ಮೊಬೈಲ್‌ಗಳಿಂದ ಸಂವೇದನಾ ಶೀಲತೆಯಿಂದ ದೂರ: ಪುತ್ತಿಗೆ ಶ್ರೀ

ಬ್ರಹ್ಮಾವರ, ಜ.15: ಮೊಬೈಲ್, ಇಂಟರ್‌ನೆಟ್ ಕಾರಣದಿಂದ ನಾವು ಭಾವನಾರಹಿತ, ಸಂವೇದನಾ ಶೀಲತೆಯಿಂದ ದೂರವಾಗುತ್ತಿದ್ದೇವೆ. ಇದನ್ನು ಸರಿಪಡಿಸಲು ನಾವು ಚಿಂತನೆ ಮಾಡಬೇಕಾಗಿದೆ ಎಂದು ಉಡುಪಿ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಬ್ರಹ್ಮಾವರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಂದಾಡಿ ಸುಬ್ಬಣ್ಣ ಭಟ್ ಸಭಾಂಗಣದ ಪುಂಡಲೀಕ ಹಾಲಂಬಿ ವೇದಿಕೆಯಲ್ಲಿ ಶನಿವಾರ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಧನೆ ಮಾಡಿದ ಸಂಘಸಂಸ್ಥೆಗಳಿಗೆ ಗೌರವಿಸುವ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಆಶೀರ್ವಚನ ನೀಡಿ ದರು.
ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಮಾತನಾಡಿ, ಕನ್ನಡ ಶಾಲೆ ಹಾಗೂ ಭಾಷೆಯನ್ನು ಉಳಿಸುವ ಕುರಿತು ಜನ ಸಂಘಟಿತರಾಗಬೇಕು. ಇದು ಕೇವಲ ಜನಪ್ರತಿನಿಧಿಗಳಿಂದ ಮಾತ್ರ ಸಾಧ್ಯವಿಲ್ಲ. ಸ್ವಾಭಿಮಾನವನ್ನು ಜಾಗೃತಗೊಳಿಸಿಕೊಂಡು, ಹಿರಿಯರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವತ್ತ ನಾವು ಪ್ರಯತ್ನ ಪಡಬೇಕು ಎಂದರು.
ಈ ಸಂದರ್ಭದಲ್ಲಿ ಬ್ರಹ್ಮಾವರ ರೊಟರಿ ಕ್ಲಬ್, ಗ್ರಾಮೀಣಾಭಿವೃದ್ಧಿ ಯೋಜನೆ, ಕೋಟ ಗೀತಾನಂದ ಫೌಂಡೇಶನ್, ಮೊಗವೀರ ಯುವ ವೇದಿಕೆ, ತಲ್ಲೂರ್ ಫ್ಯಾಮಿಲಿ ಟ್ರಸ್ಟ್, ಕೋಟ ಕಾರಂತ ಸನ್ಮಾನ ಪ್ರಶಸ್ತಿ ಪ್ರತಿಷ್ಟಾನ, ಸಾಯಿಬ್ರಕಟ್ಟೆ ಜನನಿ ಕನ್ನಡ ಸಂಘ, ಹಾರಾಡಿಯ ಭೂಮಿಕಾ ರಂಗ ತಂಡ, ಕೊಕ್ಕರ್ಣೆ ಕ್ರಿಯೇಟಿವ್ ಯೂತ್ ಕ್ಲಬ್, ಬಿರ್ತಿಯ ಅಂಕದ ಮನೆ ಅಂಬೇಡ್ಕರ್ ಯುವಕ ಮಂಡಲ, ಬೀಜಾಡಿಯ ಮಿತ್ರ ಸಂಗಮ, ನೀಲಾವರ ಚೈತನ್ಯ ಯುವಕ ಸಂಘ, ಹೇರೂರು ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ, ಬ್ರಹ್ಮಾವರ ಮಟಪಾಡಿಯ ನಂದಿಕೇಶ್ವರ ಯಕ್ಷಗಾನ ಮಂಡಳಿ, ಕಾರ್ಕಳದ ಮಹಾಲಿಂಗೇಶ್ವರ ಯಕ್ಷಗಾನ ಸಂಘ, ಉಪ್ಪೂರು ಯುವ ವಿಚಾರ ವೇದಿಕೆ, ಅಚ್ಲಾಡಿಯ ಸಂಚಯಿನಿ ಗೆಳೆಯರ ಬಳಗ, ಕೋಡಿಬೆಂಗ್ರೆಯ ಮೈತ್ರಿ ಯುವಕ ಮಂಡಲ, ಕೊಡಂಕೂರು ಫ್ರೆಂಡ್ಸ್ ಸಂಘ ಸಂಸ್ಥೆಗಳನ್ನು ಗೌರವಿಸಲಾಯಿತು.
ಸಮ್ಮೇಳನಾಧ್ಯಕ್ಷ ಪ್ರೊ.ಎಂ.ರಾಮಚಂದ್ರ, ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಮಾಜಿ ಶಾಸಕ ಕೆ.ರಘುಪತಿ ಭಟ್, ಜಿಪಂ ಮಾಜಿ ಅಧ್ಯಕ್ಷ ಭುಜಂಗ ಶೆಟ್ಟಿ, ಉದ್ಯಮಿ ಆನಂದ ಸಿ.ಕುಂದರ್, ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಭಟ್, ಬ್ರಹ್ಮಾವರ ಹೋಬಳಿಯ ಅಧ್ಯಕ್ಷ ಮೋಹನ್ ಉಡುಪ ಹಂದಾಡಿ, ಹಿರಿಯ ನಾಗರಿಕ ವೇದಿಕೆಯ ಭಾಸ್ಕರ ರೈ ಉಪಸ್ಥಿತರಿದ್ದರು. ಆರೂರು ತಿಮ್ಮಪ್ಪ ಶೆಟ್ಟಿ ಕಾರ್ಯಕ್ರಮ ಸ್ವಾಗತಿಸಿ ನಿರೂಪಿಸಿದರು.





