ರಶ್ಯ ವಿರುದ್ಧದ ದಿಗ್ಬಂಧನೆ ಹಿಂದಕ್ಕೆ ಪಡೆಯುವ ಸುಳಿವು ನೀಡಿದ ಟ್ರಂಪ್

ವಾಶಿಂಗ್ಟನ್, ಜ. 15: ರಶ್ಯ ವಿರುದ್ಧದ ದಿಗ್ಬಂಧನೆಗಳನ್ನು ಸ್ವಲ್ಪ ಕಾಲಾವಧಿಯವರೆಗಾದರೂ ತಾನು ಇರಗೊಡುವುದಾಗಿ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಅದೇ ವೇಳೆ, ಚೀನಾ ತನ್ನ ಕರೆನ್ಸಿ ಮತ್ತು ವ್ಯಾಪಾರ ವಿಧಾನಗಳಲ್ಲಿ ಪ್ರಗತಿ ತೋರಿಸುವವರೆಗೆ ತಾನು ‘ಏಕ ಚೀನಾ’ ನೀತಿಗೆ ಬದ್ಧನಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
‘ವಾಲ್ ಸ್ಟ್ರೀಟ್ ಜರ್ನಲ್’ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಈ ಕುರಿತ ತನ್ನ ನಿಲುವುಗಳನ್ನು ಸ್ಪಷ್ಟಪಡಿಸಿದ್ದಾರೆ. ಅವರ ಸಂದರ್ಶನವನ್ನು ಪತ್ರಿಕೆಯು ಶುಕ್ರವಾರ ಪ್ರಕಟಿಸಿದೆ.
‘‘ರಶ್ಯ ನಮ್ಮಂದಿಗೆ ಸಹಕರಿಸುವುದಾದರೆ ಹಾಗೂ ನಿಜವಾಗಿಯೂ ನಮಗೆ ಸಹಾಯ ಮಾಡುವುದಾದರೆ, ಅದರ ವಿರುದ್ಧ ಯಾಕಾದರೂ ದಿಗ್ಬಂಧನೆ ವಿಧಿಸಬೇಕು?’’ ಎಂದು ಅವರು ಪ್ರಶ್ನಿಸಿದರು.
ಅಮೆರಿಕದ ಅಧ್ಯಕ್ಷೀಯ ಚುನಾವಣೆ ವ್ಯವಸ್ಥೆಯ ಮೇಲೆ ಸೈಬರ್ ದಾಳಿ ನಡೆಸಿದ ಆರೋಪದಲ್ಲಿ ಅಮೆರಿಕದ ಒಬಾಮ ಆಡಳಿತ ರಶ್ಯದ ಮೇಲೆ ಡಿಸೆಂಬರ್‌ನಲ್ಲಿ ದಿಗ್ಬಂಧನೆಗಳನ್ನು ವಿಧಿಸಿತ್ತು.
ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಹಾಗೂ ಅಮೆರಿಕಕ್ಕೆ ಮಹತ್ವದ್ದಾದ ಇತರ ಗುರಿಗಳನ್ನು ಸಾಧಿಸುವಲ್ಲಿ ರಶ್ಯ ಸಹಕಾರಿಯಾದರೆ, ಅದರ ವಿರುದ್ಧದ ದಿಗ್ಬಂಧನೆಗಳನ್ನು ಹಿಂದಕ್ಕೆ ಪಡೆಯುವ ಇಂಗಿತವನ್ನು ಟ್ರಂಪ್ ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.
ಜನವರಿ 20ರಂದು ತಾನು ಪ್ರಮಾಣವಚನ ಸ್ವೀಕರಿಸಿದ ಬಳಿಕ ಒಂದು ದಿನ ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್‌ರನ್ನು ಭೇಟಿಯಾಗಲು ತಾನು ಸಿದ್ಧನಿದ್ದೇನೆ ಎಂದು ಟ್ರಂಪ್ ‘ವಾಲ್‌ಸ್ಟ್ರೀಟ್ ಜರ್ನಲ್’ಗೆ ಹೇಳಿದರು.
ತೈವಾನ್‌ಗೆ ಸಂಬಂಧಿಸಿದ ‘ಏಕ ಚೀನಾ’ ನೀತಿಯನ್ನು ನೀವು ಬೆಂಬಲಿಸುವಿರೇ ಎಂಬ ಪ್ರಶ್ನೆಗೆ ಉತ್ತರಿಸಿದ ಪತ್ರಿಕೆ, ‘‘ ‘ಏಕ ಚೀನಾ’ ನೀತಿ ಸೇರಿದಂತೆ ಎಲ್ಲ ವಿಷಯಗಳು ಪರಿಶೀಲನೆಯಲ್ಲಿವೆ’’ ಎಂದರು.







