ವಿಶಿಷ್ಟ ಚೇತನ ಮಕ್ಕಳ ಶಿಕ್ಷಕರ ಗೌರವಧನ, ಅಂಗವಿಕಲರ ಮಾಸಾಶನ ಹೆಚ್ಚಳ ಬಜೆಟ್‌ನಲ್ಲಿ ಘೋಷಣೆ: ಸಿದ್ದರಾಮಯ್ಯ ಭರವಸೆ

ಬೆಂಗಳೂರು, ಜ. 14: ‘ಬುದ್ಧಿಮಾಂದ್ಯ ಮಕ್ಕಳ ಪೋಷಣೆಗೆ ನೀಡುವ ಗೌರವಧನ, ಅಂಗವಿಕಲರ ಮಾಸಾಶನ ಮತ್ತು ಬುದ್ಧಿಮಾಂದ್ಯ ಮಕ್ಕಳ ಶಾಲಾ ಶಿಕ್ಷಕರ ವೇತನವನ್ನು ಹೆಚ್ಚಿಸುವುದು. ಅಲ್ಲದೆ, ವಿಕಲಚೇತನರಿಗೆ ಹೆಚ್ಚಿನ ಸೌಲಭ್ಯ ನೀಡಲು ಮುಂದಿನ ಆಯವ್ಯಯದಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಶನಿವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆರೋಗ್ಯ ಇಲಾಖೆ ಮತ್ತು ವಿಕಲಚೇತನರ ಸಬಲೀಕರಣ ಇಲಾಖೆ ಆಶ್ರಯದಲ್ಲಿ ಏರ್ಪಡಿಸಿದ್ದ ವಿಕಲಚೇತನರಿಗೆ ಸಾಧನ-ಸಲಕರಣೆ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರಕಾರದ ಸೂಚನೆಯಂತೆ ಸದ್ಯದಲ್ಲಿಯೆ ಅಂಗವಿಕಲರ ಸರ್ವೆ ಕಾರ್ಯ ಕೈಗೊಳ್ಳುವ ಮೂಲಕ ವಿಕಲಚೇತನರಿಗೆ ಸರಕಾರದ ಸೌಲಭ್ಯ ನೀಡಲಾಗುವುದು ಎಂದರು.
ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಕೈಗೊಳ್ಳುವ ಎಲ್ಲ ಹೊಸ ಯೋಜನೆಗಳಿಗೆ ರಾಜ್ಯ ಸರಕಾರ ಆದ್ಯತೆಯ ಮೇಲೆ ಅನುದಾನ ಒದಗಿಸಲಿದೆ. ಅಂಗವಿಕಲರು ಸಮಾಜದ ಮುಖ್ಯವಾಹಿನಿ ಕರೆತರಲು ಸರಕಾರ ಬದ್ಧ ಎಂದು ಸಿದ್ದರಾಮಯ್ಯ ಘೋಷಿಸಿದರು.
ಅನುಕಂಪವಲ್ಲ: ಸಮಾಜದಲ್ಲಿ ಎಲ್ಲರೂ ಪರಿಪೂರ್ಣರಾಗಿರುವುದಿಲ್ಲ. ಅಂಗವಿಕಲರಾದವರಿಗೆ ಭವಿಷ್ಯ ಇಲ್ಲ ಎನ್ನುವುದು ತಪ್ಪು. ಅವರಿಗೂ ಭವಿಷ್ಯವಿದೆ. ಸಮಾಜದಲ್ಲಿ ಎಲ್ಲರಂತೆ ಅವರೂ ಸ್ವಾಭಿಮಾನಿಗಳಾಗಿ ಸಮಾಜದ ಆಸ್ತಿಯಾಗಿ ಬದುಕಲು ಬೇಕಾಗುವ ಎಲ್ಲ ಸೌಲಭ್ಯ ಒದಗಿಸಲಾಗುವುದು. ಅವರೂ ಎಲ್ಲರಂತೆ ಸಮಾಜದಲ್ಲಿ ಸಂತೋಷವಾಗಿರುವಂತೆ ಮಾಡುವುದು ನಮ್ಮ ಸರಕಾರದ ಆದ್ಯ ಕರ್ತವ್ಯ ಎಂದರು.
