ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವ ಪಿ ಎಫ್ ಐ ಕಾರ್ಯಕ್ರಮ ಶ್ಲಾಘನೀಯ : ಲೋಬೋ
ಪಿಎಫ್‌ಐನಿಂದ 180 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ

ಮಂಗಳೂರು, ಜ.15: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ವತಿಯಿಂದ 180 ಮಂದಿ ವಿದ್ಯಾರ್ಥಿಗಳಿಗೆ 12.93 ಲಕ್ಷ ರೂ. ವಿದ್ಯಾರ್ಥಿ ವೇತನವನ್ನು ಇಂದು ನಗರದ ಜಂಇಯ್ಯತುಲ್ ಫಲಾಹ್ ಸಭಾಂಗಣದಲ್ಲಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಜೆ.ಆರ್.ಲೋಬೊ , ಜ್ಞಾನ ಮತ್ತು ವ್ಯಕ್ತಿತ್ವ ವಿಕಸನ ಜೀವನದಲ್ಲಿ ಮುಖ್ಯ ಪಾತ್ರವನ್ನು ವಹಿಸಲಿದ್ದು, ಈ ಎರಡೂ ಅಂಶಗಳಿಂದ ಸಾಮಾಜಿಕ ಸಮಸ್ಯೆಯನ್ನು ಎದರಿಸುವುದರೊಂದಿಗೆ ಬದುಕು ಕಟ್ಟಿಕೊಳ್ಳಲು ಸಾಧ್ಯವಿದೆ ಎಂದರು.
ಪಿಎಫ್‌ಐ ವತಿಯಿಂದ ವಿತರಿಸಲಾಗಿರುವ ವಿದ್ಯಾರ್ಥಿ ವೇತನವನ್ನು ಪಡೆದಿರುವ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೇರಿದಾಗ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಮಾಡುವ ಮೂಲಕ ಪಿಎಫ್‌ಐಗೆ ಋಣಿಯಾಗಿರಬೇಕು. ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಸೇವಾ ಮನೋಭಾವವನ್ನು ವೃದ್ಧಿಸಿಕೊಳ್ಳಬೇಕು ಎಂದರು.
ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಆಧುನಿಕ ಜಗತ್ತಿನಲ್ಲಿ ಲೌಕಿಕ ವಿದ್ಯಾಭ್ಯಾಸದ ಜೊತೆಗೆ ಧಾರ್ಮಿಕ ವಿದ್ಯಾಭ್ಯಾಸವೂ ಅಗತ್ಯವಾಗಿದೆ. ಆದ್ದರಿಂದ ಹೆತ್ತವರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಒತ್ತು ನೀಡಬೇಕು. ವಿದ್ಯಾರ್ಥಿಗಳ ಜ್ಞಾನವನ್ನು ವೃದ್ಧಿಕೊಳ್ಳಲು ಸಹಕಾರ ನೀಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪಿಎಫ್‌ಐ ರಾಜ್ಯಾಧ್ಯಕ್ಷ ಶಾಫಿ ಬೆಳ್ಳಾರೆ, ಶಿಕ್ಷಣ ಕೇವಲ ಅಂಕ ಗಳಿಸುವಿಕೆ ಹಾಗೂ ಉದ್ಯೋಗಕ್ಕೆ ಸೀಮಿತವಾಗಬಾರದು. ಶಿಕ್ಷಣ ಪಡೆದು ಉನ್ನತ ಸ್ಥಾನವನ್ನು ಅಲಂಕರಿಸುವ ವಿದ್ಯಾರ್ಥಿಗಳು ಸಮುದಾಯದ ಇತರ ಆರ್ಥಿಕ ಸಂಕಷ್ಟದಲ್ಲಿರುವವರಿಗೆ ನೆರವಾಗಬೇಕು. ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಕಳೆದ ಹಲವು ವರ್ಷಗಳಿಂದ ಪಿಎಫ್‌ಐ ರಾಷ್ಟ್ರಾದ್ಯಂತ ಅಲ್ಪಸಂಖ್ಯಾಕತರ ಪರವಾಗಿ ಹಲವು ಕೆಲಸಗಳನ್ನು ಮಾಡಿದೆ. ಅಲ್ಪಸಂಖ್ಯಾತರಿಗೆ ಇರುವ ಸರಕಾರಿ ಯೋಜನೆಗಳ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದೆ. ಬಡವರ, ಅನ್ಯಾಯಕ್ಕೊಳಗಾದವರ ಮತ್ತು ಶೋಷಿತರ ಧ್ವನಿಯಾಗಿ ಪಿಎಫ್‌ಐ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಕಾರ್ಪೊರೇಟರ್ ಅಯಾಝ್ ಕೃಷ್ಣಾಪುರ, ಪಿಎಫ್‌ಐನ ದ.ಕ. ಜಿಲ್ಲಾಧ್ಯಕ್ಷ ಹನೀಫ್ ಕಾಟಿಪಳ್ಳ ಉಪಸ್ಥಿತರಿದ್ದರು.







