ಉಳ್ಳಾಲ: ಇನ್ ಲ್ಯಾಂಡ್ ಇಂಪಾಲ ವಸತಿ ಮತ್ತು ವಾಣಿಜ್ಯ ಸಂಕೀರ್ಣ ಉದ್ಘಾಟನೆ

ಉಳ್ಳಾಲ,ಜ.15: ಇಂದಿನ ವೇಗದ ಯುಗದಲ್ಲಿ ಮಂಗಳೂರು ಕೂಡಾ ವೇಗದ ಅಭಿವೃದ್ಧಿಯನ್ನು ಕಾಣುತ್ತಿದೆ. ಇದರಲ್ಲಿ ಇನ್‌ಲ್ಯಾಂಡ್ ಬಿಲ್ಡರ್ಸ್ ಇವರ ಪಾತ್ರ ಮಹತ್ವದ್ದಾಗಿದೆ. ಮೌಲ್ಯಾಧಾರಿತ , ಗುಣಮಟ್ಟದ ವ್ಯವಸ್ಥೆಯನ್ನು ಕಲ್ಪಿಸುವುದರ ಮೂಲಕ ಇನ್‌ಲ್ಯಾಂಡ್ ಇಷ್ಟು ದೊಡ್ಡದಾಗಿ ಬೆಳೆಯಲು ಸಾಧ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.
ಅವರು ಉಳ್ಳಾಲ ಪೇಟೆಯಲ್ಲಿ ಇನ್ ಲ್ಯಾಂಡ್ ಇನ್ಫ್ರಾಸ್ಟ್ರಕ್ಚರ್ ಆಂಡ್ ಡೆವಲಪ್ಪರ್ಸ್ ಸಂಸ್ಥೆ ನಿರ್ಮಿಸಿದ ಇನ್ ಲ್ಯಾಂಡ್ ಇಂಪಾಲ ವಸತಿ ಮತ್ತು ವಾಣಿಜ್ಯ ಸಂಕೀರ್ಣದ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಜನರ ಅಪೇಕ್ಷೆಗೆ ಅನುಗುಣವಾಗಿ ಜಿಲ್ಲೆ ಅಭಿವೃದ್ಧಿ ಪಥದಲ್ಲಿದ್ದರೆ, ಅದಕ್ಕೆ ತಕ್ಕುದಾದ ರೀತಿಯಲ್ಲಿ ಇನ್‌ಲ್ಯಾಂಡ್ ಬಿಲ್ಡರ್ಸ್ ಇವರ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ನಿರ್ಮಿಸಿರುವ ಬಹುಮಹಡಿ ಕಟ್ಟಡಗಳು ಜಿಲ್ಲೆಯ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸುವಂತೆ ಮಾಡಿದೆ ಎಂದು ಹೇಳಿದರು.
ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯು.ಟಿ.ಖಾದರ್ ಮಾತನಾಡಿ, ಇನ್ ಲ್ಯಾಂಡ್ ಬಿಲ್ಡರ್ಸ್ ಮಾಲೀಕ ಸಿರಾಜ್ ಇವರ ಪ್ರಾಮಾಣಿಕ, ಬದ್ಧತೆ ಮತ್ತು ನಿಷ್ಠೆಯಿಂದಾಗಿ ಸಂಸ್ಥೆ ಬೆಂಗಳೂರಿನಲ್ಲೂ ಹೆಸರುವಾಸಿಯಾಗಿದೆ. ಇಂಫಾಲ ವಾಣಿಜ್ಯ ಮತ್ತು ವಸತಿ ಸಂಕೀರ್ಣ ಸ್ಥಾಪಿಸುವುದರ ಮೂಲಕ ಉಳ್ಳಾಲವನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತೆ ಮಾಡಿರುವ ಸಂಸ್ಥೆ ಕಾರ್ಯ ಶ್ಲಾಘನೀಯ. ದವಾ, ದುಆ, ಹವಾ ಎಲ್ಲವೂ ಉಳ್ಳಾಲದಲ್ಲಿ ಇರುವ ಮೂಲಕ ಸಮೃದ್ಧಿಯ ಪ್ರದೇಶವೆನಿಸಿದೆ. ಸೌಹಾರ್ದತೆಯ ಬಾಳ್ವೆಯೊಂದಿಗೆ ಶ್ರಮಜೀವಿಗಳು, ಜೀವಕ್ಕೆ ಜೀವ ಕೊಡುವ ಯುವಕರು ಉಳ್ಳಾಲದಲ್ಲಿದ್ದಾರೆ ಎಂದರು.
