ಡೋಪಿಂಗ್ ಪ್ರಕರಣ: ನರಸಿಂಗ್ ಯಾದವ್ ಹೇಳಿಕೆ ಪಡೆದ ಸಿಬಿಐ

ಹೊಸದಿಲ್ಲಿ, ಜ.14: ಡೋಪಿಂಗ್ ಪ್ರಕರಣವನ್ನು ಎದುರಿಸುತ್ತಿದ್ದ ಕಾರಣ ರಿಯೋ ಒಲಿಂಪಿಕ್ಸ್‌ನಲ್ಲಿ 74 ಕೆ.ಜಿ. ತೂಕ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ವಂಚಿತರಾಗಿದ್ದ ಭಾರತದ ಕುಸ್ತಿಪಟು ನರಸಿಂಗ್ ಯಾದವ್‌ರ ಹೇಳಿಕೆಯನ್ನು ಸಿಬಿಐ ಶನಿವಾರ ಧ್ವನಿಮುದ್ರಿಸಿಕೊಂಡಿದೆ.
ತಾನು ರಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳದಂತೆ ಮಾಡಲು ಇನ್ನೋರ್ವ ಕುಸ್ತಿಪಟು ಸೇವಿಸುವ ಆಹಾರ ಹಾಗೂ ಪಾನೀಯದಲ್ಲಿ ನಿಷೇಧಿತ ಉದ್ದೀಪನ ಮದ್ದು ಕಲೆಬೆರಕೆ ಮಾಡಿದ್ದಾನೆ. ಸೋನಪತ್‌ನಲ್ಲಿರುವ ಭಾರತದ ಕ್ರೀಡಾ ಪ್ರಾಧಿಕಾರ(ಸಾಯ್) ಕೇಂದ್ರದಲ್ಲಿ ಈ ಕೃತ್ಯ ಎಸೆಗಲಾಗಿದೆ ಎಂದು ಯಾದವ್ ಸಿಬಿಐಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತಾನು ಎಲ್ಲ ಆರೋಪಗಳಿಂದ ಮುಕ್ತವಾಗಿ ಮತ್ತೆ ಕುಸ್ತಿಕಣಕ್ಕೆ ಇಳಿಯುವೆ ಎಂದು ನರಸಿಂಗ್ ಯಾದವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನರಸಿಂಗ್ ಕಳೆದ ವರ್ಷದ ಜೂ.25 ಹಾಗೂ ಜುಲೈ 5 ರಂದು ನಡೆದಿದ್ದ ಡೋಪಿಂಗ್ ಪರೀಕ್ಷೆಯಲ್ಲಿ ಎರಡು ಬಾರಿಯೂ ವಿಫಲರಾಗಿದ್ದರು. ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಘಟಕ(ನಾಡಾ) ನರಸಿಂಗ್‌ಗೆ ರಿಯೋ ಗೇಮ್ಸ್‌ನಲ್ಲಿ ಭಾಗವಹಿಸಲು ಅವಕಾಶ ನೀಡಿತ್ತು. ಆದರೆ, ಯಾದವ್‌ಗೆ ನಾಡಾ ಕ್ಲೀನ್‌ಚಿಟ್ ನೀಡಿದ್ದನ್ನು ಪ್ರಶ್ನಿಸಿದ್ದ ವಿಶ್ವ ಉದ್ದೀಪನ ಮದ್ದು ತಡೆ ಘಟಕ(ವಾಡಾ) ಕ್ರೀಡಾ ಪಂಚಾಯತ್ ನ್ಯಾಯಾಲಯ(ಸಿಎಎಸ್)ದ ಮೊರೆ ಹೋಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ನರಸಿಂಗ್‌ಗೆ ನಾಲ್ಕು ವರ್ಷಗಳ ಕಾಲ ನಿಷೇಧ ಹೇರಿತ್ತು. ರಿಯೋ ಗೇಮ್ಸ್‌ನಲ್ಲಿ ಭಾಗವಹಿಸದಂತೆ ತಡೆ ಹೇರಿತ್ತು.
ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ಡೋಪಿಂಗ್ ಹಗರಣದ ಬಗ್ಗೆ 2016ರ ಅಕ್ಟೋಬರ್ 18 ರಂದು ತನಿಖೆ ಆರಂಭಿಸಿತು. ಹರ್ಯಾಣದ ಸರಕಾರದ ಮನವಿ ಹಾಗೂ ಕೇಂದ್ರ ಸರಕಾರದ ಅಧಿಸೂಚನೆಯ ಬಳಿಕ ಸಿಬಿಐ ಪ್ರಕರಣವನ್ನು ದಾಖಲಿಸಿಕೊಂಡಿತ್ತು.







