ಜಲ್ಲಿಕಟ್ಟು:ಸುಪ್ರೀಂ ನಿಷೇಧ ಉಲ್ಲಂಘಿಸುವವರ ವಿರುದ್ಧ ಪೊಲೀಸ್ ಕ್ರಮದ ಎಚ್ಚರಿಕೆ

ಮದುರೈ,ಜ.15: ತಮಿಳುನಾಡಿನಲ್ಲಿ ಪೊಂಗಲ್ ಉತ್ಸವದ ಜೊತೆಗೆ ಗುರುತಿಸಿ ಕೊಂಡಿರುವ ಜಲ್ಲಿಕಟ್ಟು ಕ್ರೀಡೆಯ ಮೇಲಿನ ನಿಷೇಧದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳ ನಡುವೆಯೇ ಪೋಲಿಸರು, ಜಲ್ಲಿಕಟ್ಟನ್ನು ನಿಷೇಧಿಸಿರುವ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮದುರೆ ಜಿಲ್ಲಾ ಎಸ್‌ಪಿ ವಿಜಯೇಂದ್ರ ಎಸ್.ಬಿದರಿ ಅವರು, ಜಿಲ್ಲೆಯಾದ್ಯಂತ ಸುಮಾರು 2,000 ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಪ್ರದೇಶದಲ್ಲಿ ಭದ್ರತೆಯನ್ನೊದಗಿಸಲು ನಾವು ಎಲ್ಲ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ತಿಳಿಸಿದರು.
‘ಮಟ್ಟು ಪೊಂಗಲ್ ’ ಅನ್ನು ಪ್ರಸ್ತಾಪಿಸಿದ ಅವರು, ಕಳೆದ ವರ್ಷವೂ ಜಲ್ಲಿಕಟ್ಟು ಕ್ರೀಡೆಯ ಮೇಲೆ ನಿಷೇಧವಿದ್ದಾಗ ಜನರು ಪೂಜೆಗಾಗಿ ಗೂಳಿಗಳನ್ನು ತಂದಿದ್ದರು. ಜಲ್ಲಿಕಟ್ಟು ಕ್ರೀಡೆಗೆ ಒಯ್ಯುವ ಗೂಳಿಗಳಿಗೆ ಹಗ್ಗ ಕಟ್ಟುವುದಿಲ್ಲ, ಆದರೆ ಪೂಜೆ ಸಲ್ಲಿಸುವ ಗೂಳಿಗಳನ್ನು ಹಗ್ಗದಿಂದ ಕಟ್ಟಲಾಗುತ್ತದೆ. ಆದರೆ ಇಂದು ಕೆಲವು ದುಷ್ಕರ್ಮಿಗಳು ಇಂತಹ 2-3 ಗೂಳಿಗಳ ಹಗ್ಗಗಳನ್ನು ಬಿಚ್ಚಿದ್ದಾರೆ. ರಸ್ತೆಗಳಲ್ಲಿದ್ದ ಈ ಗೂಳಿಗಳನ್ನು ಪೊಲೀಸರು ಸುರಕ್ಷಿತ ಸ್ಥಳಕ್ಕೆ ಸಾಗಿಸಿದ್ದಾರೆ ಎಂದರು.
ಜಲ್ಲಿಕಟ್ಟು ನಡೆಸಲಾಗಿದೆ ಎಂಬ ವರದಿಗಳನ್ನು ಬಿದರಿ ನಿರಾಕರಿಸಿದರು.







