ನಿಡ್ಡೋಡಿ: ಹುಲಿ ದಾಳಿ, ಕರು ಸಾವು

ಮಂಗಳೂರು, ಜ.14: ನಿಡ್ಡೋಡಿ ಗ್ರಾಮದ ಕಲ್ಲಕುಮೇರು ಪಲ್ಕೆಯ ಮಚ್ಚಾರು ಬಾಳಿಕೆ ಎಂಬಲ್ಲಿನ ಲೊಕೇಶ್ ಶೆಟ್ಟಿ ಎಂಬವರ ಮನೆಯ ಹಿಂಬದಿಯ ಕೊಟ್ಟಿಗೆಗೆ ದಾಳಿ ನಡೆಸಿದ ಹುಲಿ ಹೆಣ್ಣು ಕರುವನ್ನು ಸಾಯಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ.
ತಡರಾತ್ರಿ ಸುಮಾರು ಎರಡು ಗಂಟೆಗೆ ಹುಲಿ ದಾಳಿ ನಡೆಸಿದೆ ಎನ್ನಲಾಗಿದೆ. ಮನೆಯ ಹಿಂಭಾಗದಲ್ಲಿದ್ದ ಕೊಟ್ಟಿಗೆಯ ಹೊರಭಾಗ ದಲ್ಲಿ ಕರುವನ್ನು ಕಟ್ಟಿಹಾಕಲಾಗಿತ್ತು. ನಿದ್ರೆ ಬಾರದೆ ಮನೆಯ ಹೊರಭಾಗದಲ್ಲಿ ಕುಳಿತು ಬೀಡಿ ಸೇದುತ್ತಿದ್ದ ನೆರೆಮನೆಯ ವ್ಯಕ್ತಿಯೊಬ್ಬರು ನಾಯಿ ಬೊಗಳಿದಾಗ ಬೆಳದಿಂಗಳಿನಲ್ಲಿ ಹುಲಿಯೊಂದು ಹಟ್ಟಿಯ ಕಡೆಗೆ ಬರುತ್ತಿರುವುದನ್ನು ನೋಡಿದ್ದರು. ತಕ್ಷಣ ತನ್ನ ಮನೆಯವರನ್ನು ಎಚ್ಚರಿಸಿ ಹೊರಗೆ ಬರಬೇಕೆಂದು ಯೋಚಿಸಿದ್ದರೂ ಧೈರ್ಯ ಸಾಲದೆ ಸುಮ್ಮನಾಗಿದ್ದರು ಎನ್ನಲಾಗಿದೆ.
ಕಳೆದ ವರ್ಷವೂ ಈ ಭಾಗದಲ್ಲಿ ಹುಲಿ ಮತ್ತು ಚಿರತೆಗಳ ಹಾವಳಿ ಇತ್ತು. ಕೆಲವು ಮನೆಗಳ ನಾಯಿಗಳು ನಾಪತ್ತೆಯಾಗಿದ್ದವು. ಜನರು ಭಯಭೀತರಾಗಿ ರಾತ್ರಿ ಹೊತ್ತು ಹೊರಗೆ ಬರುತ್ತಿರಲಿಲ್ಲ. ಮಾರ್ಚ್ ತಿಂಗಳ ನಂತರ ಈ ಪರಿಸರದಲ್ಲಿ ಹರಿಯುತ್ತಿರುವ ನದಿಯ ನೀರನ್ನು ಕುಡಿಯಲು ಬರುತ್ತಿದ್ದ ಹುಲಿ, ಚಿರತೆಗಳು ಈ ಬಾರಿ ಎರಡು ತಿಂಗಳ ಮುಂಚೆಯೇ ಕಾಣಿಸಿಕೊಂಡಿವೆ. ಇದರಿಂದ ನಿಡ್ಡೋಡಿ ಪರಿಸರದಲ್ಲಿ ಭೀತಿಯ ವಾತಾವರಣ ಉಂಟಾಗಿದೆ.
ಮೂಡುಬಿದಿರೆ ಅರಣ್ಯಾಧಿಕಾರಿಗೆ ಲೋಕೇಶ್ ಶೆಟ್ಟಿ ದೂರು ನೀಡಿದ್ದಾರೆ. ಅದರಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.







