ಮಡಿಕೇರಿ : ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಟಿ.ಪ್ರದೀಪ್ ಹೃದಯಾಘಾತದಿಂದ ನಿಧನ

ಮಡಿಕೇರಿ ಜ.15:ತೀವ್ರ ಹೃದಯಾಘಾತಕ್ಕೆ ಒಳಗಾಗಿ ಕೊಡಗು ಜಿಲ್ಲಾ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರಾದ ಬಿದ್ದಾಟಂಡ ಟಿ.ಪ್ರದೀಪ್(56) ಅವರು ಭಾನುವಾರ ಸಂಜೆ ನಿಧನರಾಗಿದ್ದು, ಸಹೃದಯಿ ರಾಜಕಾರಣಿಯೊಬ್ಬರನ್ನು ಕೊಡಗು ಜಿಲ್ಲೆ ಕಳೆದುಕೊಂಡಿದೆ.
ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಸಮೀಪದ ಕೊಳಕೇರಿ ಗ್ರಾಮದವರಾದ ಬಿ.ಟಿ. ಪ್ರದೀಪ್ ಅವರು ಇಂದು ಮಧ್ಯಾಹ್ನ ಹೃದಯಾಘಾತಕ್ಕೆ ಒಳಗಾಗಿ ಅಸ್ವಸ್ಥರಾಗಿದ್ದು, ಇವರನ್ನು ಮೈಸೂರು ಆಸ್ಪತ್ರೆಗೆ ಕೊಂಡೊಯ್ಯುವ ಹಾದಿಯ ನಡುವೆಯೆ ಕೊನೆಯುಸಿರೆಳೆೆದಿರುವುದಾಗಿ ಕುಟುಂಬ ಮೂಲಗಳು ತಿಳಿಸಿವೆ.
ಶಿಕ್ಷಣದ ಹಂತದಿಂದಲೆ ರಾಜಕೀಯದತ್ತ ಒಲವು ಮೂಡಿಸಿಕೊಂಡು ಕಾಂಗ್ರೆಸ್‌ನತ್ತ ಆಸಕ್ತರಾಗಿದ್ದ ಬಿ.ಟಿ. ಪ್ರದೀಪ್ ಅವರು, ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ ನಾಯಕತ್ವದ ಗುಣಗಳಿಂದ ಗಮನ ಸೆಳೆೆದವರಾಗಿದ್ದರು. ನಂತರದ ದಿನಗಳಲ್ಲಿ ತಮ್ಮ ಸೌಜನ್ಯಯುತ ನಡವಳಿಕೆ, ನಾಯಕತ್ವದ ಗುಣಗಳ ಮೂಲಕ ಪಕ್ಷದ ವಿವಿಧ ಸ್ತರಗಳಲ್ಲಿ ಕಾರ್ಯನಿರ್ವಹಿಸಿದ ಬಿ.ಟಿ.ಪ್ರದೀಪ್ ಅವರು ಒಂದು ಅವಧಿಗೂ ಹೆಚ್ಚಿನ ಕಾಲ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಸೇವೆಸಲ್ಲಿಸಿದ್ದರು.
ತಮ್ಮ ಇಲ್ಲಿಯವಗಿನ ರಾಜಕೀಯ ಅವಧಿಯಲ್ಲಿ ಎಲ್ಲರೊಂದಿಗೆ ಆತ್ಮೀಯ ಸಂಬಂಧಗಳನ್ನು ಹೊಂದಿದ್ದ ಬಿ.ಟಿ. ಪ್ರದೀಪ್ ಅವರು ವೀರಾಜಪೇಟೆ ವಿಧಾನಸಭಾ ಚುನಾವಣೆಯಲ್ಲಿ ಕಳೆೆದ ಬಾರಿ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಯಾಗಿ ಕಣಕ್ಕಿಳಿದು ಪರಾಭವಗೊಂಡಿದ್ದರೂ, ಬಿಜೆಪಿ ಅಭ್ಯರ್ಥಿ ಕೆ.ಜಿ. ಬೋಪಯ್ಯ ಅವರಿಗೆ ತೀವ್ರ ಪೈಪೋಟಿಯನ್ನು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ರಾಜಕೀಯದ ಏರುಗತಿಯ ಹಾದಿಯಲ್ಲಿ ಸಾಗುತ್ತಿದ್ದ ಬಿ.ಟಿ. ಪ್ರದೀಪ್ ಅವರು ಇದರ ನಡುವೆಯೇ ತಮ್ಮ ಬದುಕಿನ ಪಯಣವನ್ನು ಹಠಾತ್ತನೆ ಮೊಟಕು ಗೊಳಿಸಿ ತೆರಳುವ ಮೂಲಕ ಜಿಲ್ಲೆಯ ಜನತೆ ದಿಗ್ಭ್ರಮೆಗೆ ಒಳಗಾಗಿದೆ. ಪ್ರದೀಪ್ ಅವರು ಪತ್ನಿ, ಇಬ್ಬರು ಮಕ್ಕಳು, ಸಹೋದರರನ್ನು ಅಗಲಿದ್ದಾರೆ. ಸೋಮವಾರ ಅಪರಾಹ್ನ ಸ್ವಗ್ರಾಮ ಕೊಳಕೇರಿಯಲ್ಲಿ ಮೃತರ ಅಂತ್ಯ ಸಂಸ್ಕಾರ ನಡೆಯಲಿದೆ.
ಪ್ರದೀಪ್ ಅವರ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ. ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಜಿಲ್ಲಾ ಕಾಂಗ್ರೆಸ್ ಪ್ರಭಾರ ಅಧ್ಯಕ್ಷ ಟಿ.ಪಿ.ರಮೇಶ್, ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದಾರೆ.







