ಪೊಲೀಸರ ಹೆಸರಲ್ಲಿ ಸುಲಿಗೆ ಯತ್ನ
ಬೈಂದೂರು, ಜ.15: ಬೈಕಿನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ಸುಲಿಗೆಗೆ ಯತ್ನಿಸಿ ಪರಾರಿಯಾಗಿರುವ ಘಟನೆ ಕಾಲ್ತೋಡು ರಸ್ತೆಯಲ್ಲಿ ಜ.14ರಂದು ಸಂಜೆ 4ಗಂಟೆ ಸುಮಾರಿಗೆ ನಡೆದಿದೆ.
ಕಂಬದಕೋಣೆ ಗ್ರಾಮದ ತಿಮ್ಮಪ್ಪ ದೇವಾಡಿಗ ಎಂಬವರ ಮಗ ಗಣೇಶ್ ದೇವಾಡಿಗ(28) ಎಂಬವರು ಶೇಡಿಗುಡ್ಡೆಯಲ್ಲಿರುವ ಸ್ನೇಹಿತನ ಮನೆಗೆ ಕಾಲ್ತೋಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂದಿನಿಂದ ಕೆಎ 19 ವಿ 8275 ನಂಬರಿನ ಬೈಕಿನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ತಾನು ಬೈಂದೂರು ಠಾಣೆಯ ಪೊಲೀಸು ಎಂದು ಹೇಳಿ ಗಣೇಶ್‌ಗೆ ಕೈಯಿಂದ ಹೊಡೆದು ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿಯಲು ಪ್ರಯತ್ನಿಸಿದನು.
ಆಗ ಗಣೇಶ್ ಬೊಬ್ಬೆ ಹೊಡೆದಿದ್ದು, ಅದನ್ನು ಕೇಳಿದ ಗಣೇಶ್ ಗೆಳೆಯರು ಅಲ್ಲಿಗೆ ಬರುವುದನ್ನು ನೋಡಿದ ಅಪರಿಚಿತ ವ್ಯಕ್ತಿ ಕಾಲ್ತೋಡು ರಸ್ತೆಯಲ್ಲಿ ಬೈಕ್‌ನಲ್ಲಿ ಪರಾರಿಯಾದನು. ಕಪ್ಪುಮೈಬಣ್ಣ, ದೃಢಕಾಯ ಶರೀರ, 25 ರಿಂದ 30ವರ್ಷ ವಯಸ್ಸಿನ ಆ ವ್ಯಕ್ತಿ, ತಿಳಿ ಹಳದಿ ಬಣ್ಣದ ಶರ್ಟ್ ಹಾಗೂ ಕಂದು ಬಣ್ಣದ ಪ್ಯಾಂಚ್ ಧರಿಸಿದ್ದನು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





