ಇರಾನಿ ಕಪ್: ಶೇಷ ಭಾರತ ತಂಡಕ್ಕೆ ಚೇತೇಶ್ವರ ಪೂಜಾರ ನಾಯಕ

ಹೊಸದಿಲ್ಲಿ, ಜ.14: ಮುಂಬೈನಲ್ಲಿ ನಡೆಯಲಿರುವ ಇರಾನಿ ಕಪ್ ಪಂದ್ಯಕ್ಕೆ 15 ಸದಸ್ಯರನ್ನು ಒಳಗೊಂಡ ಶೇಷ ಭಾರತ ತಂಡವನ್ನು ಶನಿವಾರ ಇಲ್ಲಿ ಪ್ರಕಟಿಸಲಾಗಿದ್ದು, ಚೇತೇಶ್ವರ ಪೂಜಾರ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ.
ಜ.20 ರಿಂದ 24ರ ತನಕ ನಡೆಯಲಿರುವ ಇರಾನಿ ಕಪ್‌ನಲ್ಲಿ ರಣಜಿ ಟ್ರೋಫಿ ಚಾಂಪಿಯನ್ ಆಗಿರುವ ಗುಜರಾತ್ ತಂಡ ಶೇಷ ಭಾರತ ತಂಡವನ್ನು ಎದುರಿಸಲಿದೆ.
ಚೆನ್ನೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ 5ನೆ ಹಾಗೂ ಅಂತಿಮ ಟೆಸ್ಟ್‌ನಲ್ಲಿ ತ್ರಿಶತಕ ಬಾರಿಸಿದ್ದ ಕನ್ನಡಿಗ ಕರುಣ್ ನಾಯರ್, ರಣಜಿ ಟ್ರೋಫಿಯಲ್ಲಿ ಸ್ಥಿರ ಪ್ರದರ್ಶನ ನೀಡಿರುವ ತಮಿಳುನಾಡಿನ ಆರಂಭಿಕ ಆಟಗಾರ ಅಭಿನವ್ ಮುಕುಂದ್, ಜಾರ್ಖಂಡ್ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಇಶಾನ್ ಕಿಶನ್, ರಣಜಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ್ದ ಎಸ್.ನದೀಮ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇಂಗ್ಲೆಂಡ್ ವಿರುದ್ಧದ 2ನೆ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡಿದ್ದ ವೃದ್ಧ್ದಿಮಾನ್ ಸಹಾ ತಂಡಕ್ಕೆ ವಾಪಸಾಗಿದ್ದಾರೆ. ರಣಜಿ ಟ್ರೋಫಿಯಲ್ಲಿ 3ನೆ ಗರಿಷ್ಠ ಸ್ಕೋರ್ ದಾಖಲಿಸಿದ್ದ ಹಿಮಾಚಲ ಪ್ರದೇಶದ ಪ್ರಶಾಂತ್ ಚೋಪ್ರಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಮುಂಬೈ ಆರಂಭಿಕ ಅಖಿಲ್ ಹೇರ್ವಾಡ್ಕರ್(467ರನ್) ಯುವ ಆಟಗಾರ ಪೃಥ್ವಿ ಶಾರನ್ನು ಸ್ಪರ್ಧೆಯಲ್ಲಿ ಹಿಂದಿಕ್ಕಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇರಾನಿ ಕಪ್‌ಗೆ ಶೇಷ ಭಾರತ ತಂಡ: ಅಭಿನವ್ ಮುಕುಂದ್, ಅಖಿಲ್ ಹೇರ್ವಾಡ್ಕರ್, ಚೇತೇಶ್ವರ ಪೂಜಾರ(ನಾಯಕ), ಕರುಣ್ ನಾಯರ್, ಮನೋಜ್ ತಿವಾರಿ, ವೃದ್ಧ್ದಿಮಾನ್ ಸಹಾ, ಕುಲ್‌ದೀಪ್ ಯಾದವ್, ಶಹಬಾಝ್ ನದೀಮ್, ಪಂಕಜ್ ಸಿಂಗ್, ಕೆ.ವ್ನಿೇಶ್, ಸಿದ್ದಾರ್ಥ್ ಕೌಲ್, ಶಾರ್ದೂಲ್ ಠಾಕೂರ್, ಅಕ್ಷಯ್ ವಖಾರೆ, ಇಶಾನ್ ಕಿಶನ್, ಪ್ರಶಾಂತ್ ಚೋಪ್ರಾ.







