ಆರೋಗ್ಯ ಇಲಾಖೆಯ ಎಲ್ಲ ಹುದ್ದೆಗಳು ಭರ್ತಿ: ಸಚಿವ ರಮೇಶ್

ಉಡುಪಿ, ಜ.15: ರಾಜ್ಯದಲ್ಲಿ ಖಾಲಿ ಇದ್ದ ಎಲ್ಲ 300ಹುದ್ದೆಗಳಿಗೆ ವೈದ್ಯರ ನೇಮಕ ಮಾಡಲಾಗಿದೆ. ಪ್ಯಾರಾ ಮೆಡಿಕಲ್ ಸಿಬ್ಬಂದಿಗಳನ್ನು ಮೊದಲ ಹಂತ ದಲ್ಲಿ 2000ಮಂದಿಯನ್ನು ನೇಮಕ ಮಾಡಲಾಗಿದೆ. ಎರಡನೆ ಹಂತದಲ್ಲಿ 4000ಮಂದಿಯ ನೇಮಕ ಪ್ರಕ್ರಿಯೆ ಆರಂಭಗೊಂಡಿದ್ದು, ಮುಂದಿನ ಒಂದೂವರೆ ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ರಾಜ್ಯ ಆರೋಗ್ಯ ಸಚಿವ ರಮೇಶ್ ಕುಮಾರ್ ಹೇಳಿದ್ದಾರೆ.
ಕೋಟ ಕಾರಂತರ ಥೀಮ್ ಪಾರ್ಕ್‌ನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ 2353 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 53 ಮೆಡಿಕಲ್ ಕಾಲೇಜುಗಳಿವೆ. ನಮಗೆ ಬೇಕಾಗಿರುವುದು 300 ರಿಂದ 400 ಮಂದಿ ವೈದ್ಯರು. ಆದರೆ ಎಂಬಿಬಿಎಸ್ ಪದವೀಧರರು ಹಳ್ಳಿಗಳಿಗೆ ಹೋಗಲು ನಿರಾಕರಿಸುತ್ತಿದ್ದಾರೆ. ಕಡ್ಡಾಯ ಗ್ರಾಮೀಣ ಸೇವೆ ಮಾಡಿದಕ್ಕೆ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಅದಕ್ಕಾಗಿ ಭಾರತ ಹಾಗೂ ರಾಜ್ಯ ಸರಕಾರದಿಂದ ಮಾನ್ಯತೆ ಪಡೆದ ಆಯುರ್ವೇದಿಕ್ ಕಾಲೇಜುಗಳ ಪದವೀಧರರಿಗೆ ಗ್ರಾಮೀಣ ಪ್ರದೇಶದಲ್ಲಿ ರೋಗಿಗಳಿಗೆ ಆ ತಕ್ಷಣಕ್ಕೆ ಬೇಕಾದಂತಹ ಚಿಕಿತ್ಸೆಯನ್ನು ಕೊಡುವ ಕೌಶಲ್ಯ ತರಬೇತಿಯನ್ನು ಆರು ತಿಂಗಳ ಕಾಲ ನೀಡಿ ಖಾಲಿ ಇದ್ದ ವೈದ್ಯ ಹುದ್ದೆಗೆ ನೇಮಕ ಮಾಡಿಕೊಳ್ಳ ಲಾಗಿದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯ ಹುದ್ದೆ ಖಾಲಿ ಇರಬಾರದು ಹಾಗೂ ಇದರಿಂದ ಬಡವರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಈ ಕೆಲಸ ಮಾಡಲಾಗಿದೆ. ಸರಕಾರಿ ಸೇವೆಯಿಂದ ಹೊರಗೆ ಇರುವವ ಆಯುರ್ವೇದಿಕ್ ಪದವೀಧರರಿಗೆ ಈ ಸೌಲಭ್ಯ ಸಿಗುವುದಿಲ್ಲ. ಈಗ ನೇಮಕ ಮಾಡಿಕೊಂಡಿರುವವರು ಸರಕಾರಿ ಸೇವೆ ಬಿಟ್ಟು ಹೊರಗೆ ಹೋದರೆ ಇದು ಅನ್ವಯಿಸುವುದಿಲ್ಲ ಎಂದು ಅವರು ಹೇಳಿದರು.
ಅಗತ್ಯ ಔಷಧಿ ಸರಬರಾಜು: ಪ್ರಾಥಮಿಕ, ಸಮುದಾಯ ಹಾಗೂ ತಾಲೂಕು ಆಸ್ಪತ್ರೆಗಳಿಗೆ ಒಂದು ತಿಂಗಳಿಗೆ ಬರುವ ರೋಗಿಗಳು ಹಾಗೂ ಅವರಿಗೆ ಬೇಕಾದ ಔಷಧಿಯ ಕುರಿತ ವರದಿಯನ್ನು ಪಡೆದು ಅಗತ್ಯವಿರುವ ಔಷಧಿಗಳನ್ನು ಶೇ.5ರಷ್ಟು ಹೆಚ್ಚುವರಿ ಯಾಗಿ ಆಸ್ಪತ್ರೆಗಳಿಗೆ ಸರಬರಾಜು ಮಾಡಲಾಗುವುದು ಎಂದು ಸಚಿವ ರಮೇಶ್ ಕುಮಾರ್ ತಿಳಿಸಿದರು.