ಅಂಗವಿಕಲರ ಅಭಿವೃದ್ಧಿಗಾಗಿ ಎರಡೂ ಇಲಾಖೆಗಳ ಅಧಿಕಾರಿಗಳು ಮತ್ತು ಸಚಿವರು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿಕಲಚೇತನರ ಮತ್ತು ಹಿರಿಯ ನಾಗರಿಕ ಸಬಲೀಕರಣ ಇಲಾಖೆಗೆ ಎರಡು ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿರುವುದು ಇದಕ್ಕೆ ಸಾಕ್ಷಿ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ನಮ್ಮ ಸರಕಾರ ಬಂದ ಮೇಲೆ ಈ ಇಲಾಖೆಗೆ ಹೆಚ್ಚಿನ ಅನುದಾನ ನೀಡಲಾಗುತ್ತಿದೆ. 2013-14ನೆ ಸಾಲಿನಲ್ಲಿ 655 ಕೋಟಿ ರೂ.ಅನುದಾನ ನೀಡಲಾಗಿತ್ತು. ಆದರೆ 2016-17ನೆ ಸಾಲಿನಲ್ಲಿ 1,064 ಕೋಟಿ ರೂ. ಅನುದಾನವನ್ನು ನೀಡಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ರಾಜ್ಯದ 5.5 ಕೋಟಿ ಜನಸಂಖ್ಯೆಯ ಪೈಕಿ 13.24 ಲಕ್ಷ ಮಂದಿ ಅಂಗವಿಕಲರಿದ್ದು, ಸರ್ವೆ ಕಾರ್ಯದಿಂದ ಈ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ. ಇದು ಒಟ್ಟಾರೆ ಶೇ.3ರಷ್ಟಾಗಲಿದೆ ಎಂದ ಅವರು, ಗ್ರಾಮೀಣಾಭಿವೃದ್ದಿ ಮತ್ತು ನಗರಾಭಿವೃದ್ಧಿ ಇಲಾಖೆ ಅನುದಾನದಲ್ಲಿ ಶೇ.3ರಷ್ಟು ಅನುದಾನ ಅಂಗವಿಕಲರ ಕಲ್ಯಾಣಕ್ಕೆ ಕಡ್ಡಾಯವಾಗಿ ಮೀಸಲಿಡುವಂತೆ ಆಯವ್ಯಯದಲ್ಲಿ ಘೋಷಣೆ ಮಾಡಲಾಗುವುದು ಎಂದರು.
ಪ್ರಾಸ್ತಾವಿಕ ಮಾತುಗಳನ್ನು ಆಡಿದ ಆರೋಗ್ಯ ಸಚಿವ ಕೆ.ಆರ್.ರಮೇಶ್‌ಕುಮಾರ್, ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ನಡೆಸಿದ ಶಿಬಿರಗಳಲ್ಲಿ 94,826 ವಿಕಲಚೇತನರನ್ನು ಗುರುತಿಸಲಾಗಿದ್ದು ಆ ಪೈಕಿ 54,270 ವಿಕಲಚೇತನರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಗಿದೆ. ಆ ಪೈಕಿ 36,091 ವಿಕಲಚೇತನರಿಗೆ ಸಾಧನ-ಸಲಕರಣೆಗಳ ಅವಶ್ಯಕತೆಯಿದ್ದು ಆರು ತಿಂಗಳೊಳಗೆ ಸಲಕರಣೆಗಳನ್ನು ಒದಗಿಸಲಾಗುವುದೆಂದು ತಿಳಿಸಿದರು.
ವಿಕಲಚೇತನರ ಸಬಲೀಕರಣ ಸಚಿವೆ ಉಮಾಶ್ರೀ ಮಾತನಾಡಿ, ಇಲಾಖೆಯ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಶಿಕ್ಷಣದ ಹಕ್ಕಿನಡಿ ಅಂಗವಿಕಲರನ್ನು ಮುಖ್ಯವಾಹಿನಿಗೆ ತರುವ ಮೂಲಕ ಅವರಿಗೆ ವಿದ್ಯಾಭ್ಯಾಸ ಕೊಡಿಸಲು ಹೆಚ್ಚಿನ ಒತ್ತು ನೀಡಲಾಗಿದೆ ಎಂದರು. ಸಿಎಂ ಸಿದ್ದರಾಮಯ್ಯ ಸಾಂಕೇತಿಕವಾಗಿ ವಿಕಲಚೇತನ ಫಲಾನುಭವಿಗಳಿಗೆ ಸಲಕರಣೆಗಳನ್ನು ವಿತರಿಸಿದರು.
ನಗರಾಭಿವೃದ್ಧಿ ಆರ್. ರೋಷನ್ ಬೇಗ್, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್, ಮೇಯರ್ ಪದ್ಮಾವತಿ, ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಆಯುಕ್ತ ಸುಬೋದ್ ಯಾದವ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹದೇವನ್, ವಿಕಲಚೇತನರ ಸಬಲೀಕರಣ ಇಲಾಖೆ ನಿರ್ದೇಶಕ ಗೋವಿಂದರಾಜು ಹಾಜರಿದ್ದರು.
‘ಅಕ್ರಮ-ಸಕ್ರಮ ಯೋಜನೆ ಸಂಬಂಧ ಸುಪ್ರೀಂ ಕೋರ್ಟ್ ತಡೆಯಾಜ್ಞೆ ತೆರವಿಗೆ ರಾಜ್ಯ ಸರಕಾರ ಅದಷ್ಟು ಶೀಘ್ರವೇ ಅಗತ್ಯ ಕ್ರಮ ಕೈಗೊಳ್ಳಲಿದೆ. ಆ ಮೂಲಕ ಜನರಿಗೆ ಅನುಕೂಲ ಕಲ್ಪಿಸಲಿದೆ’
-ಸಿದ್ದರಾಮಯ್ಯ ಮುಖ್ಯಮಂತ್ರಿ







