ದಲಿತರ ಬೇಡಿಕೆ ಆಗ್ರಹಿಸಿ ಜ.15 ರಿಂದ ಅಹೋರಾತ್ರಿ ಪ್ರತಿಭಟನೆ
ಪುತ್ತೂರು , ಜ.14 : ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಳೆದ ಒಂದು ವರ್ಷಗಳಿಂದ ಮನವಿ ಸಲ್ಲಿಸುತ್ತಾ,ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದರೂ ಉಪವಿಭಾಗಾಧಿಕಾರಿಗಳು, ನಗರಸಭೆಯ ಆಯುಕ್ತರು ಹಾಗೂ ತಹಶೀಲ್ದಾರರು ನಮ್ಮ ಮನವಿಗೆ ಈ ತನಕ ಸ್ಪಂದನೆ ನೀಡಿಲ್ಲ. ಅಧಿಕಾರಿಗಳ ಈ ನೀತಿಯನ್ನು ವಿರೋಧಿಸಿ ಮತ್ತು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪುತ್ತೂರಿನ ಮಿನಿ ವಿಧಾನ ಸೌಧದ ಎದುರು ಜ.16ರಿಂದ ಬೇಡಿಕೆ ಈಡೇರುವ ತನಕ ಅಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು ಎಂದು ದಲಿತ್ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ತಿಳಿಸಿದ್ದಾರೆ.
ಅವರು ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಬೇಡಿಕೆಗಳ ವಿಚಾರದಲ್ಲಿ ಅಧಿಕಾರಿಗಳು ನೀಡಿರುವ ಭರವಸೆಗಳು ಸುಳ್ಳು ಭರವಸೆಗಳಾಗಿಯೇ ಉಳಿದಿದ್ದು, ಸಮಸ್ಯೆಗಳ ಇತ್ಯರ್ಥಕ್ಕಾಗಿ ಸಲ್ಲಿಸಲಾದ ಮನವಿಗೆ ಸ್ಪಂದನೆ ನೀಡದ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸುವುದಾಗಿ ತಿಳಿಸಿದರು.
ಪುತ್ತೂರು ತಾಲ್ಲೂಕಿನ ಚಿಕ್ಕಮುಡ್ನೂರು ಗ್ರಾಮದ ಸ.ನಂ.144/5ಎ1(ಪಿ) ಯಲ್ಲಿ 2.54 ಎಕ್ರೆ ಡಿ.ಸಿ.ಮನ್ನಾ ಜಮೀನನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಕಾಯ್ದಿರಿಸುವ ಕುರಿತು, ನಗರಸಭಾ ವ್ಯಾಪ್ತಿಯ ಪಡ್ನೂರು ಗ್ರಾಮದ ಪಡ್ಡಾಯೂರು ಪಳ್ಳ ಎಂಬಲ್ಲಿ ಸ.ನಂ.64/2ಎ1 ರಲ್ಲಿ 13.44 ಎಕ್ರೆ ಸರ್ಕಾರಿ ಜಮೀನನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಅಂಗವಿಕಲರಿಗೆ ಕಾಯ್ದಿರಿಸುವ ಬಗ್ಗೆ ಹಾಗೂ ಬಲ್ನಾಡು ಗ್ರಾಮದ ಉಜ್ರುಪಾದೆ ಎಂಬಲ್ಲಿ ಸ.ನಂ. 46/(ಪಿ1), 89/2 ಮತ್ತು 234/3 3.45 ಎಕ್ರೆ ಜಮೀನನ್ನು ಪರಿಶಿಷ್ಟ ಜಾತಿ, ಪಂಗಡದವರಿಗೆ ಮೀಸಲಿಡುವಂತೆ ಹಲವಾರು ಬಾರಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಈ ಕುರಿತು ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಜಮೀನಿನ ಸರ್ವೆ ಕಾರ್ಯ ನಡೆದಿದ್ದರೂ ಮುಂದಿನ ಕ್ರಮಕ್ಕೆ ಯಾವುದೇ ಆಸಕ್ತಿ ತೋರಿಸುತ್ತಿಲ್ಲ ಎಂದು ಆರೋಪಿಸಿದರು.
