ಪುಣೆಯಲ್ಲಿ ಇಂದು ಭಾರತ-ಇಂಗ್ಲೆಂಡ್ ಮೊದಲ ಏಕದಿನ ಪಂದ್ಯ
ಹೊಸ ವರ್ಷ ನಾಯಕ ಕೊಹ್ಲಿಗೆ ಮೊದಲ ಸವಾಲು

ಎಂ.ಎಸ್.ಧೋನಿ
ಪುಣೆ, ಜ.14: ಟೆಸ್ಟ್ನಲ್ಲಿ ಹೀನಾಯ ಸೋಲು ಅನುಭವಿಸಿದ್ದ ಇಂಗ್ಲೆಂಡ್ಗೆ ಇನ್ನೊಂದು ಸವಾಲು ಎದುರಾಗಿದೆ. ಮೂರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ರವಿವಾರ ಭಾರತವನ್ನು ಎದುರಿಸಲಿದೆ.
ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಇಂಗ್ಲೆಂಡ್ ಸರಣಿ ಗೆಲುವಿನ ಕಡೆಗೆ ನೋಡುತ್ತಿದೆ. ಭಾರತ ಹೊಸ ವರ್ಷ ಮೊದಲ ಏಕದಿನ ಪಂದ್ಯವನ್ನಾಡುತ್ತಿದೆ. ಮಹೇಂದ್ರ ಸಿಂಗ್ ಧೋನಿ ಸೀಮಿತ ಓವರ್ಗಳ ಕ್ರಿಕೆಟ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಬಳಿಕ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೆಗಲ ಮೇಲೆ ಹೊಸ ಜವಾಬ್ದಾರಿ ಬಿದ್ದಿದೆ. ಅವರ ನೇತೃತ್ವದಲ್ಲಿ ಭಾರತದ ಸೀಮಿತ ಓವರ್ಗಳ ಕ್ರಿಕೆಟ್ನ ಹೊಸ ಶಕೆ ಆರಂಭವಾಗಲಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಮುಂದಿನ ಜೂನ್ನಲ್ಲಿ ನಡೆಯಲಿದೆ.ಇದಕ್ಕ್ಕೂ ಮೊದಲು ಭಾರತದ ತಯಾರಿಗೆ ನಿಗದಿಯಾದ ಏಕೈಕ ಟೂರ್ನಮೆಂಟ್ ಇದಾಗಿದೆ.ಈ ಕಾರಣದಿಂದಾಗಿ ಕೊಹ್ಲಿಗೆ ಈ ಟೂರ್ನಿ ಮಹತ್ವದ್ದಾಗಿದೆ.
ಆರಂಭಿಕ ದಾಂಡಿಗರು: ಟೀಮ್ ಇಂಡಿಯಾದಲ್ಲಿ ಮೂವರು ಆರಂಭಿಕ ದಾಂಡಿಗರಿದ್ದಾರೆ. ಅವರೆಂದರೆ ಲೋಕೇಶ್ ರಾಹುಲ್, ಶಿಖರ್ ಧವನ್ ಮತ್ತು ಅಜಿಂಕ್ಯ ರಹಾನೆ. ರಾಹುಲ್ ಮತ್ತು ಧವನ್ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದಾರೆ. ಮೊದಲ ಪಂದ್ಯದಲ್ಲಿ ಅವರು ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ನಾಯಕ ಕೊಹ್ಲಿ 3ನೆ ಕ್ರಮಾಂಕದಲ್ಲಿ , ರಹಾನೆ ಕೆಳ ಕ್ರಮಾಂಕದಲ್ಲಿ ಆಡಲಿದ್ದಾರೆ.
