ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ 18 ಡೆಮಾಕ್ರಟಿಕ್ ಸಂಸದರ ಬಹಿಷ್ಕಾರ

ವಾಶಿಂಗ್ಟನ್, ಜ. 15: ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಜನವರಿ 20ರಂದು ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮವನ್ನು ತಾವು ಬಹಿಷ್ಕರಿಸುವುದಾಗಿ ಡೆಮಾಕ್ರಟಿಕ್ ಪಕ್ಷದ ಕನಿಷ್ಠ 18 ಸಂಸದರು ಹೇಳಿದ್ದಾರೆ.
2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ರಶ್ಯದ ಹಸ್ತಕ್ಷೇಪ ಬಹಿರಂಗವಾಗಿರುವುದು ಹಾಗೂ ನಾಗರಿಕ ಹಕ್ಕುಗಳ ಕಾರ್ಯಕರ್ತ ಜಾನ್ ಲೂಯಿಸ್‌ರನ್ನು ಟ್ರಂಪ್ ನಿಂದಿಸಿರುವ ಹಿನ್ನೆಲೆಯಲ್ಲಿ ಅವರು ಈ ಕ್ರಮ ತೆಗೆದುಕೊಂಡಿದ್ದಾರೆ ಎಂದು ಮಾಧ್ಯಮ ವರದಿಯೊಂದು ರವಿವಾರ ತಿಳಿಸಿದೆ.
1987ರಲ್ಲಿ ತಾನು ಕಾಂಗ್ರೆಸ್ (ಅಮೆರಿಕದ ಸಂಸತ್ತು)ಗೆ ಬಂದ ಬಳಿಕ ಮೊದಲ ಬಾರಿಗೆ ಅಧ್ಯಕ್ಷೀಯ ಪ್ರಮಾಣವಚನ ಕಾರ್ಯಕ್ರಮವನ್ನು ಬಹಿಷ್ಕರಿಸುತ್ತಿರುವುದಾಗಿ ಟಿವಿ ಚಾನೆಲೊಂದಕ್ಕೆ ಸಂದರ್ಶನ ನೀಡಿದ ಡೆಮಾಕ್ರಟಿಕ್ ಪಕ್ಷದ ಪ್ರತಿನಿಧಿ ಲೂಯಿಸ್ ಹೇಳಿದ್ದಾರೆ.
ಯಾಕೆಂದರೆ, ರಶ್ಯದ ಹಸ್ತಕ್ಷೇಪದ ಹಿನ್ನೆಲೆಯಲ್ಲಿ ಟ್ರಂಪ್‌ರನ್ನು ತಾನು ‘ಸಕ್ರಮ’ ಅಧ್ಯಕ್ಷರೆಂದು ಪರಿಗಣಿಸುವುದಿಲ್ಲ ಎಂದರು ಎಂದು ಸಿಎನ್‌ಎನ್ ವರದಿ ಮಾಡಿದೆ.
ಟ್ರಂಪ್‌ರ ಅಟಾರ್ನಿ ಜನರಲ್ ಆಯ್ಕೆ ಸೆನೆಟರ್ ಜೆಫ್ ಸೆಶನ್ಸ್ ವಿರುದ್ಧ ಕಳೆದ ವಾರ ಕಾಂಗ್ರೆಸ್‌ನಲ್ಲಿ ಸಾಕ್ಷ ಹೇಳಿದ ಮೂವರು ಕರಿಯ ಸಂಸದರ ಪೈಕಿ ಲೂಯಿಸ್ ಓರ್ವರಾಗಿದ್ದಾರೆ.
ಲೂಯಿಸ್ ‘ಬರೀ ಮಾತನಾಡುತ್ತಾರೆ, ಏನೂ ಕೆಲಸ ಮಾಡುವುದಿಲ್ಲ’ ಎಂಬುದಾಗಿ ಟ್ರಂಪ್ ಹೇಳಿದ್ದರು. ರಶ್ಯದ ಪಾತ್ರದ ಬಗ್ಗೆ ದೂರುವ ಬದಲು, ನಿಮ್ಮ ಜಿಲ್ಲೆಯಲ್ಲಿರುವ ಸಮಸ್ಯೆಗಳನ್ನು ಸರಿಸಡಿಸಿಕೊಳ್ಳಿ, ಜನರಿಗೆ ಸಹಾಯ ಮಾಡಿ ಎಂಬುದಾಗಿ ಅವರು ಹರಿಹಾಯ್ದಿದ್ದರು.
‘‘ಜಾನ್ ಲೂಯಿಸ್‌ರನ್ನು ಅವಮಾನಿಸಿದರೆ ಅಮೆರಿಕವನ್ನು ಅವಮಾನಿಸಿದಂತೆ’’ ಎಂಬುದಾಗಿ ನ್ಯೂಯಾರ್ಕ್ ಸಂಸದ ಯ್ವೆಟ್ ಕ್ಲಾರ್ಕ್ ಟ್ವೀಟ್ ಮಾಡಿದ್ದಾರೆ. ತಾನು ಕೂಡ ಟ್ರಂಪ್‌ರ ಅಧಿಕಾರ ಸ್ವೀಕಾರ ಕಾರ್ಯಕ್ರಮವನ್ನು ಬಹಿಷ್ಕರಿಸುವುದಾಗಿ ಅವರು ಹೇಳಿದ್ದಾರೆ.
ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸುವ ಬದಲು ತಾವು ಡಿಸಿಯಲ್ಲಿ ಹಾಗೂ ತಮ್ಮ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಕಾಂಗ್ರೆಸ್‌ನ ಕೆಲವು ಸದಸ್ಯರು ಹೇಳಿದ್ದಾರೆ.
‘‘ ‘ಬರೀ ಮಾತು, ಕೆಲಸ ಏನೂ ಇಲ್ಲ.’ ನಾನು ಜಾನ್ ಲೂಯಿಸ್ ಪರವಾಗಿ ನಿಲ್ಲುತ್ತೇನೆ. ನಾನು ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ’’ ಎಂದು ಕ್ಯಾಲಿಫೋರ್ನಿಯ ಪ್ರತಿನಿಧಿ ಮಾರ್ಕ್ ಟಕಾನೊ ಟ್ವೀಟ್ ಮಾಡಿದ್ದಾರೆ.