ನಗರಸಭೆಯ ವ್ಯಾಪ್ತಿಯ ಪಡ್ನೂರು ಮತ್ತು ಬನ್ನೂರು ಗ್ರಾಮಕ್ಕೊಳಪಟ್ಟ ಮುವಪ್ಪು ಗುರುಂಪುನಾರ್ ಸಂಪರ್ಕ ರಸ್ತೆ ವಿಚಾರದಲ್ಲಿಯೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ನೆಲ್ಯಾಡಿ ಪಡುಬೆಟ್ಟು ಬೀದಿಮನೆ ನಿವಾಸಿ ಸುಮಿತ್ರಾ ಎಂಬವರ ಹೆಸರಿಗೆ ಬಸವ ವಸತಿ ಯೋಜನೆಯಲ್ಲಿ ಮಂಜೂರಾದ ಮನೆ ನಿರ್ಮಾಣಕ್ಕೆ ಸ್ಥಳೀಯರೊಬ್ಬರು ಅಡ್ಡಿ ಪಡಿಸಿರುವ ಕುರಿತು ದೂರು ನೀಡಲಾಗಿದ್ದರೂ ಕಂದಾಯ ಇಲಾಖೆಯವರು ಸೂಕ್ತಕ್ರಮ ಕೈಗೊಂಡಿಲ್ಲ ಎಂದು ಅವರು ದೂರಿದರು.
ಹಲವಾರು ಬಾರಿ ಪ್ರತಿಭಟನೆ ಮೂಲಕ ಗಮನಸೆಳೆದ ನಗರಸಭಾ ವ್ಯಾಪ್ತಿಯ ಪಡ್ನೂರು ಮತ್ತು ಬನ್ನೂರು ಗ್ರಾಮಕ್ಕೆ ಒಳಪಟ್ಟ ಗುರುಂಪುನಾರ್ ರಸ್ತೆ ನಿರ್ಮಾಣ ವಿಚಾರ ನೆನೆಗುದಿಗೆ ಬಿದ್ದಿದೆ. ಈ ಕುರಿತು ನಗರಸಭೆಯವರು ರಸ್ತೆ ನಿರ್ಮಾಣಕ್ಕೆ ಅನುದಾನ ಇಟ್ಟಿದ್ದೇವೆ ಎಂದು ಜಿಲ್ಲಾಧಿಕಾರಿಗಳಿಗೆ ಕಡತ ನೀಡಿದ್ದಾರೆ. ಈ ರಸ್ತೆಯಲ್ಲಿ ವರ್ಗ ಜಾಗ ಇದೆ ಎಂಬ ಕಾರಣಕ್ಕಾಗಿ ರಸ್ತೆ ನಿರ್ಮಾಣ ಸ್ಥಗಿತಗೊಳಿಸಲಾಗಿದೆ. ಆದರೆ ಇಲ್ಲಿ ಯಾವುದೇ ವರ್ಗ ಜಾಗ ಇಲ್ಲ ಎಂದು ಅವರು ಹೇಳಿದರು.
94ಸಿಸಿ ಅರ್ಜಿ ಸಲ್ಲಿಸಿದವರಿಗೆ ಹಕ್ಕುಪತ್ರ ನೀಡಿದರೂ ಆರ್‌ಟಿಸಿ ನೀಡಿಕೆ ಕೆಲಸ ನಡೆದಿಲ್ಲ. ದಲಿತರ ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ದಲಿತರ ಮೇಲಿನ ಕಾಳಜಿ ಯಾವುದೇ ಪಕ್ಷಕ್ಕಾಗಲಿ, ಅಧಿಕಾರಿಗಳಿಗಾಗಲಿ ಇಲ್ಲ ಎಂದ ಅವರು ಜ.16ರಿಂದ ನಡೆಸಲಾಗುವ ಪ್ರತಿಭಟನೆಗೆ ಯಾವುದೇ ಸ್ಪಂದನೆ ದೊರಕದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ದಲಿತ್ ಸೇವಾ ಸಮಿತಿಯ ಪುತ್ತೂರು ತಾಲೂಕು ಸಮಿತಿಯ ಅಧ್ಯಕ್ಷ ಗಿರಿಧರ್ ನಾಕ್, ಸಮಿತಿ ಸದಸ್ಯರಾದ ಸುರೇಶ್, ಉಮೇಶ್ ತ್ಯಾಗರಾಜನಗರ, ಧನಂಜಯ ಬಲ್ನಾಡು ಹಾಜರಿದ್ದರು.