ಮಧ್ಯಮ ಸರದಿ ಬಲಿಷ್ಠ: ನಾಯಕತ್ವದ ಹೊರೆಯನ್ನು ಕಳಚಿಕೊಂಡಿರುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮಹೇಂದ್ರ ಸಿಂಗ್ ಧೋನಿ ಮಧ್ಯಮ ಸರದಿಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಅವರು ನಂ.6 ಬ್ಯಾಟ್ಸ್ಮನ್ ಆಗಿ ಕಣಕ್ಕಿಳಿಯುತ್ತಿದ್ದರು. ಆದರೆ ಕೊಹ್ಲಿ ನಾಯಕತ್ವದ ತಂಡದಲ್ಲಿ ನಂ.4 ಕ್ರಮಾಂಕದಲ್ಲಿ ಆಡುವುದು ಖಚಿತ. ಆಲ್ರೌಂಡರ್ ಯುವರಾಜ್ ಸಿಂಗ್ ಮೂರು ವರ್ಷಗಳ ಬಳಿಕ ಏಕದಿನ ತಂಡಕ್ಕೆ ಮರಳಿದ್ದಾರೆ. ಮಧ್ಯಮ ಸರದಿಯಲ್ಲಿ ಆಡಲಿದ್ದಾರೆ. ಮೊದಲ ಅಭ್ಯಾಸ ಪಂದ್ಯದಲ್ಲಿ ಧೋನಿ ಮತ್ತು ಯುವರಾಜ್ ಚೆನ್ನಾಗಿ ಆಡಿದ್ದರು. ಕೊಹ್ಲಿ ಅವರು ಹಿರಿಯ ಆಟಗಾರರಿಗೆ ಮಧ್ಯಮ ಸರದಿಯ ಹೊಣೆಗಾರಿಕೆಯನ್ನು ವಹಿಸಿಕೊಟ್ಟಿದ್ದಾರೆ.
ಯಾರಿಗೆ ಅವಕಾಶ: ಹಿರಿಯ ಆಟಗಾರರು ತಂಡಕ್ಕೆ ಮರಳಿರುವ ಹಿನ್ನೆಲೆಯಲ್ಲಿ ಮನೀಶ್ ಪಾಂಡೆ ಮತ್ತು ಕೇದಾರ್ ಜಾಧವ್ ಅವರಿಗೆ ತಂಡದಲ್ಲಿ ಆಡುವ ಅವಕಾಶ ಸಿಗುವ ಸಾಧ್ಯತೆ ಇಲ್ಲ. ಬೌಲಿಂಗ್ ವಿಭಾಗದಲ್ಲಿ ಅಮಿತ್ ಮಿಶ್ರಾ ಮತ್ತು ಭುವನೇಶ್ವರ ಕುಮಾರ್ಗೆ ಅಂತಿಮ ಹನ್ನೊಂದರಲ್ಲಿ ಅವಕಾಶ ಸಿಗುವುದು ಅಸಂಭವ. ಉಮೇಶ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ಹೊಸ ಚೆಂಡು ಹಂಚಿಕೊಳ್ಳಲಿದ್ದಾರೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇವರಿಗೆ ಸಾಥ್ ನೀಡಲಿದ್ದಾರೆ. ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜ ಸ್ಪಿನ್ ವಿಭಾಗವನ್ನು ಮುನ್ನಡೆಸಲಿದ್ದಾರೆ.
ಮೊರ್ಗನ್ ಪಡೆ: 50 ಓವರ್ಗಳ ಕ್ರಿಕೆಟ್ನಲ್ಲಿ ಇಂಗ್ಲೆಂಡ್ ತಂಡ ಇತ್ತೀಚಿನ ದಿನಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಟೆಸ್ಟ್ನಲ್ಲಿ ಹೀನಾಯ ಸೋಲು ಅನುಭವಿಸಿದ ಇಂಗ್ಲೆಂಡ್ಗೆ ಹೊಸ ಸವಾಲು ಎದುರಾಗಲಿದೆ. ಆದರೆ ನಾಯಕ ಇಯಾನ್ ಮೊರ್ಗನ್ ಟೆಸ್ಟ್ ತಂಡದಲ್ಲಿ ಆಡಿರಲಿಲ್ಲ. ಅಭ್ಯಾಸ ಪಂದ್ಯಗಳಲ್ಲಿ ತಂಡದ ಆಟಗಾರರು ತಮ್ಮ ಸಾಮರ್ಥ್ಯವನ್ನು ತೋರಿಸಿಕೊಟ್ಟಿದ್ದಾರೆ.
