆ ಅದು.
ಗೋವಾದಲ್ಲಿ 2012ರಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ವೃತ್ತಿಸಾಮರ್ಥ್ಯದ ನಾನು ಓಂಪುರಿಯವರನ್ನು ಭೇಟಿ ಮಾಡಿದ್ದೆ. ಭಾರತೀಯ ಪನೋರಮಾ ವಿಭಾಗದ ಆರಂಭಿಕ ಚಿತ್ರವಾಗಿ ಪ್ರದರ್ಶನಗೊಂಡ ಶಿವೇಂದ್ರ ಸಿಂಗ್ ಡುಂಗರಾಪುರ ಅವರ ‘‘ಸೆಲ್ಯುಲಾಯ್ಡೆ ಮ್ಯಾನ್’’ ಸಾಕ್ಷ್ಯಚಿತ್ರ ವೀಕ್ಷಣೆಗೆ ನಮ್ಮ ಆಹ್ವಾನವನ್ನು ಅವರು ಸಂತೋಷದಿಂದಲೇ ಒಪ್ಪಿಕೊಂಡರು. ಅವರು ನಮ್ಮ ಆಹ್ವಾನ ಸ್ವೀಕರಿಸಿ ಬಂದದ್ದಕ್ಕೆ ಕೃತಜ್ಞತೆ ಹೇಳಿದಾಗ, ಟಿಪಿಕಲ್ ಪಂಜಾಬಿ ಶೈಲಿಯಲ್ಲಿ, ‘‘ಹಮ್ ತೋ ವಾಲೆ ಹೈನ್, ಜಬ್ ಚಾಹೇ ಬೋಲಾ ಲೋ, ಹಮ್ ಹಾಝಿರ್ ಹೊ ಜಾಯೇಗೆ’’ (‘ನನಗಂತೂ ಕೆಲಸ ಇಲ್ಲ. ನನ್ನನ್ನು ಯಾವಾಗ ಬೇಕಾದರೂ ಕರೆಯಿರಿ’ ಎಂದು ಹಾಸ್ಯಚಟಾಕಿ ಹಾರಿಸಿದ್ದರು.
200ಕ್ಕೂ ಹೆಚ್ಚು ಚಿತ್ರಪ್ರೇಮಿಗಳು ನೆರೆದಿದ್ದ ಆ ಸಂದರ್ಭದಲ್ಲಿ ಪುರಿ ಬಹುಶಃ, ಬಹುತೇಕ ಮಂದಿ ಭಾರತೀಯ ಚಿತ್ರಪ್ರೇಮಿಗಳು, ತಾವು ಅವಿಭಾಜ್ಯ ಅಂಗವಾಗಿದ್ದ ಹೊಸ ಅಲೆ ಸಿನೆಮಾವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಸುಳಿವು ನೀಡಿದ್ದರು.
ಆದರೆ ಓಂಪುರಿ ಅವರ ಆತಂಕ ಸುಳ್ಳಾಯಿತು. ಅವರ ಚಿತ್ರಗಳು, ಅವರ ಸ್ನೇಹಿತರು ಹಾಗೂ ಸಮಕಾಲೀನರ ಚಿತ್ರಗಳು ಎಂದಿಗೂ ಪ್ರಸ್ತುತ. ಭಾರತೀಯ ಚಿತ್ರರಂಗದ ಆರಂಭಿಕ ಎರಡು ತಲೆಮಾರು ಕನಿಷ್ಠ ಶ್ಯಾಮ್ ಬೆನಗಲ್, ಗೋವಿಂದ್ ನಿಹಲಾನಿ ಹಾಗೂ ಇತರ ಭಾರತೀಯ ಹೊಸ ಅಲೆ ನಿರ್ದೇಶಕರಿಂದ ಸ್ಫೂರ್ತಿ ಪಡೆದಿವೆ. 1970ರ ದಶಕ, ಭಾರತೀಯ ಹಿಂದಿ ಚಿತ್ರರಂಗದ ಪುನರುತ್ಥಾನ ಕಾಲ. ಭಾರತದ ಆ ತಲೆಮಾರು ಅಂತಹ ಅಪೂರ್ವ ಚಿತ್ರಗಳಿಗೆ ಸಾಕ್ಷಿಯಾಗುವ ಅದೃಷ್ಟ ಪಡೆದಿತ್ತು.
