ಕ್ಷುಲ್ಲಕ ಕಾರಣ :ವ್ಯಕ್ತಿಗೆ ಚಿತ್ರ ಹಿಂಸೆ ನೀಡಿದ ಪೊಲೀಸರು

ತಿರುವನಂತಪುರಂ,ಜ.14: ಕೇರಳದಲ್ಲಿ ಪೊಲೀಸ್ ದೌರ್ಜನ್ಯದ ಕತೆಗಳು ಒಂದೊಂದೆ ಬಾಲಬಿಚ್ಚುತ್ತಿವೆ. ಇದೀಗ ಬೈಕ್ ಸ್ಟಾಂಡ್ ಹಾಕುವ ವಿಚಾರದಲ್ಲಿ ನಡೆದ ಘರ್ಷಣೆಯಲ್ಲಿ ಯುವಕನೊಬ್ಬನನ್ನು ಪೊಲೀಸ್ ಠಾಣೆಗೆ ಎಳೆದೊಯ್ದು ಮಾರಕ ಹಲ್ಲೆ ನಡೆಸಿದ ಘಟನೆ ತಿರುವನಂತಪುರಂ ನೇಮಂ ಠಾಣೆಯಲ್ಲಿ ನಡೆದಿದೆ. ನೇಮಂನ ಶ್ರೀಜಿತ್ ಎಂಬವರು ಬೈಕ್ ಸ್ಟಾಂಡ್ ಮಾಡುವ ವೇಳೆ ಹತ್ತಿರದ ಬೈಕ್‌ನ ಮಿರರ್ ಪುಡಿಯಾಗಿತ್ತು. ಈ ವೇಳೆ ಮಾತಿನ ಚಕಮಕಿ ನಡೆದಿತ್ತು. ಇನ್ನೊಂದು ಬೈಕ್‌ನ ಮಾಲಕ ನೇಮಂ ಪೊಲೀಸರಿಗೆ ದೂರು ನೀಡಿದ್ದಾರೆ.
ಶ್ರೀಜಿತ್‌ನ್ನು ಮನೆಯಿಂದ ಕರೆದೊಯ್ದ ಪೊಲೀಸರು ನೇಮಂ ಠಾಣೆಯಲ್ಲಿ ಥರ್ಡ್‌ಡಿಗ್ರಿ ಉಪಚಾರ ನೀಡಿದ್ದಾರೆ. ಪೊಲೀಸರ ಏಟಿನಿಂದ ಶೀಜಿತ್‌ರ ಬೆನ್ನುಹುರಿ ಹಾಗೂ ಕತ್ತಿನ ಭಾಗಕ್ಕೆ ಹಾನಿಯಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ನಂತರ ಶ್ರೀಜಿತ್ ಪೊಲೀಸ್ ಕಮಿಶನರ್‌ಗೆ ನೇಮಂ ಪೊಲೀಸರ ವಿರುದ್ಧ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಶ್ರೀಜಿತ್ ತಮ್ಮ ತಾಯಿಯ ಶಸ್ತ್ರಕ್ರಿಯೆ ನಿಮಿತ್ತ ಇತ್ತೀಚೆಗೆ ಗಲ್ಫ್‌ನಿಂದ ಊರಿಗೆ ಬಂದಿದ್ದರು. ಮಿರರ್ ಒಡೆದ ಕಾರಣಕ್ಕೆ ಇಷ್ಟು ಭೀಬತ್ಸವಾಗಿಹೊಡೆದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಶ್ರೀಜಿತ್‌ರನ್ನು ನೇಮಂ ಎಸ್ಸೈ, ಸಂಪತ್, ಸಿವಿಲ್ ಪೊಲೀಸಧಿಕಾರಿ ಅರುಣ್ ನೇತೃತ್ವದಲ್ಲಿ ಪೊಲೀಸರು ಹಿಗ್ಗಾಮುಗ್ಗಾ ಥಳಿಸಿದ್ದರು..
