‘ಭಾಗ್ಯಲಕ್ಷ್ಮೀ’ ನೀಡದ ಸರಕಾರದ ವಿರುದ್ಧ ಪ್ರತಿಭಟನೆ: ಭಾರತಿ ಶೆಟ್ಟಿ
ಉಡುಪಿ, ಜ.14: ಯಡಿಯೂರಪ್ಪ ಸರಕಾರ ಆರಂಭಿಸಿದ ಬಡ ಹೆಣ್ಣು ಮಕ್ಕಳಿಗೆ ಭಾಗ್ಯಲಕ್ಷ್ಮೀ ಬಾಂಡ್ ನೀಡುವ ಯೋಜನೆಯನ್ನು ರಾಜ್ಯ ಸರಕಾರ ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಕಳೆದ ಸಾಲಿನಲ್ಲಿ ರಾಜ್ಯದ ಹೆಣ್ಣು ಮಕ್ಕಳಿಗೆ ಒಂದೇ ಒಂದು ಬಾಂಡ್ ನೀಡಿಲ್ಲ. ರಾಜ್ಯ ಸರಕಾರದ ಇಂತಹ ಧೋರಣೆ ವಿರುದ್ಧ ಮಹಿಳಾ ಮೋರ್ಚಾ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷೆ ಭಾರತಿ ಶೆಟ್ಟಿ ಹೇಳಿದ್ದಾರೆ.
ಮೋರ್ಚಾದ ಸಂಘಟನೆಗಾಗಿ ಉಡುಪಿ ಜಿಲ್ಲೆಗೆ ಆಗಮಿಸಿರುವ ಭಾರತಿ ಶೆಟ್ಟಿ, ಇಂದು ಕಡಿಯಾಳಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. 2016-17ನೆ ಸಾಲಿನಲ್ಲಿ ಭಾಗ್ಯಲಕ್ಷ್ಮೀ ಯೋಜನೆಯಡಿ ರಾಜ್ಯದಲ್ಲಿ 10,037 ಮಂದಿ ಅರ್ಜಿ ಸಲ್ಲಿಸಿದ್ದರೂ ಒಬ್ಬರಿಗೂ ಬಾಂಡ್‌ನ್ನು ನೀಡಿಲ್ಲ. ಅದೇ ರೀತಿ ಬಿಜೆಪಿ ಸರಕಾರ ಆರಂಭಿಸಿದ ಬಸವ ಕಲ್ಯಾಣ ಯೋಜನೆಯಡಿ ಮನೆಯನ್ನೇ ಮಂಜೂರು ಮಾಡಲಾಗುತ್ತಿಲ್ಲ ಎಂದವರು ದೂರಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ನಯನಾ ಗಣೇಶ್, ಶ್ಯಾಮಲಾ ಕುಂದರ್, ಗೀತಾಂಜಲಿ ಸುವರ್ಣ, ಶೀಲಾ ಕೆ.ಶೆಟ್ಟಿ, ವೀಣಾ ಶೆಟ್ಟಿ, ರೇಷ್ಮಾ ಉದಯ ಶೆಟ್ಟಿ, ರಶ್ಮಿತಾ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.