ಸಂಸದ ನಳಿನ್ ಕುಮಾರ್ ಕಟೀಲ್, ಮಂಗಳೂರು ದಕ್ಷಿಣ ಶಾಸಕ ಜೆ.ಆರ್.ಲೋಬೊ, ಉತ್ತರ ಶಾಸಕ ಮೊಯ್ದೀನ್ ಬಾವಾ, ಕ್ರೆಡಾಯ್ ಅಧ್ಯಕ್ಷ ಡಿ.ಬಿ.ಮೆಹ್ತಾ, ಯೆನೆಪೋಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ವೈ . ಅಬ್ದುಲ್ಲಾ ಕುಂಞಿ, ಉಳ್ಳಾಲ ಸೈಯ್ಯಿದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್, ಉಳ್ಳಾಲ ನಗರಸಭೆ ಅಧ್ಯಕ್ಷ ಕುಂಞಿಮೋನು, ಇನ್ ಲ್ಯಾಂಡ್ ಸಂಸ್ಥೆ ನಿರ್ದೇಶಕರಾದ ಮೇರಾಜ್ ಯೂಸುಫ್ ಮತ್ತು ವಹಾಜ್ ಯೂಸುಫ್ ಉಪಸ್ಥಿತರಿದ್ದರು.
ಪತ್ರಕರ್ತ ಮನೋಹರ ಪ್ರಸಾದ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಧರ್ಮಗುರು ಪಿ.ಯಸ್. ಮಹಮ್ಮದ್ ಆಲಿ ಸಖಾಫಿ ದುಆ ನೆರವೇರಿಸಿದರು.
ಉಳ್ಳಾಲ ಹೃದಯಭಾಗದಲ್ಲಿರುವ ಇನ್ ಲ್ಯಾಂಡ್ ಇಂಪಾಲ 109 ಘಟಕಗಳನ್ನು ಹೊಂದಿದೆ. ವಸತಿ ಸಂಕೀರ್ಣದಲ್ಲಿ 2 ರಿಂದ 3 ಹಾಸಿಗೆಯುಳ್ಳ ಮನೆಗಳನ್ನು ಹೊಂದಿದೆ. 10ಕ್ಕೂ ಅಧಿಕ ವಾಣಿಜ್ಯ ಸಂಕೀರ್ಣಗಳನ್ನು ಹೊಂದಿರುವ ಕಟ್ಟಡದ ಮೇಲ್ಮಹಡಿಯಿಂದ ಸಮುದ್ರ ತಟದ ವಿಹಂಗಮ ನೋಟವನ್ನು ವೀಕ್ಷಿಸಬಹುದು.
ಇಂಪಾಲ ವಸತಿ ಸಂಕೀರ್ಣ ಕಟ್ಟಡಕ್ಕೆ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯು.ಟಿ.ಖಾದರ್ ಚಾಲನೆ ನೀಡಿದರು.ವಾಣಿಜ್ಯ ಸಂಕೀರ್ಣಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಚಾಲನೆ ನೀಡಿದರು.
ಜಿಲ್ಲೆಯಲ್ಲಿ ಉತ್ತಮ ಗುಣಮಟ್ಟವನ್ನು ಕಾಪಾಡಿಕೊಂಡು ಬಂದಿರುವ ಇನ್ ಲ್ಯಾಂಡ್ ಸಂಸ್ಥೆಯ ಪ್ರತಿಷ್ಠಿತ ಕಟ್ಟಡಗಳಲ್ಲಿ ಇದು ಒಂದಾಗಿದೆ. ಬೆಂಗಳೂರಿನಲ್ಲಿಯೂ ವಿಶ್ವಾಸಯುತ ಬಿಲ್ಡರ್ಸ್ ಎಂದು ನಾಮಾಂಕಿತವನ್ನು ದಾಖಲಿಸಿರುವ ಸಂಸ್ಥೆಯು ನಿರ್ಮಿಸಿದ ಕಟ್ಟಡಗಳು ಒಂದಕ್ಕಿಂತ ಇನ್ನೊಂದು ವಿಭಿನ್ನವಾಗಿದೆ. ಒಳ ಮತ್ತು ಹೊರ ವಿನ್ಯಾಸವನ್ನು ಅಚ್ಚುಕಟ್ಟಾಗಿ ನೆರವೇರಿಸುವ ಸಂಸ್ಥೆಯ ಜಿಲ್ಲೆಯ ಜನರ ಮನಸ್ಸನ್ನು ಗೆದ್ದಿದೆ. ಇದನ್ನು ದೃಷ್ಟಿಯಲ್ಲಿಟ್ಟು ಸರಕಾರದಿಂದ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ಸಂಸ್ಥೆ ಅಧ್ಯಕ್ಷ ಸಿರಾಜ್ ಅಹ್ಮದ್ ತಿಳಿಸಿದರು.







