ಕಲೆಗಳು ಸಂಸ್ಕಾರದೊಂದಿಗೆ ಪರಿವರ್ತನೆಗೆ ಪೂರಕ
ರಾಷ್ಟ್ರೀಯ ಮಟ್ಟದ ಆಳ್ವಾಸ್ ಶಿಲ್ಪ ಮತ್ತು ವರ್ಣ ವಿರಾಸತ್ ಸಮಾಪನದಲ್ಲಿ ಕೃಷ್ಣಶೆಟ್ಟಿ ಅಭಿಪ್ರಾಯ

ಮೂಡುಬಿದಿರೆ,ಜ.15 : ಯಾವುದೇ ಒಬ್ಬ ಕಲಾವಿದನ ಕೆಲಸ ಜನರಿಗೆ ಮನರಂಜನೆ ನೀಡುವಂತಿರಬೇಕು. ರಾಜರುಗಳ ಕಾಲದಲ್ಲಿ ಶಿಲ್ಪ ಹಾಗು ವರ್ಣ ಕಲೆಗಳಿಗೆ ಹೆಚ್ಚಿನ ಗೌರವವಿತ್ತು ಮತ್ತು ಅವುಗಳು ಶಾಶ್ವತವಾಗಿ ಉಳಿದುಕೊಂಡಿವೆ. ಆಧುನಿಕ ಕಾಲದ ಕಲಾವಿದ ಸತ್ಯಾಗ್ರಹದ ಕೆಲಸ ಮಾಡುವುದರೊಂದಿಗೆ ತನ್ನ ಕಲಾಕೃತಿಗಳಲ್ಲಿ ಸಾಮಾಜಿಕ, ರಾಜಕೀಯ, ಧಾರ್ಮಿಕ ಹಾಗೂ ಅಲೋಚನೆಗಳನ್ನು ತನ್ನ ಕೃತಿಯಲ್ಲಿ ಮೂಡಿಸಿ ಸಂಸ್ಕಾರವನ್ನು ನೀಡಿ ಸಮಾಜವನ್ನು ಮತ್ತು ನೋಡುವ ಕಣ್ಣುಗಳನ್ನು ತಿದ್ದುವ ಮೂಲಕ ಪರಿವರ್ತನೆಯೊಂದಿಗೆ ಕಣ್ಮನ ತಣಿಸುವ ಕೆಲಸವನ್ನು ಮಾಡುತ್ತಾನೆ ಎಂದು ಡೆಲ್ಲಿ ಲಲಿತಾ ಕಲಾ ಅಕಾಡೆಮಿಯ ಮುಖ್ಯ ಆಡಳಿತಾಧಿಕಾರಿ ಕೃಷ್ಣ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಆಳ್ವಾಸ್ ವಿರಾಸತ್‌ಗೆ ಪೂರಕವಾಗಿ ಕಳೆದ 10 ದಿನಗಳ ಕಾಲ ವಿದ್ಯಾಗಿರಿಯ ಆವರಣದಲ್ಲಿ ನಡೆದ ಆಳ್ವಾಸ್ ಶಿಲ್ಪ ವಿರಾಸತ್ ಮತ್ತು 5 ದಿನಗಳ ಕಾಲ ನಡೆದ ಆಳ್ವಾಸ್ ವರ್ಣ ವಿರಾಸತ್ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸ್ವಾತಂತ್ರ್ಯ ನಂತರ ಬಂದ ಕಾರ್ಪೋರೇಟ್ ಸಂಸ್ಥೆಗಳು ಕಲೆ- ಸಂಸ್ಕೃತಿಗಾಗಿ ಕಡಿಮೆ ಕೆಲಸ ಮಾಡುತ್ತಿವೆ. ಆದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಕಲೆ ಮತ್ತು ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಿದೆ ಎಂದ ಅವರು ಕ್ರೀಡೆ ಮತ್ತು ಶಿಕ್ಷಣದಲ್ಲಿ ಹಲವು ರ್ಯಾಂಕ್‌ಗಳನ್ನು ಪಡೆದುಕೊಳ್ಳುವ ಆಳ್ವಾಸ್ ಸಂಸ್ಥೆಯು ಮುಂದೆ ಚಿತ್ರ ಮತ್ತು ವರ್ಣ ಕಲೆಗಳಲ್ಲೂ ರ್ಯಾಂಕ್‌ಗಳನ್ನು ಪಡೆಯುವ ಗುರಿಯನ್ನು ಹೊಂದುವಂತೆ ಕೆಲಸ ಮಾಡಬೇಕಾಗಿದೆ ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ/ಎಂ.ಮೋಹನ ಆಳ್ವ ಶಿಬಿರದಲ್ಲಿ ಭಾಗವಹಿಸಿ ಕಲೆಗಳಿಗೆ ಜೀವ ತುಂಬಿರುವ ಕಲಾವಿದರಿಗೆ ಪ್ರಮಾಣಪತ್ರವನ್ನು ವಿತರಿಸಿದರು.
ಬರಹಗಾರ ಬೆಂಗಳೂರಿನ ಗೋಪಾಲಕೃಷ್ಣ ಪೈ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಹಿರಿಯ ಕಲಾವಿದ ಈ ಬಾರಿಯ ವರ್ಣ ವಿರಾಸತ್ ಪ್ರಶಸ್ತಿ ವಿಜೇತ ಕಲಾವಿದ ರಾಜಸ್ಥಾನದ ರೇವ ಶಂಕರ್ ಶರ್ಮ, ಕಲಾವಿದರಾದ ಕೋಟಿ ಪ್ರಸಾದ್ ಆಳ್ವ, ಗಣೇಶ್ ಸೋಮಯಾಜಿ ಮತ್ತು ಪರುಷೋತ್ತಮ ಅಡ್ವೆ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ತೇಜಸ್ವಿನಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.







