ಭಾರತೀಯರ ವಿರುದ್ಧದ ದೌರ್ಜನ್ಯಕ್ಕೆ ಬ್ರಿಟನ್ ಕ್ಷಮೆ ಯಾಚಿಸಲಿ: ಥರೂರ್ ಆಗ್ರಹ

ಕೋಲ್ಕತಾ, ಜ.15: ತಮ್ಮ ಆಡಳಿತಾವಧಿಯಲ್ಲಿ ಭಾರತೀಯರ ವಿರುದ್ಧ ನಡೆಸಿದ್ದ ತಪ್ಪುಕೃತ್ಯಗಳ ಬಗ್ಗೆ ಕ್ಷಮೆ ಯಾಚಿಸಲು ಬ್ರಿಟಿಷರಿಗೆ 2019ರಲ್ಲಿ ನಡೆಯಲಿರುವ ಜಲಿಯನ್‌ವಾಲಾ ಬಾಗ್ ಶತಮಾನೋತ್ಸವ ಅತ್ಯಂತ ಪ್ರಶಸ್ತ ಸಂದರ್ಭವಾಗಿದೆ ಎಂದು ಕಾಂಗ್ರೆಸ್ ಸಂಸದ ಮ್ತು ಸಾಹಿತಿ ಶಶಿ ಥರೂರ್ ಹೇಳಿದ್ದಾರೆ.
‘ಆ್ಯನ್ ಎರಾ ಆಫ್ ಡಾರ್ಕ್‌ನೆಸ್: ದಿ ಬ್ರಿಟಿಷ್ ಎಂಪೈರ್ ಇನ್ ಇಂಡಿಯ’ ಎಂಬ ತನ್ನ ಕೃತಿಯ ಬಗ್ಗೆ ಮಾತನಾಡುತ್ತಾ ಥರೂರ್ ಈ ಅಭಿಪ್ರಾಯ ವ್ಯಕ್ತಪಡಿಸಿದರು. ಇದೇ ಸಂದರ್ಭ ಅವರು ಕೋಲ್ಕತಾ ಲೈಬ್ರೆರಿ ಉತ್ಸವಕ್ಕೆ ಚಾಲನೆ ನೀಡಿದರು. ಬ್ರಿಟಿಷ ಪ್ರಧಾನಿ ಅಥವಾ ರಾಜಕುಟುಂಬದ ಯಾರಾದರೊಬ್ಬರು ಈ ಸಮಾರಂಭದಲ್ಲಿ ಪಾಲ್ಗೊಂಡು, ಜಲಿಯನ್‌ವಾಲಾ ಬಾಗ್ ಮಾತ್ರವಲ್ಲ, ಬ್ರಿಟಿಷ್ ಆಡಳಿತದ ಸಂದರ್ಭ ನಡೆದ ಇನ್ನಿತರ ಅನ್ಯಾಯದ ಬಗ್ಗೆಯೂ ಕ್ಷಮೆ ಯಾಚಿಸಲು ಇದು ಸಕಾಲವಾಗಿದೆ ಎಂದವರು ಹೇಳಿದರು.
ಬ್ರಿಟಿಷ್ ರಾಜರ ಹೆಸರಿನಲ್ಲಿ ಇಷ್ಟೊಂದು ಅನ್ಯಾಯವಾಗಿದ್ದರಿಂದ ಕ್ಷಮೆ ಯಾಚಿಸುವುದು ಒಂದು ಉತ್ತಮ ಅಭಿವ್ಯಕ್ತಿಯಾಗಿದೆ. ತಪ್ಪನ್ನು ಒಪ್ಪಿಕೊಳ್ಳಲು ಇನ್ನೂ ಸಮಯವಿದೆ ಎಂದ ಅವರು, ಆದರೆ ಬ್ರಿಟಿಷರು ಇದನ್ನು ಮರೆತುಹೋದ ಘಟನೆ ಎಂದು ಪರಿಗಣಿಸಿದ್ದಾರೆ. ಈ ಬಗ್ಗೆ ಪುಸ್ತಕದ ಮುನ್ನುಡಿಯಲ್ಲಿ ಉದಾಹರಣೆ ಸಹಿತ ವಿವರಿಸಿದ್ದೇನೆ ಎಂದರು.
1914ರ ಕೊಮಗಟ ಮಾರು ಘಟನೆಯ ಬಗ್ಗೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೇವ್ ಅವರು ಕ್ಷಮೆ ಯಾಚಿಸಿರುವ ಉದಾಹರಣೆ ನಮ್ಮ ಮುಂದಿದೆ( ಅಂದು ಹಿಂದೂ, ಸಿಖ್, ಮುಸ್ಲಿಂ ವಲಸಿಗರು ಸೇರಿದಂತೆ ನೂರಾರು ಮಂದಿ ಭಾರತೀಯರನ್ನು ಕೆನಡಾದ ಒಳ ಪ್ರವೇಶಿಸಲು ಬಿಡದೆ ಅವರನ್ನು ವಾಪಾಸು ಹಿಂಸೆಪೀಡಿತ ಭಾರತಕ್ಕೇ ಮರಳಿಸಲಾಗಿತ್ತು) ಎಂದೂ ಥರೂರ್ ಹೇಳಿದ್ದಾರೆ.