ಜನ ಸಂಜೀವಿನಿ ಹಾಗೂ ಜನ ಔಷಧಿ ಯೊಜನೆಯಲ್ಲಿ ಶೇ.70ರಷ್ಟು ಕಡಿಮೆ ಬೆಲೆಯ ಔಷಧಿ ಗಳನ್ನು ನೀಡಲಾಗುವುದು. ರೋಗಿಗಳಿಗೆ ಹೊರಗಡೆ ಚೀಟಿ ಬರೆದುಕೊಡಲು ವೈದ್ಯರಿಗೆ ಅವಕಾಶ ಇಲ್ಲ. ರಾಜ್ಯದ ಪ್ರತಿ 10 ಕಿ.ಮೀ.ಗೆ ಒಂದು ಆ್ಯಂಬುಲೆನ್ಸ್‌ಗಳನ್ನು ನಿಯೋಜಿಸಲಾಗಿದೆ. ಪ್ರತಿ ತಾಲೂಕು ಆಸ್ಪತ್ರೆಗಳಿಗೆ ತುರ್ತು ಚಿಕಿತ್ಸಾ ಘಟಕ ಹಾಗೂ ಡಯಾಲಿಸಿಸ್ ವಿಭಾಗವನ್ನು ತೆರೆಯಲಾಗುವುದು ಎಂದರು.
ಸರಕಾರಿ ಆಸ್ಪತ್ರೆಗಳಲ್ಲಿನ ಶುಚಿತ್ವದ ಜವಾಬ್ದಾರಿಯನ್ನು ಸ್ಥಳೀಯರು ವಹಿಸಿ ಕೊಳ್ಳಬೇಕು. ಆಸ್ಪತ್ರೆಗಳಲ್ಲಿರುವ ಆರೋಗ್ಯ ರಕ್ಷಾ ಸಮಿತಿಯು ಪ್ರಸ್ತುತ ಕಾರ್ಯಾಚರಿಸುತ್ತಿಲ್ಲ. ಇದರ ಜವಾಬ್ದಾರಿ ವಹಿಸಬೇಕಾದ ವೈದ್ಯರು ಹಾಗೂ ಸ್ಥಳೀಯರಿಗೆ ಆಸಕ್ತಿ ಇಲ್ಲ. ಹಾಗಾಗಿ ಕೆಲವು ಆಸ್ಪತ್ರೆಗಳಲ್ಲಿ ಸಮಸ್ಯೆಗಳು ಎದು ರಾಗಿವೆ. ಈ ಕುರಿತು ಜನರಲ್ಲಿ ಪ್ರಜ್ಞೆ ಬಂದರೆ ಸಮಸ್ಯೆ ಪರಿಹಾರವಾಗುತ್ತದೆ ಎಂದು ಸಚಿವರು ಹೇಳಿದರು.
ಉಡುಪಿ ತಾಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಪೂರ್ಣ ಮಾಹಿತಿ ಇಲ್ಲ. ಅಸ್ಪಷ್ಟ ಮಾಹಿತಿ ನೀಡಲು ನನಗೆ ಇಷ್ಟ ಇಲ್ಲ. ಅಂದು ಹೇಳಿದ್ದೆ ನಿಜ. ಈಗ ಏನು ಆಗಿದೆ ಎಂಬುದು ಗೊತ್ತಿಲ್ಲ. ನಾಳೆ ಬೆಂಗಳೂರು ಹೋದ ಕೂಡಲೇ ಆ ಬಗ್ಗೆ ವಿಚಾರಿಸುತ್ತೇನೆ ಎಂದು ಹೇಳಿದರು.
‘ಎಂಓಯು ಇಲ್ಲದೆ ಶಿಲಾನ್ಯಾಸ ಮಾಡಲು ಹುಚ್ಚ’
ಉಡುಪಿ ಮಹಿಳಾ ಮತ್ತು ಮಕ್ಕಳ ಸರಕಾರಿ ಆಸ್ಪತ್ರೆಯನ್ನು ಖಾಸಗಿಯ ವರಿಗೆ ವಹಿಸಿಕೊಡುವ ಕುರಿತ ತಯಾರಿಸಲಾದ ಒಪ್ಪಂದ ಪತ್ರ(ಎಂಓಯು) ದ ಪ್ರತಿಯನ್ನು ಅರ್ಜಿ ಹಾಕಿ ಕೇಳಿದ್ದಲ್ಲಿ ನೀಡಲಾಗುವುದು ಎಂದು ರಾಜ್ಯ ಆರೋಗ್ಯ ಸಚಿವ ರಮೇಶ್ ಕುಮಾರ್ ಹೇಳಿದರು.
ಎಂಓಯು ಕೊಡುತ್ತಿಲ್ಲ ಎಂದು ರಸ್ತೆಯಲ್ಲಿ ನಿಂತು ಮಾತನಾಡುವರ ಬಗ್ಗೆ ಮಾತನಾಡಲು ನನಗೆ ಆಸಕ್ತಿ ಇಲ್ಲ. ಅರ್ಜಿ ಹಾಕಿ ಕೊಡದಿದ್ದರೆ ನನಗೆ ಕೇಳಿ. ಒಳ್ಳೆಯ ಕೆಲಸ ಮಾಡುವುದಕ್ಕೆ ಅಡ್ಡ ಬರುತ್ತಾರೆ. ಸರಕಾರ ಎಂಓಯು ಮಾಡದೆ ಮುಖ್ಯಮಂತ್ರಿ, ಮಂತ್ರಿಗಳು ಬಂದು ಶಿಲಾನ್ಯಾಸ ಮಾಡಲು ಹುಚ್ಚು ಹಿಡಿದಿದೆಯಾ? ಅಷ್ಟು ನಮಗೆ ಜವಾಬ್ದಾರಿ ಇಲ್ಲವೇ. ಅಷ್ಟು ಕೆಟ್ಟವ ರಲ್ಲ ನಾವು ಎಂದರು.







