ಯುದ್ಧದಲ್ಲಿ ಪಾತ್ರ ವಹಿಸುವುದನ್ನು ಮಹಿಳೆಯರೇ ನಿರ್ಧರಿಸಬೇಕಿದೆ: ಲೆ.ಜ.ರಾವತ್

ಹೊಸದಿಲ್ಲಿ,ಜ.14: ಸೇನೆಯಲ್ಲಿ ಮಹಿಳೆಯರು ಹಾಗೂ ಪುರುಷರಿಗೆ ಸಮಾನ ಅವಕಾಶ ನೀಡುವುದನ್ನು ಪ್ರತಿಪಾದಿಸಿರುವ ಸೇನಾವರಿಷ್ಠ ಜನರಲ್ ಬಿಪಿನ್ ರಾವತ್ ಅವರು, ಯಾವುದೇ ಪ್ರತ್ಯೇಕ ಅಥವಾ ಹೆಚ್ಚುವರಿ ಸೌಲಭ್ಯಗಳಿಲ್ಲದೆಯೇ, ಮುಂಚೂಣಿಯಲ್ಲಿ ಕದನದಲ್ಲಿ ಪುರುಷರ ಜೊತೆ ತಾವು ಪಾಲ್ಗೊಳ್ಳಬೇಕೇ ಎಂಬುದನ್ನು ಸ್ವತಃ ಮಹಿಳೆಯರೇ ನಿರ್ಧರಿಸಬೇಕಾಗಿದೆಯೆಂದರು.
ಸೇನಾ ಮುಖ್ಯಸ್ಥರಾಗಿ ಅಧಿಕಾರವಹಿಸಿಕೊಂಡ ಬಳಿಕ ತನ್ನ ಮೊದಲ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಅವರು, ‘‘ ನೀವು ಇಡೀ ಸಮಾಜವನ್ನು ಸಮಗ್ರವಾಗಿ ನೋಡಬೇಕಾಗಿದೆ, ಮಹಿಳೆಯರಿಗೆ ನಾವು ಕದನದ ಪಾತ್ರವನ್ನು ವಹಿಸಿದಲ್ಲಿ, ಅವರು ತಮ್ಮ ಪುರುಷರ ಸಹವರ್ತಿಗಳೊಂದಿಗೆ ಸರಿಸಮಾನವಾದ ಹೊಣೆಗಾರಿಕೆಯನ್ನು ಹಂಚಿಕೊಳ್ಳಬೇಕಾಗುತ್ತದೆ’’ ಎಂದು ಹೇಳಿದರು.
ಮಹಿಳೆಯರು ಕದನ ಪಾತ್ರವನ್ನು ವಹಿಸಿಕೊಳ್ಳುವಾಗ ಎದುರಾಗಬಹುದಾದ ಸಮಸ್ಯೆಗಳನ್ನು ಈ ಸಂದರ್ಭದಲ್ಲಿ ಪಟ್ಟಿ ಮಾಡಿದ ರಾವತ್, ಟ್ಯಾಂಕ್‌ಗಳಲ್ಲಿ ಕರ್ತವ್ಯ ನಿರ್ವಹಿಸುಆಗ ಪುರುಷರ ರಾತ್ರಿ ಹೊತ್ತು ಯಾವುದೇ ಸೌಕರ್ಯಗಳಿಲ್ಲದೆ ಟ್ಯಾಂಕ್‌ನ ಕೆಳಗೆಯೇ ಮಲಗುತ್ತಾರೆ ಎಂದರು. ಮಹಿಳೆಯರು ಮುಂಚೂಣಿಗಳನ್ನು ಹೊರತುಪಡಿಸಿ ಸೇನೆಯ ಎಲ್ಲಾ ಸಶಸ್ತ್ರ ಘಟಕಗಳಲ್ಲಿದ್ದಾರೆಂದು ಬೆಟ್ಟು ಮಾಡಿ ತೋರಿಸಿದ ಜನರಲ್ ರಾವತ್, ಮಹಿಳಾ ಸೈನಿಕರು ಗಸ್ತು ತಿರುಗುವ ಸಂದರ್ಭದಲ್ಲಿ ಶೌಚಾಲಯದ ವ್ಯಸ್ಥೆಯೂ ಇರುವುದಿಲ್ಲವೆಂದು ಹೇಳಿದರು.
