ಸಮಾಧಿಗೆ ಕೆಲವೇ ಕ್ಷಣ ಮೊದಲು ಶವಪೆಟ್ಟಿಗೆಯಿಂದ ಎದ್ದು ಕುಳಿತ ಶವ!
.jpg)
ಬೀಜಿಂಗ್, ಜ. 14: ಅವರಿಗೆ 75 ವರ್ಷ. ಒಂದು ದಿನ ಕಣ್ಣು ಮುಚ್ಚಿದರು. ಮನೆಯವರು ಅವರನ್ನು ಶವಪೆಟ್ಟಿಗೆಯಲ್ಲಿಟ್ಟು ಸ್ಮಶಾನಕ್ಕೆ ಕೊಂಡು ಹೋದರು. ಇನ್ನೇನು ಸಮಾಧಿ ಮಾಡಬೇಕು ಎನ್ನುವಷ್ಟರಲ್ಲಿ ಶವಪೆಟ್ಟಿಗೆಯಲ್ಲಿ ನಿಧಾನವಾಗಿ ಕಣ್ಣು ತೆರೆದ ಅಜ್ಜ, ‘‘ನನ್ನನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀರಿ?’’ ಎಂದು ಶಾಂತವಾಗಿ ಪ್ರಶ್ನಿಸಿದರು.
ಘಟನೆ ಚೀನಾದ ಸಿಚುವಾನ್ ಪ್ರಾಂತದಲ್ಲಿ ನಡೆದಿದೆ. ಹ್ವಾಂಗ್ ಮಿಂಗ್ ಕುವಾನ್ ಶೀತದಿಂದ ಬಳಲುತ್ತಿದ್ದರು. ಅವರ ಪಾದಗಳು ಮತ್ತು ಕೈಗಳು ಶೀತಗಟ್ಟಿದ್ದವು. ಅವರು ಉಸಿರಾಡುವುದನ್ನು ನಿಲ್ಲಿಸಿ ಬಿಟ್ಟರು. ಅವರು ಮೃತಪಟ್ಟರು ಎಂಬುದಾಗಿ ಮಗ ಮತ್ತು ಸಂಬಂಧಿಕರು ಭಾವಿಸಿದರು.
ಮನೆಯವರು ಅಂತ್ಯಸಂಸ್ಕಾರಕ್ಕೆ ಸಿದ್ಧತೆಗಳನ್ನು ನಡೆಸಿದರು. ಗಂಟೆಗಳ ಬಳಿಕ ಅವರಿದ್ದ ಶವಪೆಟ್ಟಿಗೆಯನ್ನು ಹೊಂಡಕ್ಕೆ ಇಳಿಸಲು ಸಿದ್ಧತೆ ನಡೆಯುತ್ತಿದ್ದಾಗ ಅದರ ಮರದ ಬಾಗಿಲನ್ನು ದೂಡಿ ಕುವಾನ್ ಎದ್ದು ಕುಳಿತರು. ತನ್ನ ಮಕ್ಕಳಲ್ಲಿ ಕೇಳಿದರು: ‘‘ಏನಾಗುತ್ತಿದೆ ಇಲ್ಲಿ? ಇದು ನನ್ನ ಅಂತ್ಯಸಂಸ್ಕಾರವಾ?’’
ಮಾಲೆಗಳು, ಒಡವೆಗಳು ಮತ್ತು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಬಂದಿದ್ದ ತನ್ನ ಸಂಬಂಧಿಕರನ್ನು ನೋಡಿದೆ ಎಂದು ಕುವಾನ್ ಹೇಳಿದರು.
ಅವರ ಮಗ ತಕ್ಷಣ ತನ್ನ ತಂದೆಯನ್ನು ಶವಪೆಟ್ಟಿಗೆಯಿಂದ ಹೊರಗೆಳೆದರು ಹಾಗೂ ನಡೆದಿರುವ ಪ್ರಮಾದಕ್ಕಾಗಿ ನೆರೆದವರ ಕ್ಷಮೆ ಕೋರಿದರು.







