ನೋಟು ರದ್ದು ಆದೇಶದಿಂದ ಭ್ರಷ್ಟಾಚಾರ ನಿರ್ಮೂಲನೆ ಅಸಾಧ್ಯ :ಮಾಣಿಕ್ ಸರ್ಕಾರ್
ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ ವಿತರಣಾ ಸಮಾರಂಭ

ಬಾಗಲಕೋಟೆ, ಜ.15: ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಇದುವರೆಗೂ ದೇಶದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಅಚ್ಛೇದಿನ್ ಬರುತ್ತದೆ ಎಂದ ಪ್ರಧಾನಿ ಅವರ ನೋಟು ರದ್ದು ಆದೇಶದಿಂದಾಗಿ ದೇಶಾದ್ಯಂತ ಜನ ತಮ್ಮ ದುಡಿಮೆಯ ಹಣಕ್ಕಾಗಿ ಪರದಾಡುವಂತಾಗಿದೆ ಎಂದು ತ್ರಿಪುರಾ ರಾಜ್ಯದ ಮುಖ್ಯ ಮಂತ್ರಿ ಮಾಣಿಕ್ ಸರ್ಕಾರ್ ಹೇಳಿದರು.
ಅವರು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದ ಪಂಚಸಾಲಿ ಮಠದಲ್ಲಿ ರವಿವಾರ ಹಮ್ಮಿಕೊಳ್ಳಲಾಗಿದ್ದ ಮಠದ ವತಿಯಿಂದ ನೀಡುವ 2017ನೆ ಸಾಲಿನ ರಾಷ್ಟ್ರೀಯ ಬಸವ ಕೃಷಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ನೋಟು ರದ್ದು ಆದೇಶದಿಂದಾಗಿ ದೇಶದ ಕಪ್ಪು ಹಣ ಹೊರ ಬರಲಿದೆ, ಭ್ರಷ್ಟಾಚಾರ ತೊಲಗಲಿದೆ, ದೇಶಕ್ಕೆ ಅಚ್ಛೇದಿನ್ ಬರಲಿದೆ ಎಂದು ಹೇಳಿದ್ದರು. ಆದರೆ ಈ ಆದೇಶದಿಂದಾಗಿ ದೇಶದಲ್ಲಿ ಇಂತಹ ಯಾವುದೇ ಬದಲಾವಣೆಗಲಾಗಿಲ್ಲ. ಬದಲಾಗಿ ದೇಶದ ಜಿಡಿಪಿ ದರ ಶೇ.1ರಿಂದ 5ರಷ್ಟು ಕುಸಿದಿದೆ, ಶೇ.24 ರಷ್ಟು ರೈತರ ಆತ್ಮಹತ್ಯೆ ಬಿಜೆಪಿ ಸರಕಾರದ ಅವಧಿಯಲ್ಲಿ ವರದಿಯಾಗಿದೆ. ದೇಶದ ಜನರ ಪಾಲಿಗೆ ಇದೇ ಅಚ್ಛೇದಿನ್ ಎಂದು ಟೀಕಿಸಿದರು.
ಬಿಜೆಪಿ ಸರಕಾರದ ಅವಧಿಯಲ್ಲಿ ದೇಶದಲ್ಲಿ ಕೋಮು ಸಹಿಷ್ಣುತೆ ಮಾಯವಾಗಿದೆ. ಘರ್ ವಾಪ್ಸಿಯಂತಹ ಕೃತ್ಯಗಳು ಹೆಚ್ಚುತ್ತಿದ್ದು, ಇದರ ವಿರುದ್ಧ ಸಂಘಟಿತ ಹೋರಾಟಕ್ಕೆ ಯುವಜನತೆ ಮುಂದಾಗಬೇಕೆಂದು ಕರೆ ನೀಡಿದರು ಅವರು, ಬಸವಣ್ಣ, ಸ್ವಾಮಿ ವಿವೇಕಾನಂದರಂತಹ ಮಾನವತಾವಾದಿಗಳ ತತ್ವಾದಶಗಳ ಅನುಕರಣೆ ಪ್ರಸಕ್ತ ಯುವಜನರಿಗೆ ಅಗತ್ಯವಾಗಿದೆ. ನನ್ನದು ಬಸವಣ್ಣ, ವಿವೇಕಾನಂದ, ಅಂಬೇಡ್ಕರ್ ಅವರು ಪ್ರತಿಪಾದಿಸಿದ ಮಾನವೀಯತೆ ತತ್ವಗಳೇ ನನ್ನ ಧರ್ಮ, ಇದನ್ನು ಬಿಟ್ಟು ನನಗೆ ಬೇರೆ ಧರ್ಮಗಳಿಲ್ಲ. ಈ ಮಾನವೀಯತೆಯ ಧರ್ಮವಿಲ್ಲದಿದ್ದರೆ ನಾನು ಕಮ್ಮೂನಿಷ್ಟ್ ಆಗುತ್ತಿರಲಿಲ್ಲ ಎಂದು ಹೇಳಿದರು.
ಸಮಾರಂಭದಲ್ಲಿ ಪಂಷಸಾಲಿ ಮಠದ ಫೀಠಾಧ್ಯಕ್ಷ ಜಯ ಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.