‘‘ ಒಂದು ವೇಳೆ ಅಂತಹ ಪರಿಸರಕ್ಕೆ ಹೊಂದಿಕೊಳ್ಳಲು ತಾವು ಸಿದ್ಧರಿದ್ದೇವೆ ಎಂಬುಜನ್ನು ಸ್ವತಃ ಮಹಿಳೆಯರೇ ನಿರ್ಧರಿಸಬೇಕಾಗಿದೆ ಎಂದರು. ಒಂದು ವೇಳೆ ಟ್ಯಾಂಕ್‌ನಲ್ಲಿ ಓರ್ವ ಅಥವಾ ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷ ಇದ್ದ ಸಂದರ್ಭದಲ್ಲಿ ಟ್ಯಾಂಕ್ ಕೆಳಗೆ ಮಲಗಲು ತಾವು ತಯಾರಿದ್ದೇವೆ ಎಂಬುದನ್ನು ಸ್ವತಃ ಮಹಿಳಾ ಸೈನಿಕರೇ ನಿರ್ಧರಿಸಬೇಕು ಎಂದರು. ಗಡಿಮುಂಚೂಣಿಯಲ್ಲಿ 20-25 ದಿನಗಳವರೆಗೂ ಗಸ್ತು ನಡೆಸಬೇಕಾಗುತ್ತದೆಯೆಂದ ಅವರು, ಅರುಣಾಚಲಪ್ರದೇಶದಲ್ಲಿ ಅದು 35 ದಿನಗಳವರೆಗೂ ಇರುತ್ತದೆಯೆಂದರು.
ಮಹಿಳೆಯರನ್ನು ಸಶಸ್ತ್ರ ಪಡೆಗಳ ಎಂಜಿನಿಯರ್‌ಗಳು ಹಾಗೂ ಸಿಗ್ನಲ್ಸ್ ವಿಭಾಗದಲ್ಲಿ ಸೇರ್ಪಡೆಗೊಳಿಸಲಾಗುತ್ತಿದೆಯಾದೂ, ಪದಾತಿದಳ, ಸಶಸ್ತ್ರ ಸೇನೆ ಹಾಗೂ ಯಾಂತ್ರಿಕೃತ ಪದಾತಿದಳದಿಂದ ಹೊರಗಿಡಲಾಗಿದೆ. ಆದಾಗ್ಯೂ ವಾಯುಪಡೆ ಈಗಾಗಲೇ ಮಹಿಳೆಯರನ್ನು ಕದನದ ಪಾತ್ರಕ್ಕೆ ಸೇರ್ಪಡೆಗೊಳಿಸಿದೆ, ಆದರೆ ಅವರನ್ನು ಮುಂಚೂಣಿಯ ನೆಲೆಗಳಲ್ಲಿ ನಿಯೋಜಿಸುತ್ತಿಲ್ಲ. ನೌಕಾಪಡೆಯು ತನ್ನ ವಿಮಾನಸಾಗಣಿಕೆ ಹಡಗುಗಳಿಂದ ಹಾರಾಟ ನಡೆಸದ ವಿಮಾನಗಳಲ್ಲಿ ಮಾತ್ರ ಮಹಿಳೆಯರಿಗೆ ಅವಕಾಶ ನೀಡಿದೆ. ಆದಾಗ್ಯೂ ಭವಿಷ್ಯದ ದಿನಗಳಲ್ಲಿ ಮಹಿಳಾ ಯೋಧರನ್ನು ಕೂಡಾ ಗಮನದಲ್ಲಿಟ್ಟುಕೊಂಡು ಹಡಗುಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ.







