ದಿಡ್ಡಳ್ಳಿಯಲ್ಲಿ ವಾಂತಿ, ಭೇದಿ : ಮೂವರು ಆಸ್ಪತ್ರೆಗೆ ದಾಖಲು

ಮಡಿಕೇರಿ ಜ.15 :ಮಾಲ್ದಾರೆ ಸಮೀಪ ದಿಡ್ಡಳ್ಳಿಯಲ್ಲಿ ಕಳೆದ ಕೆಲವು ದಿನಗಳಿಂದ ನಿರಾಶ್ರಿತರಾಗಿ ತಾತ್ಕಾಲಿಕವಾಗಿ ಆಶ್ರಯ ಪಡೆದುಕೊಂಡಿರುವ ಕೆಲವರಿಗೆ ರೋಗ ಲಕ್ಷಣಗಳು ಪತ್ತೆಯಾಗಿದೆ. ಕಳೆದ ಒಂದು ವಾರದಿಂದ ಜ್ವರ, ವಾಂತಿ ಭೇದಿಯಿಂದ ಕೆಲವರು ಬಳಲಿದ್ದು, ಇಂದು ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ದಿಡ್ಡಳ್ಳಿಯ ಕರಿಯ ಹಾಗೂ ಮಲ್ಲಿ ಎಂಬುವವರನ್ನು ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದ್ದು, ಸೋಮ ಎಂಬುವವರು ಸಿದ್ದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಹಿಂದೆಯೂ ಕೆಲವರಿಗೆ ಇದೇ ರೀತಿಯ ರೋಗ ಲಕ್ಷಣ ಕಾಣಿಸಿಕೊಂಡಿದ್ದು, ಸಿದ್ದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು. ಸುಮಾರು 500 ಕುಟುಂಬಗಳು ಒಂದೇ ಪ್ರದೇಶದಲ್ಲಿ ವಾಸಿಸುತ್ತಿದ್ದು, ಊಟ ಉಪಹಾರದಲ್ಲಾಗುತ್ತಿರುವ ಏರು ಪೇರಿನಿಂದಾಗಿ ಈ ಬೆಳವಣಿಗೆ ಕಂಡು ಬಂದಿದೆ ಎಂದು ಹೇಳಲಾಗುತ್ತಿದೆ.
ನಿರಾಶ್ರಿತರು ಈ ಪ್ರದೇಶದಲ್ಲಿ ಆಶ್ರಯ ಪಡೆದ ನಂತರ ವಿವಿಧ ಇಲಾಖೆಗಳ ವತಿಯಿಂದ ತಯಾರಿಸಿದ ಆಹಾರವನ್ನು ನೀಡಲಾಗುತ್ತಿತ್ತು. ಆದರೆ, ಇತ್ತಿಚೆಗೆ ದಿನಸಿ ಸಾಮಗ್ರಿಗಳನ್ನಷ್ಟೆ ನೀಡಿ ಅಡುಗೆಯನ್ನು ನಿರಾಶ್ರಿತರೆ ತಯಾರಿಸಿಕೊಳ್ಳಬೇಕಾಗಿತ್ತು. ಗಂಜಿ ಕೇಂದ್ರವನ್ನು ಕೂಡ ಮುಚ್ಚಲಾಗಿದೆ. ಇಲಾಖೆ ಮೂಲಕ ನೀಡಲಾಗುತ್ತಿರುವ ದಿನಸಿ ಸಾಮಾಗ್ರಿಗಳು ಉತ್ತಮ ಗುಣಮಟ್ಟದಿಂದ ಕೂಡಿಲ್ಲವೆಂದು ಗಿರಿಜನ ಮುಖಂಡ ಜೆ.ಕೆ. ಅಪ್ಪಾಜಿ ಆರೋಪಿಸಿದ್ದಾರೆ.