ಕಳೆದ ಮಂಗಳವಾರ ಸಿಡಿ ಖರೀದಿಸಲು ಅಂಗಡಿಗೆ ತೆರಳಿದ್ದ ಶ್ರೀಜಿತ್ ತನ್ನ ಬೈಕನ್ನು ಅಂಗಡಿ ಮುಂದೆ ನಿಲ್ಲಿಸುವಾಗ ಸಮೀಪದ ಇನ್ನೊಂದು ಬೈಕ್‌ಮೇಲೆ ಬಿದ್ದಿತ್ತು. ತತ್ಪರಿಣಾಮ ಅವರ ಬೈಕ್ ಸಮೀಪವಿದ್ದ ಯುನಿಕೋನ್ ಬೈಕ್‌ನ ಮಿರರ್ ಒಡೆದು ಹೋಯಿತು. ತನ್ನ ಬೈಕ್ ಮಿರರ್ ಪುಡಿಯಾದದ್ದು ನೋಡಿ ಯುವಕನೊಬ್ಬ ಸಿಡಿ ಅಂಗಡಿಯಿಂದ ಅವಾಚ್ಯವಾಗಿ ಬೈಯುತ್ತ ಹತ್ತಿರಕ್ಕೆ ಬಂದಿದ್ದ. ಸ್ಡ್ಯಾಂಡ್ ಸರಿಯಾಗಿ ನಿಲ್ಲದ್ದರಿಂದ ಪ್ರಮಾದವಾಯಿತು ಎಂದು ಹೇಳಿದರೂ ಆತನ ಕೋಪ ತಣಿಯಲಿಲ್ಲ. ನಿನಗೆ ಬುದ್ಧಿ ಕಲಿಸುತ್ತೇನೆ ಎಂದು ಹೇಳಿ ಆತ ಹೊರಟು ಹೋಗಿದ್ದ. ಅಂದೇ ಸಂಜೆ ಪೊಲೀಸರು ಮನೆಯಲ್ಲಿದ್ದ ಶ್ರೀಜಿತ್‌ನನ್ನು ಎಳೆದುಕೊಂಡು ಹೋಗಿದ್ದರು. ಅದರ ಬೆನ್ನಿಗೆ ಶ್ರೀಜಿತ್‌ನ ತಾಯಿ ಮತ್ತು ಪತ್ನಿ ಠಾಣೆಗೆ ಹೋದಾಗ ಕೆಲವರು ಶ್ರೀಜಿತ್‌ಗೆ ಪೊಲೀಸರು ಹೊಡೆಯುತ್ತಿದ್ದಾರೆ ಎಂದು ತಿಳಿಸಿದ್ದರು. ಕೂಡಲೇ ಅವರು ಶ್ರೀಜಿತ್‌ರನ್ನು ಕೂಡಿಹಾಕಿ ಹೊಡೆಯುತ್ತಿದ್ದ ಕೋಣೆಗೆ ಹೋಗಿದ್ದಾರೆ. ಅಮ್ಮನನ್ನು ನೋಡಿದ ಶ್ರೀಜಿತ್ ಇಲ್ಲಿ ತನ್ನನ್ನು ಕೊಲ್ಲಲು ನೋಡುತ್ತಿದ್ದಾರೆ ಎಂದು ಹೇಳಿದ್ದರು.
ಶ್ರೀಜಿತ್‌ನ ಚೀರಾಟ ಕೇಳಿ ತಡೆಯಲಾಗದ ಪತ್ನಿ ಸವಿತಾ ಬೊಬ್ಬೆ ಹಾಕಿ ಅಳತೊಡಗಿದ್ದರು. ಇದನ್ನು ಕಂಡು ಪೊಲೀಸರು ಸವಿತಾರನ್ನು " ಇಲ್ಲಿಗೆ ಬಂದು ಶೋ ಮಾಡುತ್ತಿಯಾ ಎಂದು ಗದರಿಸಿದ್ದಾರೆ. "ಎಲ್ಲರನ್ನೂ ಒಳಗೆ ಹಾಕುತ್ತೇವೆ" ಎಂದು ಬೆದರಿಸಿದ್ದಾರೆಂದು ಕಮಿಶನರ್‌ಗೆ ತಿಳಿಸಿದ ದೂರಿನಲ್ಲಿ ಶ್ರೀಜಿತ್ ದೂರಿನಲ್ಲಿ ವಿವರಿಸಿದ್ದಾರೆ. ಕಮಿಶನರ್ ಪ್ರಕರಣದ ಕೂಲಂಕಷ ತನಿಖೆಗೆ ನೇಮಂ ಸರ್ಕಲ್ ಇನ್ಸ್‌ಪೆಕ್ಟರ್‌ಗೆ ಆದೇಶಿಸಿದ್ದಾರೆಂದು ವರದಿಯೊಂದು ತಿಳಿಸಿದೆ.







