ಡೇಸ್ ಇನ್ ಡಯಾಸಿಸ್: ಪ್ರತಿನಿಧಿಗಳಿಗೆ ಸ್ವಾಗತ

ಉಡುಪಿ, ಜ.14: ಮಂಗಳೂರು ಸಂತ ಜೋಸೆಫ್ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಜ.18ರಿಂದ 22ರ ವರೆಗೆ ನಡೆಯಲಿರುವ ಭಾರತೀಯ ಕೆಥೊಲಿಕ್ ಯುವ ಸಂಚಾಲನದ 10ನೆ ರಾಷ್ಟ್ರೀಯ ಯುವ ಸಮ್ಮೇಳನದ ಪೂರ್ವಭಾವಿಯಾಗಿ ‘ಡೇಸ್ ಇನ್ ಡಯಾಸಿಸ್’ ಕಾರ್ಯಕ್ರಮಕ್ಕೆ ದೇಶದ ವಿವಿಧ ಧರ್ಮಪ್ರಾಂತಗಳಿಂದ ಆಗಮಿಸಿದ ಕ್ರೈಸ್ತ ಯುವ ಪ್ರತಿನಿಧಿಗಳಿಗೆ ಸ್ವಾಗತ ಕಾರ್ಯಕ್ರಮವನ್ನು ಉಡುಪಿ ಧರ್ಮಪ್ರಾಂತದ ವತಿಯಿಂದ ಸಂತ ಸಿಸಿಲಿಸ್ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿತ್ತು.
11 ರಾಜ್ಯಗಳ 34 ಧರ್ಮಪ್ರಾಂತಗಳಿಂದ ಆಗಮಿಸಿದ ಸುಮಾರು 500 ಕ್ರೈಸ್ತ ಯುವ ಪ್ರತಿನಿಧಿಗಳು, ಯುವ ನಿರ್ದೇಶಕರು ಹಾಗೂ ಧರ್ಮ ಭಗಿನಿಯರನ್ನು ಮೆರವಣಿಗೆಯ ಮೂಲಕ ಸಭಾಂಗಣಕ್ಕೆ ಕರೆತರಲಾಯಿತು. ಉಡುಪಿ ಧರ್ಮಪ್ರಾಂತದ ಸಾಮಾಜಿಕ ಸೇವಾ ಸಂಸ್ಥೆ ‘ಸಂಪದ’ದ ನಿರ್ದೇಶಕ ವಂ.ರೆಜಿನಾಲ್ಡ್ ಪಿಂಟೊ ಉಡುಪಿ ಜಿಲ್ಲೆ ಹಾಗೂ ಉಡುಪಿ ಧರ್ಮಪ್ರಾಂತದ ಪರಿಚಯವನ್ನು ಮಾಡಿಕೊಟ್ಟರು. ಬಳಿಕ ಯುವ ಪ್ರತಿನಿಧಿಗಳನ್ನು ವಿಂಗಡಿಸಿ ಧರ್ಮಪ್ರಾಂತದ ವಿವಿಧ ಚರ್ಚುಗಳಿಗೆ ಕಳುಹಿಸ ಲಾಯಿತು.
ಉಡುಪಿ ಧರ್ಮಪ್ರಾಂತದ ಯುವ ಆಯೋಗದ ನಿರ್ದೇಶಕ ವಂ.ಎಡ್ವಿನ್ ಡಿಸೋಜ, ವೈಸಿಎಸ್ ರಾಷ್ಟ್ರೀಯ ನಿರ್ದೇಶಕ ವಂ.ಚೇತನ್ ಮಚಾದೊ, ನಕ್ರೆ ಧರ್ಮಕೇಂದ್ರದ ವಂ.ವಿನ್ಸೆಂಟ್ ಕ್ರಾಸ್ತಾ, ಉಡುಪಿ ಶೋಕಮಾತಾ ಇಗರ್ಜಿಯ ಸಹಾಯಕ ಧರ್ಮಗುರು ವಂ.ರೋಯ್‌ಸ್ಟನ್ ಫೆರ್ನಾಂಡಿಸ್, ವಂ.ವಿಲಿಯಂ ಮಾರ್ಟಿಸ್, ಧರ್ಮಪ್ರಾಂತದ ಐಸಿವೈಎಂ ಅಧ್ಯಕ್ಷ ಲೊಯೆಲ್ ಡಿಸೋಜ, ಕಾರ್ಯದರ್ಶಿ ಫೆಲಿನಾ ಡಿಸೋಜ, ಮಹಿಳಾ ಸಚೇತಕಿ ಸಿಸ್ಟರ್ ಹಿಲ್ಡಾ ಮಸ್ಕರೇನ್ಹಸ್, ಸಚೇತಕ ವಾಲ್ಟರ್ ಡಿಸೋಜ, ಉಪಾಧ್ಯಕ್ಷ ಅರ್ಥರ್ ಡಾಯಸ್, ಮಾಜಿ ಅಧ್ಯಕ್ಷ ಡೆರಿಕ್ ಮಸ್ಕರೇನ್ಹಸ್, ಕೋಶಾಧಿಕಾರಿ ಡೋನ್ ಡಿಸೋಜ, ಪಿಆರ್‌ಒ ಒನಿಲ್ ಅಂದ್ರಾದೆ, ವಲಯ ಅಧ್ಯಕ್ಷರುಗಳಾದ ರೊಯ್ಟನ್ ಡಿಸೋಜ, ವಿನೈಲ್ ಡಿಸೋಜ, ಫ್ಲೆಕ್ಸನ್ ಡಿಸಿಲ್ವಾ ಉಪಸ್ಥಿತರಿದ್ದರು.
ಜ.17ರವರೆಗೆ ನಡೆಯುವ ಡೇಸ್ ಇನ್ ಡಯಾಸಿಸ್ ಕಾರ್ಯಕ್ರಮದಲ್ಲಿ ಯುವಪ್ರತಿನಿಧಿಗಳು ತಾವು ತೆರಳಿದ ಘಟಕಗಳಲ್ಲಿ ವಿವಿಧ ಮನೆಗಳಲ್ಲಿ ವಾಸ್ತವ್ಯ ಹೂಡಿ ಅಲ್ಲಿನ ಸಂಸ್ಕೃತಿ, ಆಚಾರ-ವಿಚಾರ, ಸ್ಥಳೀಯ ಪ್ರವಾಸಿ ತಾಣಗಳು, ಆಹಾರ ಪದ್ಧತಿಯ ಪರಿಚಯವನ್ನು ಮಾಡಿಕೊಳ್ಳಲಿದ್ದಾರೆ. ಜ.17ರಂದು ಕಾರ್ಕಳದ ಸಂತ ಲಾರೆನ್ಸ್ ಮೈನರ್ ಬಾಸಿಲಿಕಾದಲ್ಲಿ ಡೇಸ್ ಇನ್ ಡಯಾಸಿಸ್ ಕಾರ್ಯಕ್ರಮದ ಸಮಾರೋಪ ನಡೆಯಲಿದೆ.