ಅಂದರೆ 1961ರಿಂದ 1981ರ ಅವಧಿಯಲ್ಲಿ ಹುಟ್ಟಿದ ಈ ತಲೆಮಾರನ್ನು ಸಾಮಾನ್ಯವಾಗಿ ಜಡ, ಸಿನಿಕತನದ ಹಾಗೂ ಅಸಂತುಷ್ಟ ಪೀಳಿಗೆ ಎಂದು ವರ್ಗೀಕರಿಸಲಾಗುತ್ತದೆ. ಭಾರತದಲ್ಲಿ ಚಿತ್ರವೀಕ್ಷಕರಾಗಿ, ನಾವು ಅಸಂತುಷ್ಟ ಹಾಗೂ ಮನವೊಲಿಸಲು ಕಷ್ಟವಾದ ವರ್ಗ ಎಂಬ ಅರ್ಥ. ಪ್ರತಿ ಶುಕ್ರವಾರ ಮೂರು ಗಂಟೆ ಕಾಲ ತಮ್ಮ ಕನಸುಗಳನ್ನು ಮಾರಾಟ ಮಾಡುವಷ್ಟು ಬಂಡವಾಳ ಹಿಂದಿ ಚಿತ್ರರಂಗದಲ್ಲಿ ಇರಲಿಲ್ಲ. ಬಾಲಿವುಡ್ ಸಿನೆಮಾ ಜಗತ್ತಿನಿಂದಾಚೆ ದೃಷ್ಟಿ ಹಾಯಿಸಿದ್ದ ನಾವು, ಬದಲಾವಣೆಯನ್ನು ಸ್ವೀಕರಿಸಲು ಸಿದ್ಧರಿದ್ದೆವು. ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಹಾಗೂ ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಬಗ್ಗೆ ನಾವು ಕೇಳಿದ್ದೆವು. ಈ ಅದ್ಭುತ ಸಂಸ್ಥೆಗಳಿಂದ ಅಪೂರ್ವ ಪ್ರತಿಭೆಗಳು ಹೊರಹೊಮ್ಮಿದ್ದನ್ನು ನಾವು ನೋಡಿದ್ದೆವು.
ಎಪ್ಪತ್ತರ ದಶಕದ ಆರಂಭ, ರಾಜೇಶ್ ಖನ್ನಾ ಯುಗಾಂತ್ಯವಾಗಿ ಅಮಿತಾಬ್ ಬಚ್ಚನ್ ದಿಗಂತದಲ್ಲಿ ಹೊಳೆಯುವ ಹೊತ್ತು. ಹಿಂದಿನ ವರ್ಷಗಳ ಘಟನಾವಳಿಗಳಿಂದ ಈ ಯುಗದ ಚಿತ್ರ ಪ್ರಭಾವಿತವಾಗಿದ್ದವು. 50 ಹಾಗೂ 60ರ ದಶಕದಲ್ಲಿ ಮುಂಬೈಗೆ ಬಂಗಾಳದಿಂದ ಆಮದಾಗಿದ್ದ ಬಿಮಲ್ ರಾಯ್, ಹೃಷಿಕೇಶ್ ಮುಖರ್ಜಿ, ಬಸು ಭಟ್ಟಾಚಾರ್ಯ, ಬಸು ಚಟರ್ಜಿ ಮತ್ತಿತರರು ಸಾಮಾನ್ಯ ಭಾರತೀಯರ ಬಗೆಗೆ ಸಮಾಜವಾದಿ ಮುಖ ಪರಿಚಯಿಸುವ ಚಿತ್ರಗಳನ್ನು ನಿರ್ಮಿಸತೊಡಗಿದರು. ನೆಹರೂ ಅವರ ಸಮಾಜವಾದದಿಂದ ಪ್ರಭಾವಿತರಾಗಿದ್ದ ಇವರು, ಹೊಸ ಭಾರತ ತನ್ನ ಸ್ವಂತ ಕಾಲಲ್ಲಿ ನಿಲ್ಲುವುದನ್ನು ಪ್ರತಿಬಿಂಬಿಸುವ ಪ್ರಯತ್ನ ಮಾಡಿದರು.
