ಯುಎಇಯಲ್ಲಿ ಮೊದಲ ರೋಬಟ್ ಔಷಧಾಲಯ

ದುಬೈ, ಜ. 14: ಯುನೈಟಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ‘ರೋಬಟ್ ನಿಯಂತ್ರಿತ ಔಷಧದ ಅಂಗಡಿ’ಯೊಂದು ಅಸ್ತಿತ್ವಕ್ಕೆ ಬಂದಿದೆ ಎಂದು ಮಾಧ್ಯಮ ವರದಿಯೊಂದು ಶುಕ್ರವಾರ ಹೇಳಿದೆ.
ದುಬೈಯ ರಶೀದ್ ಆಸ್ಪತ್ರೆಯ ಈ ಔಷಧಾಲಯದಲ್ಲಿ ವೈದ್ಯರು ಬರೆದುಕೊಟ್ಟಿರುವ ಔಷಧಿಗಳನ್ನು ನೀಡಲು ಒಂದು ಯಂತ್ರಮಾನವನನ್ನು ನಿಯೋಜಿಸಲಾಗಿದೆ. ಯಂತ್ರಮಾನವನು ಬಾರ್‌ಕೋಡ್‌ನ ಆಧಾರದಲ್ಲಿ ಔಷಧಿಗಳನ್ನು ನೀಡುತ್ತಿದೆ. ಒಂದು ಬಟನ್ ಒತ್ತಿದ ಕೂಡಲೇ ಔಷಧಿಗಳು ದೊರೆಯುತ್ತಿದ್ದು, ‘ಇಲ್ಲಿ ಮಾನವ ಸಹಜ ತಪ್ಪಿಗೆ ಅವಕಾಶವಿಲ್ಲ’ ಎಂದು ಯುಎಇ ಸರಕಾರದ ವಾರ್ತಾ ಸಂಸ್ಥೆ ಡಬ್ಲುಎಎಂನ್ನು ಉಲ್ಲೇಖಿಸಿ ಕ್ಸಿನುವಾ ವರದಿ ಮಾಡಿದೆ.
ಈ ಔಷಧದಂಗಡಿಯು ರವಿವಾರದಿಂದ ಗ್ರಾಹಕರಿಗೆ ಸೇವೆ ನೀಡಲು ಆರಂಭಿಸುತ್ತದೆ. ಅಲ್ಲಿ 35,000 ವರೆಗಿನ ಔಷಧಿಗಳನ್ನು ದಾಸ್ತಾನಿಡಬಹುದಾಗಿದೆ. ಅದು ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಸುಮಾರು 12 ಔಷಧಗಳನ್ನು ವಿತರಿಸುವ ಸಾಮರ್ಥ್ಯ ಹೊಂದಿದೆ. ಇದು ಗ್ರಾಹಕರ ಕಾಯುವ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.ತನ್ನ ಎಲ್ಲ ಆಸ್ಪತ್ರೆಗಳಲ್ಲಿ ರೋಬಟ್‌ಗಳನ್ನು ಬಳಸಿಕೊಳ್ಳಲು ಯೋಚಿಸುತ್ತಿರುವುದಾಗಿ ದುಬೈ ಆರೋಗ್ಯ ಪ್ರಾಧಿಕಾರ ಹೇಳಿದೆ.
2016-2021ರ ಯೋಜನೆಯನ್ನು ಈಡೇರಿಸುವುದಕ್ಕಾಗಿ ಪ್ರಾಧಿಕಾರವು ಬಳಸುತ್ತಿರುವ ನೂತನ ತಂತ್ರಜ್ಞಾನಗಳ ಪೈಕಿ ರೋಬಟ್ ಒಂದಾಗಿದೆ.







