ಪ್ರಜಾಪಿತ ಬ್ರಹ್ಮಕುಮಾರಿ ವಿ.ವಿ.ಯಿಂದ ಆರೆಸ್ಸೆಸ್ ಕಲಿಯಲಿ : ಅಡ್ವಾಣಿ
ಮಹಿಳೆಯರಿಗೆ ಉನ್ನತ ಸ್ಥಾನ

ಹೊಸದಿಲ್ಲಿ, ಜ.15: ಆರೆಸ್ಸೆಸ್ ಸಂಘಟನೆಯ ನೇತೃತ್ವವನ್ನು ಮಹಿಳೆಯರು ವಹಿಸಿಕೊಳ್ಳಬೇಕು ಎಂಬ ಇಂಗಿತವನ್ನು ಹಿರಿಯ ಬಿಜೆಪಿ ಮುಖಂಡ ಎಲ್. ಕೆ. ಅಡ್ವಾಣಿ ಅವರು ವ್ಯಕ್ತಪಡಿಸಿದ್ದಾರೆ.
ಇಲ್ಲಿ ನಡೆದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಸ್ಥಾಪಕ, ಧಾರ್ಮಿಕ ಮುಖಂಡ ಪಿತಾಶ್ರೀ ಬ್ರಹ್ಮ ಅವರ 48ನೇ ಪೀಠಾರೋಹಣ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಸಂದರ್ಭದಲ್ಲಿ ಈ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಬಹ್ಮಕುಮಾರಿ ಈಶ್ವರೀಯ ಸಂಘಟನೆಯು ಮಹಿಳೆಯರ ನೇತೃತ್ವಕ್ಕೆ ಆದ್ಯತೆ ನೀಡುತ್ತಿರುವುದು ಅಭಿನಂದನೀಯ. ಮೇಲಿನ ಸ್ಥಾನವನ್ನೆಲ್ಲ ಮಹಿಳೆಯರೇ ಅಲಂಕರಿಸಿದ್ದಾರೆ. ಆರೆಸ್ಸೆಸ್ ಸಂಘಟನೆ ಇದನ್ನು ನೋಡಿ ಕಲಿಯುವುದು ಬಹಳಷ್ಟಿದೆ ಎಂದು ಅವರು ಹೇಳಿದರು.
ಇದೀಗ ಪಾಕಿಸ್ತಾನಕ್ಕೆ ಸೇರಿರುವ ಕರಾಚಿಯ ಸಿಂಧ್ ಪ್ರಾಂತ್ಯದಲ್ಲಿ ತಾನು ಜನಿಸಿದ್ದು ಈ ಪ್ರದೇಶ ಎಂದಿಗೂ ಭಾರತದ ಭಾಗವಾಗಿರದು ಎಂಬುದನ್ನು ನೆನಪಿಸಿಕೊಂಡಾಗಲೆಲ್ಲಾ ತನಗೆ ಅತೀವ ಯಾತನೆಯಾಗುತ್ತಿದೆ ಎಂದು 89ರ ಹಿರಿಯ ಮುಖಂಡ ಇಲ್ಲಿ ನಡೆದ ಸಮಾರಂಭವೊಂದರಲ್ಲಿ ಹೇಳಿದರು.
ತನ್ನ ಭೂಪ್ರದೇಶದಲ್ಲಿ ಸಿಂಧ್ ಹೊಂದಿರದ ಭಾರತ ಎಂದಿಗೂ ಸಂಪೂರ್ಣ ದೇಶ ಎಂದು ತನಗನಿಸುವುದಿಲ್ಲ ಎಂದು ಹಿರಿಯ ಬಿಜೆಪಿ ಮುಖಂಡ ಎಲ್.ಕೆ.ಅಡ್ವಾಣಿ ಹೇಳಿದ್ದಾರೆ.