70ರ ದಶಕದ ವೇಳೆಗೆ ನೆಹರೂ ನಿರ್ಗಮನದ ಬಳಿಕ, ಭ್ರಷ್ಟಾಚಾರ ಸಾರ್ವಜನಿಕ ಜೀವನದಲ್ಲಿ ವ್ಯಾಪಿಸತೊಡಗಿತು. ಹಣದುಬ್ಬರ, ನಿರುದ್ಯೋಗ, ಭ್ರಷ್ಟಾಚಾರದ ಬಿಸಿ ಜನಸಾಮಾನ್ಯರನ್ನು ತಟ್ಟಿತು. ಸಂವಿಧಾನಾತ್ಮಕ ವೌಲ್ಯಗಳಿಗೆ ಅಪಾಯ ಒದಗಿತು. ಇದು ಹೊಸ ಬಗೆಯ ಸಿನೆಮಾರಂಗಕ್ಕೆ ಮುನ್ನುಡಿಯಾಯಿತು.
ಅದ್ಭುತ ಶಬ್ದಲಹರಿ, ಕಥೆಗಾರಿಕೆಯೊಂದಿಗೆ ಶ್ಯಾಂ ಬೆನಗಲ್ ರಂಗಪ್ರವೇಶ ಮಾಡಿ, ಪ್ರೇಕ್ಷಕರನ್ನು ನಿಬ್ಬೆರಗುಗೊಳಿಸಿದರು. ತುಳಿತದ ವಿರುದ್ಧ ಜನಸಾಮಾನ್ಯರ ಧ್ವನಿಯನ್ನು ಬಿಂಬಿಸುವ ಕಥೆಗಳು ಇವು. ಬೆನಗಲ್ ಅವರ ಪ್ರತಿಭಾವಂತ ಕಲಾವಿದರಾದ ಶಬಾನಾ ಆಜ್ಮಿ, ಸ್ಮಿತಾ ಪಾಟೀಲ್, ನಾಸಿರುದ್ದೀನ್ ಶಾ, ಓಂ ಪುರಿ, ಅನಂತ್ ನಾಗ್, ಅಮರೇಶ್ ಪುರಿ ಹಾಗೂ ಕುಲಭೂಷಣ ಖರ್ಬಾನಂದ ಅವರು ಭಾರತೀಯರ ಕಲ್ಪನಾಲೋಕಕ್ಕೆ ಲಗ್ಗೆ ಇಟ್ಟರು. ಹಳೆಯ ಮಾಮೂಲಿ ಮಸಾಲೆ ಚಿತ್ರಗಳನ್ನು ಭಿತ್ತಿಪಟಲದಿಂದ ಕಿತ್ತೆಸೆಯುವ ಪ್ರಯತ್ನ ಮಾಡಿದರು. ಬೆನಗಲ್ ಅವರ ಜತೆಗೆ ಅವರ ಚಿತ್ರಗಳ ಸಿನೆಮಾಟೋಗ್ರಾಪರ್ ಆಗಿದ್ದ ಗೋವಿಂದ್ ನಿಹಲಾನಿ ಹಿಂದುಳಿಯಲು ಸಾಧ್ಯವೇ?