ಜೋ ರೂಟ್ ಅವರಿಗೆ ಬಾಂಗ್ಲಾ ವಿರುದ್ಧದ ಏಕದಿನ ಸರಣಿಗೆ ವಿಶ್ರಾಂತಿ ನೀಡಲಾಗಿತ್ತು. ಇದೀಗ ತಂಡಕ್ಕೆ ಮರಳಿರುವ ಅವರು ತಂಡದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಸ್ಯಾಮ್ ಬಿಲ್ಲಿಂಗ್ಸ್ ಮೊದಲ ಅಭ್ಯಾಸ ಪಂದ್ಯದಲ್ಲಿ 93 ರನ್ಗಳ ಕೊಡುಗೆ ನೀಡಿದ್ದರು. ಈ ಕಾರಣದಿಂದಾಗಿ ತಂಡದ ಆಯ್ಕೆಗೆ ತಲೆ ನೋವು ತಂದಿದೆ.
ಪಿಚ್ : ಪಿಚ್ ಸ್ಪಿನ್ನರ್ಗಳ ಸ್ನೇಹಿಯಾಗಿದೆ.ಈ ಕಾರಣದಿಂದಾಗಿ ಇಲ್ಲಿ ದೊಡ್ಡ ಮೊತ್ತದ ಸ್ಕೋರ್ ಉಭಯ ತಂಡಗಳಿಂದಲೂ ನಿರೀಕ್ಷಿಸುವುದು ಅಸಾಧ್ಯ.ಭಾರತ ಕಳೆದ ವರ್ಷದ ಫೆಬ್ರವರಿಯಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 101 ರನ್ಗಳಿಗೆ ಆಲೌಟಾಗಿತ್ತು ಶ್ರೀಲಂಕಾ 5 ವಿಕೆಟ್ಗಳ ಗೆಲುವು ದಾಖಲಿಸಿತ್ತು.
ಹೆಡ್ ಟು ಹೆಡ್: ಭಾರತ ಮತ್ತು ಇಂಗ್ಲೆಂಡ್ ಈ ವರೆಗೆ ಆಡಿರುವ 93 ಪಂದ್ಯಗಳಲ್ಲಿ ಭಾರತ 50ರಲ್ಲಿ ಜಯ ಗಳಿಸಿತ್ತು. 38 ಪಂದ್ಯಗಳಲ್ಲಿ ಇಂಗ್ಲೆಂಡ್ ಗೆಲುವು ದಾಖಲಿಸಿತ್ತು.3 ಪಂದ್ಯ ಟೈ ಹಾಗೂ 3 ಪಂದ್ಯಗಳು ಫಲಿತಾಂಶವಿಲ್ಲದೆ ರದ್ಧಾಗಿತ್ತು.
ಸಂಭಾವ್ಯ ತಂಡ: ಭಾರತ ವಿರಾಟ್ ಕೊಹ್ಲಿ(ನಾಯಕ), ಶಿಖರ್ ಧವನ್, ಕೆಎಲ್ ರಾಹುಲ್/ಅಜಿಂಕ್ಯ ರಹಾನೆ, ಎಂ.ಎಸ್.ಧೋನಿ(ವಿಕೆಟ್ ಕೀಪರ್), ಯುವರಾಜ್ ಸಿಂಗ್, ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ,ರವೀಂದ್ರ ಜಡೇಜ, ಆರ್.ಅಶ್ವಿನ್/ ಅಮಿತ್ ಮಿಶ್ರಾ, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ.
ಇಂಗ್ಲೆಂಡ್: ಇಯಾನ್ ಮೊರ್ಗನ್(ನಾಯಕ), ಜೇಸನ್ ರಾಯ್, ಅಲೆಕ್ಸ್ ಹೇಲ್ಸ್ , ಜೋ ರೂಟ್, ಜೋಸ್ ಬಟ್ಲರ್(ವಿಕೆಟ್ ಕೀಪರ್), ಬೆನ್ ಸ್ಟೋಕ್ಸ್, ಮೊಯಿನ್ ಅಲಿ, ಕ್ರಿಸ್ ವೋಕ್ಸ್, ಡೇವಿಡ್ ವಿಲ್ಲಿ, ಆದಿಲ್ ರಶೀದ್, ಲಿಮ್ ಪ್ಲಂಕೆಟ್/ಲಿಯಾಮ್ ಡ್ಯಾಸನ್.
ಪಂದ್ಯದ ಸಮಯ: ಮಧ್ಯಾಹ್ನ : 1:30ಕ್ಕೆ ಆರಂಭ







