ಆಳ್ವಾಸ್‌ಗೆ ರಾಜೀವ್ ಗಾಂಧಿ ವಿ.ವಿ ಸಂಶೋಧನಾ ಅನುದಾನ
ಮೂಡುಬಿದಿರೆ , ಜ.14 : ರಾಜೀವ್ ಗಾಂಧಿ ವಿ.ವಿ ಸಂಶೋಧನಾ ಅನುದಾನದಡಿಯಲ್ಲಿ ಪ್ರತ್ಯೇಕ ವಿಭಾಗಗಳಲ್ಲಿ ಅನುದಾನಕ್ಕೆ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು ಆಯ್ಕೆಯಾಗಿದೆ.
ಈ ಸಂಶೋಧನಾ ಅನುದಾನವು 2 ವರ್ಷಗಳ ಕಾಲಮಿತಿಯದ್ದಾಗಿದ್ದು, ಈ ಆಯ್ದ ಸಂಶೋಧನಾ ವಿಷಯಗಳು ವ್ಯಾಪಕ ಸಾಮಾಜಿಕ ಚಿಕಿತ್ಸೆಯ ಮಹತ್ವವನ್ನು ಪಡೆದಿವೆ. ಈ ಸಂಶೋಧನಾ ವಸ್ತು ವಿಷಯಗಳು ಸಾಂಪ್ರದಾಯಿಕ ಆರೋಗ್ಯ, ಮಾನಸಿಕ ಚಿಕಿತ್ಸೆ, ಚಿಕಿತ್ಸಾ ಕೌಶಲ, ಔಷಧಗಳ ಮಾನಕೀಕರಣದಂತಹ ಗಹನ ವಿಚಾರಗಳನ್ನು ಒಳಗೊಂಡಿವೆ.
ಈ ಸಂಶೋಧನಾ ಅನುದಾನವು ಪ್ರಾಧ್ಯಾಪಕರುಗಳಾದ ಡಾ.ಬಿ ವಿನಯಚಂದ್ರ ಶೆಟ್ಟಿ, ಡಾ.ಎಂ.ಎಸ್ ಕೃಷ್ಣಮೂರ್ತಿ, ಡಾ.ಅನಿಲ್ ರೈ, ಡಾ.ಶುಭದಾ ಹಾಗೂ ಡಾ. ಪ್ರಶಾಂತ್ ಬಿ.ಕೆ ಇವರಿಗೆ ಪ್ರತ್ಯೇಕ ವಿಷಯ ಆಧಾರಿತವಾಗಿ ಲಭಿಸಿದ್ದು, ಈ ಬಗೆಗೆ ಸಂಶೋಧನಾ ಕಾರ್ಯಗಳು ಆರಂಭಗೊಂಡಿದೆ. ಕಳೆದ ಎರಡು ವರ್ಷಗಳಿಂದ ರಾಜೀವ್ ಗಾಂಧಿ ವಿ.ವಿ ಒಳಗೊಂಡಂತೆ ಪ್ರತಿಷ್ಠಿತ ಆಯುರ್ವೇದ ಔಷಧಿ ತಯಾರಿಕಾ ಕಂಪೆನಿಗಳಾದ ಹಿಮಾಲಯ ಡ್ರಗ್ಸ್ ಕಂಪೆನಿ, ವಾಸು ಫಾರ್ಮಾಸುಟಿಕ್ಸ್. ಫೈಟೋ ಫಾರ್ಮ್, ಇನ್ನೋವಿಷನ್‌ಗಳಿಂದ ಪ್ರಾಯೋಜಿತ ಹಲವು ಸಂಶೋಧನಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ.
ನಿರಂತರ ಸಂಶೋಧನ ಚಟುವಟಿಕೆಗಳಿಗಾಗಿ ಕಾಲೇಜಿನ ಪ್ರಾಂಶುಪಾಲ ಡಾ.ಬಿ ವಿನಯಚಂದ್ರ, ಸಂಶೋಧನಾ ವಿಭಾಗದ ಡೀನ್ ಡಾ.ರವಿರಾವ್ ಅವರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.





