ಬಿಕರ್ನಕಟ್ಟೆ: ಬಾಲ ಯೇಸು ಪುಣ್ಯ ಕ್ಷೇತ್ರದ ವಾರ್ಷಿಕೋತ್ಸವ

ಮಂಗಳೂರು, ಜ.14: ಪರಸ್ಪರ ಪ್ರೀತಿ, ಮಾನವೀಯತೆ ಮತ್ತು ಸೌಹಾರ್ದದ ಬದುಕಿನ ಜೊತೆಗೆ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದು ಬಳ್ಳಾರಿಯ ಬಿಷಪ್ ರೆ.ಡಾ.ಹೆನ್ರಿ ಡಿಸೋಜಾ ಅವರು ಹೇಳಿದರು.
ಅವರು ಬಿಕರ್ನಕಟ್ಟೆಯ ಬಾಲ ಯೇಸು ಪುಣ್ಯಕ್ಷೇತ್ರದಲ್ಲಿ ಶನಿವಾರ ನಡೆದ ವಾರ್ಷಿಕ ಮಹೋತ್ಸವದ ಸಂಭ್ರಮದ ಬಲಿಪೂಜೆಯ ನೇತೃತ್ವ ವಹಿಸಿ ಮಾತನಾಡಿದರು.
ಮಕ್ಕಳ ಮತ್ತು ಮಹಿಳೆಯರ ಶೋಷಣೆ ಹಾಗೂ ಸಮಾಜದಲ್ಲಿ ನಡೆಯುತ್ತಿರುವ ಅನಾಚಾರಗಳಿಗೆ ವಿಷಾದ ವ್ಯಕ್ತಪಡಿಸಿದ ಬಿಷಪ್, ಇಂತಹ ಘಟನೆಗಳಿಗೆ ಅವಕಾಶ ನೀಡಬಾರದು. ಮಕ್ಕಳನ್ನು ನಿಷ್ಟುರತೆಯಿಂದ ನಡೆಸಿಕೊಳ್ಳಬಾರದು. ಜೀವನದಲ್ಲಿ ಧಾರ್ಮಿಕ ವೌಲ್ಯಗಳನ್ನು ಕಾಯ್ದುಕೊಳ್ಳಬೇಕೆಂದರು.
ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿರುವುದಕ್ಕೆ ಸಂತೋಷ ವ್ಯಕ್ತಪಡಿಸಿದ ಬಿಷಪ್ ಹೆನ್ರಿ ಡಿೞಸೋಜಾ, ಬಾಲ ಯೇಸು ಪುಣ್ಯಕ್ಷೇತ್ರದ ಈ ವಾರ್ಷಿಕ ಮಹೋತ್ಸವದಲ್ಲಿ ಇಡೀ ಮಂಗಳೂರು ಸೇರಿದೆ ಎಂದು ಭಾಸವಾಗುತ್ತಿದೆ. ಎಲ್ಲರಿಗೂ ಬಾಲ ಯೇಸು ಆಶೀರ್ವದಿಸಲಿ ಎಂದು ಹಾರೈಸಿದರು.
ಬಾಲ ಯೇಸು ಪುಣ್ಯಕ್ಷೇತ್ರದ ನಿರ್ದೇಶಕ ಫಾ.ಎಲಿಯಾಸ್ ಡಿಸೋಜಾ, ಕಾರ್ಮೆಲ್ ಸಂಸ್ಥೆಯ ಮಠಾಧಿಪತಿ ವಂ.ಜ್ಯೋ ತಾವ್ರೊ, ಫಾ.ಪಿಯುಸ್ ಜೇಮ್ಸ್ ಡಿಸೋಜಾ, ಫಾ.ಪ್ರಕಾಶ್ ಡಿಕುನ್ಹಾ, ಫಾ.ಆ್ಯಂಡ್ರು ಡಿಸೋಜಾ ಸೇರಿದಂತೆ 25ಕ್ಕೂ ಮಿಕ್ಕಿ ಧರ್ಮಗುರುಗಳು ಬಲಿ ಪೂಜೆಯಲ್ಲಿ ಸಹ ಭಾಗಿಗಳಾದರು.
ಶಾಸಕ ಜೆ .ಆರ್. ಲೋಬೊ, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ, ಕಾರ್ಪೊರೇಟರ್‌ಗಳಾದ ಸಬಿತಾ ಮಿಸ್ಕಿತ್, ಕೇಶವ ಮರೋಳಿ ಮತ್ತಿತರರು ಉಪಸ್ಥಿತರಿದ್ದರು.
ಕ್ಷೇತ್ರಕ್ಕೆ ಆಗಮಿಸಿದ ಭಕ್ತರು ಮೊಂಬತ್ತಿಗಳನ್ನು ಉರಿಸಿ ಪ್ರಾರ್ಥಿಸಿದರು. ಕಾಣಿಕೆಗಳನ್ನು ಅರ್ಪಿಸಿ ತಮ್ಮ ಹರಕೆಗಳನ್ನು ನೆರವೇರಿಸಿದರು.