ಹಿಂದಿ ಚಿತ್ರರಂಗದ ಇಂಪು, ಮಾಧುರ್ಯ ನಿಧಾನವಾಗಿ ಮರೆಯಾಗುತ್ತಿದ್ದ ಸಂದರ್ಭದಲ್ಲಿ ಅಂದರೆ 80ರ ದಶಕದಲ್ಲಿ ಚಿತ್ರಸಂಗೀತ ದಿಗ್ಗಜರು ಕೂಡಾ ಉದಯಿಸಿದರು. ವೀಡಿಯೊ ಕ್ಯಾಸೆಟ್ ರೆಕಾರ್ಡರ್‌ಗಳಂತೂ ಚಿತ್ರಗಳನ್ನು ಮನೆಮನೆಗೆ ತಲುಪಿಸಿದವು. ಗುಣಮಟ್ಟದ ಬದಲಾಗಿ ಪ್ರಮಾಣ ಹೆಚ್ಚಿತು. ಬಹುತೇಕ ವಾಣಿಜ್ಯ ಚಿತ್ರರಂಗದ ಎಲ್ಲ ವಿಭಾಗಗಳಲ್ಲೂ ಗುಣಮಟ್ಟ ಕ್ಷೀಣಿಸುತ್ತಾ ಬಂತು.
1983ರಲ್ಲಿ ಬಚ್ಚನ್ ಅವರ ಕೂಲಿ, ರಾಜೇಶ್ ಖನ್ನಾ ಅವರ ಮರುಪ್ರವೇಶದ ಅವತಾರ್, ಹಿಂದಿಯ ಹಿಮ್ಮತ್‌ವಾಲಾ ಚಿತ್ರದ ತೆಲುಗು ಅವತರಣಿಕೆ, ಜಾಕಿ ಶ್ರಾಪ್ ಅವರ ಚೊಚ್ಚಲ ಹೀರೊ ತೆರೆಕಂಡವು. ಗೋವಿಂದ್ ನಿಹಲಾನಿ ಅವರ ಅರ್ಧ್ ಸತ್ಯ ಚಿತ್ರದಲ್ಲಿ ಓಂಪುರಿ ಸಬ್ ಇನ್‌ಸ್ಪೆಕ್ಟರ್ ಅನಂತ್ ವೇಲಂಕರ್ ಪಾತ್ರದಲ್ಲಿ ಕಾಣಿಸಿಕೊಂಡಾಗ ನಾವು ಎದ್ದುನಿಂತು ವ್ಹಾವ್ ಎಂದು ಉದ್ಗರಿಸಿದೆವು. ಒಬ್ಬ ಪ್ರಾಮಾಣಿಕ ಪೊಲೀಸ್ ಅಧಿಕಾರಿ ವ್ಯವಸ್ಥೆಯು ವಿರುದ್ಧ ಹೋರಾಡುವ ಕಥೆ ಅದು. ಅರ್ಧಸತ್ಯ ಚಿತ್ರದಲ್ಲಿ ಸದಾಶಿವ ಅಮರಾಪುರಕರ್ ಅವರು ರಾಮಶೆಟ್ಟಿ ಪಾತ್ರದಲ್ಲಿ ಮಿಂಚಿ, ಒಬ್ಬ ಖಳನಾಯಕ ಹೀಗಿರಬೇಕು ಎಂಬ ತಪ್ಪುಕಲ್ಪನೆಯನ್ನು ತೊಡೆದುಹಾಕಿದರು.
