ಕಾಡುಪ್ರಾಣಿ ಚರ್ಮ ಮಾರಾಟಕ್ಕೆ ಯತ್ನ: ಆರೋಪಿ ವಶಕ್ಕೆ
ಮಂಗಳೂರು, ಜ.14: ಹುಬ್ಬಳ್ಳಿಯಿಂದ ಕಾಡುಪ್ರಾಣಿಯೊಂದರ ಚರ್ಮವನ್ನು ಅಕ್ರಮವಾಗಿ ತಂದು ನಗರದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯೋರ್ವನನ್ನು ಬರ್ಕೆ ಠಾಣಾ ಪೊಲೀಸರು ಬಂಧಿಸಿ ಆತನಿಂದ ಚರ್ಮವನ್ನು ವಶಕ್ಕೆ ಪಡೆದಿದ್ದಾರೆ.
ಹುಬ್ಬಳ್ಳಿಯ ನಿವಾಸಿ ದೇವಪ್ಪ ಮಾಗಡಿ ಬಂಧಿತ ಆರೋಪಿ.
ಖಚಿತ ಮಾಹಿತಿ ಮೇರೆಗೆ ಬರ್ಕೆ ಪೊಲೀಸ್ ಠಾಣಾ ಅಪರಾಧ ವಿಭಾಗದ ಉಪ ನಿರೀಕ್ಷಕ ನರೇಂದ್ರ ಅವರು ಸಿಬ್ಬಂದಿಗಳೊಂದಿಗೆ ಇಂದು ಬೆಳಗ್ಗೆ ಸುಮಾರು 8:30ಕ್ಕೆ ನಗರದ ಬಿಜೈಯ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣಕ್ಕೆ ಬಂದಿದ್ದು, ಅಲ್ಲಿ ವ್ಯಕ್ತಿಯೋರ್ವ ಬ್ಯಾಗ್‌ನೊಂದಿಗೆ ಅನುಮಾನಾಸ್ಪದವಾಗಿ ನಿಂತಿದ್ದ.
ಈ ಸಂದರ್ಭದಲ್ಲಿ ಆತ ಪೊಲೀಸರನ್ನು ನೋಡಿ ಓಡಲೆತ್ನಿಸಿದ್ದು, ಸಿಬ್ಬಂದಿಗಳು ಆತನ ಬಳಿಯಿದ್ದ ವಶಕ್ಕೆ ಪಡೆದು ಪರಿಶೀಲಿಸಿದಾಗ ಅದರೊಳಗೆ ಕಾಡು ಪ್ರಾಣಿಯೊಂದರ ಚರ್ಮ ಪತ್ತೆಯಾಗಿದೆ. ಆರೋಪಿಯನ್ನು ಪೊಲೀಸ್ ಠಾಣೆಗೆ ತಂದು ವಿಚಾರಿಸಲಾಗಿ ಆತ ತಾನು ಹುಬ್ಬಳ್ಳಿಯಿಂದ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಕಾಡುಪ್ರಾಣಿಯ ಚರ್ಮವನ್ನು ಮಾರಾಟಕ್ಕೆ ತಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಚರ್ಮ ಸಾಗಾದ ಬಗ್ಗೆ ಯಾವುದೇ ಪರವಾನಿಗೆ ಇಲ್ಲದೆ, ಅಕ್ರಮವಾಗಿ ಸಾಗಾಟ ಮಾಡಿರುವುದು ಕಂಡು ಬಂದಿದೆ.
ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.