ಝಂಜೀರ್ (1973) ಹಾಗೂ ಅರ್ಧ ಸತ್ಯ (1983) ನಡುವಿನ ವ್ಯತ್ಯಾಸ ಎದ್ದುಕಾಣುವಂಥದ್ದು. ಝಂಜೀರ್ ಚಿತ್ರಕಥೆಯನ್ನು ಬರೆದದ್ದು ಸಲೀಂ ಜಾವೇದ್. ಯುವ ಪೊಲೀಸ್ ಅಧಿಕಾರಿ ನಿರ್ಭೀತಿಯಿಂದ ತನ್ನ ಎದುರು ಕಾಣುವ ಶತ್ರುವನ್ನು ಸದೆಬಡಿಯುವುದು ಇದರ ಕಥಾವಸ್ತು. ಅರ್ಧಸತ್ಯ, ವಿಜಯ ತೆಂಡೂಲ್ಕರ್ ಅವರ ಚಿತ್ರಕಥೆಯನ್ನು ಆಧರಿಸಿದ್ದು, ಹೆಚ್ಚು ಸೂಕ್ಷ್ಮವಾದದ್ದು. ಅದು ಒಬ್ಬ ಪೊಲೀಸ್ ಅಧಿಕಾರಿಯ ಸಂಕೀರ್ಣತೆ ಹಾಗೂ ಸವಾಲುಗಳನ್ನು ಹಂತಹಂತವಾಗಿ ಅನಾವರಣಗೊಳಿಸುತ್ತಾ ಹೋಗುತ್ತದೆ. ಅದರಲ್ಲಿ ರಾಜಕೀಯ ಹಾಗೂ ಅಪರಾಧ ಜಗತ್ತಿನ ನಡುವಿನ ಅಪವಿತ್ರ ಮೈತ್ರಿ ಪ್ರಮುಖ. ಮೂರ್ಖತನ ಹಾಗೂ ಸಾಹಸದ ನಡುವೆ ಪುಟ್ಟ ಭಿನ್ನತೆಯ ಗೆರೆ ಇದೆ. ಮಹಾಭಾರತದ ಧೀರ ಅಭಿಮನ್ಯು ಮಾತ್ರ ಸಾವು ನಿಶ್ಚಿತ ಎಂದು ತಿಳಿದಿದ್ದರೂ, ನಿರ್ಭೀತಿಯಿಂದ ಯುದ್ಧ ಮಾಡಬಲ್ಲ. ಅರ್ಧಸತ್ಯ, ಪೊಲೀಸರ ಬಗೆಗಿನ ವಾಸ್ತವತೆಯನ್ನು ಚೆನ್ನಾಗಿ ಸೆರೆಹಿಡಿದ ಅತ್ಯುತ್ತಮ ಚಿತ್ರ ಎಂಬ ಹೆಗ್ಗಳಿಕೆಯನ್ನು ಇಂದಿಗೂ ಹೊಂದಿದೆ.
ಭಾರತದ ಸುಶಿಕ್ಷಿತ ವರ್ಗ, ಕಮರ್ಷಿಯಲ್ ಹಿಂದಿ ಸಿನೆಮಾಗಳನ್ನು ಪ್ರಶ್ನಿಸಲು ಆರಂಭಿಸಿತು. ಈ ಚಿತ್ರಗಳು ವಿಸಿಡಿ ಹಾಗೂ ದೂರದರ್ಶನದಲ್ಲಿ ಮಾತ್ರ ಲಭ್ಯವಿದ್ದರೂ, ಭಾರತದ ಹೊಸ ಅಲೆ ಚಿತ್ರ ನಿರ್ದೇಶಕರು ಸೃಷ್ಟಿಸಿದ ಜಗತ್ತನ್ನು ಹೊಗಳಲು ಆರಂಭಿಸಿತು. ದೋಸ್ತಾನಾ ಮೂಲಕ ಝೀನತ್ ಅಮಾನ್ ನಮ್ಮ ಚಿತ್ತಪಟದಲ್ಲಿ ಉಳಿಯುತ್ತಾರೆ ಎಂದಾದರೆ, ಶಬಾನಾ ಅಜ್ಮಿ ಅಥವಾ ಸ್ಮಿತಾ ಪಾಟೀಲ್ ಇವರಲ್ಲಿ ಯಾರು ಒಳ್ಳೆಯ ನಟಿ ಎಂಬ ಬಗ್ಗೆ ನಮ್ಮಲ್ಲೇ ತುಮುಲ ಆರಂಭವಾಗುತ್ತದೆ. ದೋ ಔರ್ ದೋ ಪಾಂಚ್ (1980) ಚಿತ್ರದಲ್ಲಿ ಅಮಿತಾಬ್ ಬಚ್ಚನ್ ಅವರ ಹಾಸ್ಯ ನಟನೆ ನಮಗೆ ಖುಷಿ ಕೊಡುತ್ತದೆಯಾದರೆ, ನಿಸ್ಸಂದೇಹವಾಗಿ ಜಾನೇ ಭಿ ದೋ ಯಾರೋ (1983) ಚಿತ್ರದ ಅಹೂಜಾ (ಓಂಪುರಿ) ಹಾಗೂ ತರ್ನೇಜಾ (ಪಂಕಜ್ ಕಪೂರ್) ಪಾತ್ರಗಳೂ ಇಷ್ಟವಾಗುತ್ತವೆ. ರಿಚರ್ಡ್ ಅಟೆನ್‌ಬರ್ಗ್ ಅವರ ಗಾಂಧಿ ಅಥವಾ ನಿಹಲಾನಿ ಅವರ ಥಾಮಸ್‌ನಂಥ ಚಿತ್ರಗಳು ದೂರದರ್ಶನದಲ್ಲಿ ಮತ್ತೆ ಮತ್ತೆ ಪ್ರಸಾರವಾದಾಗಲೆಲ್ಲ ನಾವು ಭಾರತದ ಹೊಸ ಅಲೆ ಚಿತ್ರಗಳ ಜನಕರ ಜತೆ ನಗುತ್ತಲೇ ಇರುತ್ತೇವೆ ಅಥವಾ ಅಳುತ್ತಲೇ ಇರುತ್ತೇವೆ. (ಗಾಂಧಿ ಚಿತ್ರದಲ್ಲಿ ಓಂಪುರಿ ಉಪವಾಸ ನಿರತ ಗಾಂಧಿಯತ್ತ ಚಪಾತಿ ಎಸೆದು ತಿನ್ನುವಂತೆ ಬೋಧಿಸುತ್ತಾರೆ).
ಗೊಂದಲದ 90ರ ದಶಕ ಹಾಗೂ ಅತಂತ್ರ 2000ದ ಬಳಿಕ ಇದೀಗ ಹಿಂದಿ ಚಿತ್ರರಂಗ ಮತ್ತೆ ಸರಿದಾರಿಗೆ ಬಂದಿದೆ. ನವಾಝುದ್ದೀನ್ ಸಿದ್ದಿಕಿ ಹಾಗೂ ಇರ್ಫಾನ್ ಖಾನ್‌ನಂಥ ಪ್ರತಿಭಾವಂತ ನಟರು, ರಣಬೀರ್ ಕಪೂರ್ ಹಾಗೂ ರಣವೀರ್ ಸಿಂಗ್ ಅವರಂತೆ ದೊಡ್ಡ ಅಭಿಮಾನಿ ವರ್ಗ ಹೊಂದಿದ್ದಾರೆ. ತಲ್ವಾರ್, ನೀರ್ಜಾ, ನಿಲ್ ಬಟ್ಟಿ ಸನ್ನತಾ ಮತ್ತು ಪಿಂಕ್‌ನಂಥ ಹಲವು ಚಿತ್ರಗಳು ವಾಸ್ತವ ವ್ಯಕ್ತಿಗಳ ವಾಸ್ತವ ಚಿತ್ರಣವನ್ನು ತೆರೆದಿಡುತ್ತವೆ. ಪರಿಪೂರ್ಣ ಯುವಕ ಯುವತಿಯರು ವಿದೇಶಿ ನೆಲದ ಬಗ್ಗೆ ಹುಚ್ಚು ವ್ಯಾಮೋಹ ಹೊಂದಿರುವ ಬಗ್ಗೆ, ಅರ್ಥ ತಿಳಿಯದಿದ್ದರೂ ಉರ್ದು ಕಾವ್ಯ ಗುನುಗುವ ಬಗ್ಗೆ ಬಾಲಿವುಡ್ ಚಿತ್ರಗಳನ್ನು ನಿರ್ಮಿಸಲಿ. ಸಿನೆಮಾ ಇರುವವರೆಗೂ ಭಾರತದ ಮಣ್ಣಿನ ವಾಸನೆ ಇರುವ ಜನಸಾಮಾನ್ಯರ ಬಗೆಗಿನ ವಾಸ್ತವ ಚಿತ್ರಗಳಿಗೆ ಜಾಲ ಇದೆ. ಎನ್‌ಎಸ್‌ಡಿ ಅಮರವಾಗಲಿ; ಎಫ್‌ಟಿಐಐ ಅಮರವಾಗಲಿ.







